ಮನೋರಂಜನೆ

ತಮ್ಮ ಆಪ್ತರಿಗೆ ಸಿಹಿಸುದ್ದಿ ಕೊಟ್ಟ ಪ್ರಕಾಶ್​​ ರೈ ! ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ

Pinterest LinkedIn Tumblr

ಬೆಂಗಳೂರು: ಇತ್ತೀಚೆಗೆ ಜಸ್ಟ್​​ ಆಸ್ಕಿಂಗ್ ಅಭಿಯಾನದ ಮೂಲಕ ಸದಾ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಪ್ರಶ್ನಿಸುವ ಬಹುಭಾಷ ನಟ ಪ್ರಕಾಶ್​​ ರೈ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ಧಾರೆ. ತಮ್ಮ ಆಪ್ತರಿಗೆ ಹೊಸ ವರ್ಷದ ಶುಭಾಶಯ ಕೋರಿದ ಪ್ರಕಾಶ್​​ ರೈ, ಪಕ್ಷೇತರ ಅಭ್ಯರ್ಥಿಯಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿಯಲು ನಿರ್ಧರಿಸಿದ್ದೇನೆ. ನನ್ನ ಮೇಲೆ ಹೆಚ್ಚು ಜವಾಬ್ದಾರಿಗಳಿವೆ. ಸಂಸತ್​​ನಲ್ಲಿ ಜನರ ಪರವಾಗಿ ಧ್ವನಿಯೆತ್ತಲು ಬೆಂಬಲಿಸಿ ಎಂದು ಕೇಳಿಕೊಂಡಿದ್ಧಾರೆ.

ನನ್ನ ಸ್ಪರ್ಧೆ ಬಗ್ಗೆ ನಿರ್ಧಾರ ಮಾಡಲಾಗಿದೆ. ಈ ಕುರಿತು ಈಗಾಗಲೇ ನಮ್ಮ ಆಪ್ತರ ಬಳಿ ಚರ್ಚಿಸಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ನಿಲ್ಲಲು ಎಲ್ಲಾ ರೀತಿಯ ತಯಾರಿ ನಡೆಸಲಾಗುತ್ತಿದೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಹಾಗೆಯೇ ಇನ್ನುಂದೆ ಸಂಸತ್​ನಲ್ಲಿಯೂ ಜಸ್ಟ್​​ ಆಸ್ಕಿಂಗ್​​ ಅಭಿಯಾನ ಶುರುವಾಗಲಿದೆ. ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದೇನೆ ಎನ್ನುವುದರ ಕುರಿತು ಸದ್ಯದಲ್ಲೇ ಮಾಹಿತಿ ನೀಡಲಿದ್ದೇನೆ ಎಂದು ಟ್ವೀಟ್ ಮೂಲಕ ತಮ್ಮ ಆಪ್ತರಿಗೆ ಸಿಹಿಸುದ್ದಿ ನೀಡಿದ್ದಾರೆ ಎನ್ನಲಾಗಿದೆ.

ಭಾರತ ಚಿತ್ರರಂದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಪ್ರಕಾಶ್​​ ರೈ ಅವರು, ವಿಲನ್​​ ಪಾತ್ರದ ಮೂಲಕವೇ ಜನರ ಮನದಲ್ಲಿ ನೆಲೆಸಿದವರು. ಕಳೆದ ವರ್ಷ ಸಾಮಾಜಿಕ ಹೋರಾಟಗಾರ್ತಿ, ಪತ್ರಕರ್ತೆ ಗೌರಿ ಲಂಕೇಶ್​​ ಕಿಡಿಗೇಡಿಗಳ ಗುಂಡೇಟಿಗೆ ಬಲಿಯಾದ ನಂತರ ಪ್ರಧಾನಿ ನರೇಂದ್ರ ಮೋದಿಯನ್ನು ರೈ ಪ್ರಶ್ನಿಸಿದ್ದರು. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿಗೂ, ಗೌರಿ ಸಾವಿಗೂ ಏನು ಸಂಬಂಧ? ಎಂದು ಪ್ರಕಾಶ್​​ ರೈ ವಿರುದ್ಧ ಕಿಡಿಕಾರಿದ್ದರು.

ಬಳಿಕ ಮತ್ತಷ್ಟು ಸಕ್ರಿಯರಾದ ಪ್ರಕಾಶ್​ ರೈ ಜಸ್ಟ್​​ ಆಸ್ಕಿಂಗ್​​ ಫೌಂಡೇಷನ್​​ ಎಂದು ಸಂಸ್ಥೆ ಶುರು ಮಾಡಿದರು. ಈ ಮೂಲಕ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಪ್ರಶ್ನಿಸುವ ಹಾಗೂ ಕೆಲವು ಸಾಮಾಜಿಕ ಹೋರಾಟಗಳಿಗೆ ತಮ್ಮದೇ ರೀತಿಯಲ್ಲಿ ಧ್ವನಿಗೂಡಿಸುವ ಕೆಲಸಕ್ಕೆ ಮುಂದಾದರು. ಕಳೆದ ಕರ್ನಾಟಕ ವಿಧಾನಸಭಾ ಸಂದರ್ಭದಲ್ಲಿಯೂ ಪ್ರಗತಿಪ್ರರ ಸಂಘಟನೆಗಳೊಂದಿಗೆ ಸೇರಿಕೊಂಡು ಗುಜರಾತ್​​ನ ದಲಿತ ಹೋರಾಟಗಾರ, ಶಾಸಕ ಜಿಗ್ನೇಶ್​ ಮೇವಾನಿ ಹಾಗೂ ಪ್ರಕಾಶ್​​ ರೈ ಬಿಜೆಪಿ ವಿರುದ್ಧ ಸಾಲುಸಾಲು ಕಾರ್ಯಕ್ರಮಗಳನ್ನು ಮಾಡಿದರು.

ಪ್ರಕಾಶ್​​ ಸಾಮಾಜಿಕ ಹೋರಾಟಗಳಲ್ಲಿ ಭಾರೀ ಸಕ್ರಿಯರಾಗಿದ್ದಾರೆ. ನಾನು ಹೋರಾಟದ ಮೂಲಕವೇ ಸರ್ಕಾರವನ್ನು ಪ್ರಶ್ನಿಸುತ್ತೇನೆ ಎನ್ನುತ್ತಿದ್ದ ಪ್ರಕಾಶ್​ ರೈ ಅವರು ದಿಢೀರ್​​ ತಮ್ಮ ನಿಲುವು ಬದಲಾಯಿಸಿದ್ದಾರೆ. ನಾನು ಚುನಾವಣೆ ರಾಜಕೀಯಕ್ಕೆ ಹೋಗುತ್ತಿಲ್ಲ ಎಂದು ಹೇಳುತ್ತಿದ್ದ ಇವರು ಈಗ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತೆಲಂಗಾಣದಲ್ಲಿ ಒಂದಷ್ಟು ಹಳ್ಳಿಗಳು, ತಮಿಳುನಾಡಿನಲ್ಲಿಯೂ ಒಂದಷ್ಟು ಗ್ರಾಮಗಳು, ಹಾಗೆಯೇ ಕರ್ನಾಟಕದಲ್ಲಿ ಹತ್ತಕ್ಕೂ ಹೆಚ್ಚು ಶಾಲೆಗಳನ್ನು ದತ್ತು ತೆಗೆದುಕೊಂಡಿರುವ ಪ್ರಕಾಶ್​ ರೈ ಅವರು, ಎಲ್ಲಿಂದ ಸ್ಪರ್ಧೆ?ಮಾಡುತ್ತರೆ ಎನ್ನುವುದು ಮಾತ್ರು ಕುತೂಹಲಕರ ಸಂಗತಿ.

Comments are closed.