ಮನೋರಂಜನೆ

ಸಿನೆಮಾ ಮಂದಿಯ ಮನೆ ಮೇಲಿನ ಐಟಿ ದಾಳಿಗೆ ಏನು ಕಾರಣ? ತಜ್ಞರು ಹೇಳುವುದೇನು?

Pinterest LinkedIn Tumblr


ಬೆಂಗಳೂರು: ಸ್ಯಾಂಡಲ್ವುಡ್​ನ ಅನೇಕ ಭದ್ರಬಾಹುಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಚ್ಚರಿ ಮೂಡಿಸಿದ್ದಾರೆ. 200ಕ್ಕೂ ಹೆಚ್ಚು ಅಧಿಕಾರಿಗಳು 25ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಸ್ಯಾಂಡಲ್ವುಡ್​ಗೆ ದಿಗ್ಭ್ರಮೆ ಮೂಡಿಸಿದ್ದಾರೆ. ಇದು ಚಂದನವನದ ಚರಿತ್ರೆಯಲ್ಲೇ ನಡೆದ ಅತಿ ದೊಡ್ಡ ಮತ್ತು ವ್ಯಾಪಕ ಐಟಿ ದಾಳಿಯಾಗಿದೆ. ಕೆಜಿಎಫ್ ಸಿನಿಮಾ ಇಡೀ ಭಾರತದಲ್ಲಿ ಸದ್ದು ಮಾಡಿ ನೂರು ಕೋಟಿ ರೂಪಾಯಿಗೂ ಹೆಚ್ಚು ಹಣ ಮಾಡಿದ್ದರಿಂದ ಐಟಿ ಇಲಾಖೆಯ ಕಣ್ಣು ಬಿದ್ದಿರಬಹುದಾ ಎಂಬ ಅನುಮಾನಗಳು ಹುಟ್ಟುವುದು ಸಹಜ. ಆದರೆ, ಐಟಿ ರೇಡ್​ಗೆ ಇದೇ ಕಾರಣವಲ್ಲ. ಸ್ಯಾಂಡಲ್ವುಡ್​ನಲ್ಲಿ ಹರಿದಾಡುತ್ತಿರುವ ಹಣದ ಮೂಲ ಹುಡುಕಲು ಐಟಿ ಇಲಾಖೆಯು ಈ ದಾಳಿಗಳನ್ನು ಮಾಡಿರುವುದು ತಿಳಿದುಬಂದಿದೆ.

ಆದಾಯ ತೆರಿಗೆ ಇಲಾಖೆಯು ಸಾಮಾನ್ಯವಾಗಿ ದಾಳಿಗೆ ದಿಢೀರ್ ನಿರ್ಧಾರ ಕೈಗೊಳ್ಳುವುದಿಲ್ಲ. ಸಾಕಷ್ಟು ದಿನಗಳ ಮುಂಚೆಯೇ ಚೆನ್ನಾಗಿ ಹೋಮ್ ವರ್ಕ್ ಮಾಡಿಕೊಳ್ಳುತ್ತದೆ. ಸಲ್ಲಿಸಲಾದ ದಾಖಲೆಗಳಿಗೆ ಆದಾಯವು ಹೊಂದಿಕೆಯಾಗುತ್ತಿಲ್ಲವೆಂದು ಅನಿಸಿದಲ್ಲಿ ಐಟಿ ಇಲಾಖೆಯು ಎಲ್ಲಾ ರೀತಿಯಲ್ಲಿ ಹಣದ ವಹಿವಾಟಿನ ಮೇಲೆ ನಿಗಾ ಇಡುತ್ತದೆ. ದೊಡ್ಡ ಪ್ರಮಾಣದಲ್ಲಿ ವಂಚನೆಯಾಗಿರುವುದು ಕಂಡುಬಂದಲ್ಲಿ ಬಹಳ ವ್ಯವಸ್ಥಿತವಾಗಿ ದಾಳಿಯನ್ನು ಯೋಜಿಸಿ ಕಾರ್ಯಗತಗೊಳಿಸುತ್ತದೆ. ಸ್ಯಾಂಡಲ್ವುಡ್​ನಲ್ಲಿ ಗುರುವಾರ ಆಗಿದ್ದೂ ಇದೆಯೇ.

ಸ್ಯಾಂಡಲ್ವುಡ್​ನಲ್ಲಿ ವರ್ಷಕ್ಕೆ ಬರೋಬ್ಬರಿ 200 ಸಿನಿಮಾಗಳು ನಿರ್ಮಾಣಗೊಳ್ಳುತ್ತವೆ. ಇಲ್ಲಿ ಬ್ಲ್ಯಾಕ್ ಅಂಡ್ ವೈಟ್ ದಂಧೆ ನಡೆಯುತ್ತದೆಂಬ ಆರೋಪಗಳಿವೆ. ಆದರೆ, ಸ್ಯಾಂಡಲ್ವುಡ್ ಹಣ ಎಲ್ಲಿಂದ ಬರುತ್ತದೆ ಎಂಬುದನ್ನು ಪತ್ತೆ ಹಚ್ಚಲು ಐಟಿ ಈ ರೇಡ್ ನಡೆಸಿರಬಹುದೆಂದು ಕೆಲ ಚಾರ್ಟರ್ಡ್ ಅಕೌಂಟೆಂಟ್​ಗಳು ಅಭಿಪ್ರಾಯಪಟ್ಟಿದ್ದಾರೆ. ಹಣ ಬರಲು ಎರಡು ಮೂಲಗಳು ಸಾಮಾನ್ಯ. ಅದರಲ್ಲಿ ಒಂದು ಬ್ಯಾಂಕಾದರೆ, ಮತ್ತೊಂದು ಖಾಸಗಿ ಫೈನಾನ್ಷಿಯರ್​ಗಳು. ಸಿನಿಮಾಗಳಿಗೆ ಬ್ಯಾಂಕ್​ನವರು ಲೋನ್ ಕೊಡುವುದು ಕಡಿಮೆ. ಖಾಸಗಿ ಫೈನಾನ್ಷಿಯರ್​ಗಳಿಂದಲೇ ಸಿನಿಮಾಗೆ ಬಹುತೇಕ ಹಣ ಸಪ್ಲೈ ಆಗುತ್ತದೆ. ಹೀಗಾಗಿ, ಸ್ಯಾಂಡಲ್ವುಡ್​ನ ಘಟಾನುಘಟಿಗಳ ಮೇಲೆ ದಾಳಿ ಮಾಡಿ ಆ ಮೂಲಕ ಈ ಖಾಸಗಿ ಫೈನಾನ್ಷಿಯರ್​ಗಳ ಜಾಡನ್ನು ಹಿಡಿದು ತೆರಿಗೆ ವಂಚನೆಯ ಆಳ ಪತ್ತೆ ಹಚ್ಚುವುದು ಐಟಿಯ ಉದ್ದೇಶವಾಗಿರಬಹುದು ಎಂದು ಲೆಕ್ಕ ಪರಿಶೋಧಕರು ಅಂದಾಜು ಮಾಡಿದ್ದಾರೆ.

ಸ್ಯಾಂಡಲ್ವುಡ್​ನ ನಿರ್ಮಾಪಕರು, ನಟರು ಮೊದಲಾದವರಿಗೆ ತೆರಿಗೆಯ ಬಗ್ಗೆ ಜ್ಞಾನ ಕಡಿಮೆಯೇ. ಯಾವ ರೀತಿ ತೆರಿಗೆ ಪಾವತಿಸಬೇಕು, ಹೇಗೆ ಪಾವತಿಸಬೇಕು ಎಂಬುದು ಇವರಿಗೆ ಗೊತ್ತಿರುವುದಿಲ್ಲ. ಅವರಿಗೆ ಸರಿಯಾದ ಮಾರ್ಗದರ್ಶನವೂ ಸಿಕ್ಕುವುದಿಲ್ಲ. ಹಿಂದಿನಿಂದ ಬಂದ ರೀತಿಯಲ್ಲೇ ಇವರು ಹಣದ ವ್ಯವಹಾರ ಮಾಡಿಕೊಂಡು ಹೋಗುತ್ತಾರೆ ಎಂದು ಖ್ಯಾತ ಚಾರ್ಟರ್ಡ್ ಅಕೌಂಟೆಂಟ್ ಬಿ.ಎನ್. ಮೋಹನ್ ಕುಮಾರ್ ಹೇಳುತ್ತಾರೆ.

Comments are closed.