ಮನೋರಂಜನೆ

ಕೆಜಿಎಫ್ ಚಿತ್ರದ ಅರೆಹುಚ್ಚ ಪಾತ್ರ ಮಾಡಿದ ಸಹನಟ ಲಕ್ಷ್ಮೀಪತಿ ನಿಧನ!

Pinterest LinkedIn Tumblr


ಬೆಂಗಳೂರು: ಕೆಜಿಎಫ್ ನಿರೀಕ್ಷೆಗೂ ಮೀರಿದ ಗೆಲುವನ್ನು ಸಾಧಿಸಿದ್ದು, ಸಿನಿಮಾ ಲೋಕದಲ್ಲಿ ಅನೇಕ ದಾಖಲೆಗಳನ್ನು ಧೂಳೀಪಟ ಮಾಡಿರೋದರ ಬೆನ್ನಲ್ಲೇ ಕೆಜಿಎಫ್ ಅಭಿಮಾನಿಗಳಿಗೆ ಬೇಸರ ಮೂಡುವಂತಾ ಸುದ್ದಿ ಹೊರಬಿದ್ದಿದೆ. ಕೆಜಿಎಫ್ ಚಿತ್ರದಲ್ಲಿ ಕಾರ್ಮಿಕರ ನೋವನ್ನು ಬಿಚ್ಚಿಟ್ಟ ಕಲಾವಿದರೊಬ್ಬರು ತನ್ನ ಪಾತ್ರವನ್ನು ತೆರೆಯ ಮೇಲೆ ನೋಡಿ ಸಂಭ್ರಮಿಸುವ ಮೊದಲೇ ಕೊನೆಯುಸಿರೆಳೆದಿದ್ದಾರೆ.

ನಿತ್ಯ ನೊಂದ ಕಾರ್ಮಿಕರ ಎದುರು ಭರವಸೆಯ ಕಥೆಗಳನ್ನು ಹೇಳಿ ಕ್ಷಣಕಾಲ ದುಃಖ ಮರೆಯುವಂತೆ ಮಾಡುವ ಹುಚ್ಚನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಲಕ್ಷ್ಮೀಪತಿ ಅವರು ಚಿತ್ರ ತೆರೆಕಾಣುವ ಮುನ್ನವೇ ಮೃತಪಟ್ಟಿದ್ದಾರೆ. ನಿಧನದ ಸುದ್ದಿಯನ್ನು ಕೆಜಿಎಫ್ ತಂಡವು ಇದೀಗ ಬಹಿರಂಗಪಡಿಸಿದೆ.

ಕೆಜಿಎಫ್ ಚಿತ್ರದ ಛಾಯಾಗ್ರಾಹಕ ಭುವನ್ ಗೌಡ ಅವರು, ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಲಕ್ಷ್ಮೀಪತಿ ನಿಧನದ ಸುದ್ದಿ ಹಾಗೂ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಚಿತ್ರದಲ್ಲಿ ಹುಚ್ಚನ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ ಲಕ್ಷ್ಮೀಪತಿ ಅವರು ನಿಧನರಾಗಿದ್ದಾರೆ. ಜಾಂಡೀಸ್ ನಿಂದ ಬಳಲುತ್ತಿದ್ದ ಅವರು ಚಿತ್ರ ತೆರೆಕಾಣುವುದಕ್ಕೂ ಮುನ್ನವೇ ನಮ್ಮನ್ನು ಅಗಲಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ.

ಕೆಜಿಎಫ್ ಚಿತ್ರದಲ್ಲಿ ನರಾಚಿ ಕಾರ್ಖಾನೆಯ ಕಾರ್ಮಿಕರ ದುಗುಡ ದುಮ್ಮಾನಗಳನ್ನು ಲಕ್ಷ್ಮೀಪತಿ ವಿವರಿಸುತ್ತಿರುವ ದೃಶ್ಯ ಈಗ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಲಕ್ಷ್ಮೀಪತಿ ಅವರು ತಮ್ಮ ಪಾತ್ರದಲ್ಲಿ, ‘ಸುಡುವ ಬೆಂಕಿಯಲ್ಲಿ ಸುರಿವ ಮಳೆಯಂತೆ, ಮೃತ್ಯುವಿನ ಮನೆಯಲ್ಲಿ ಮೃತ್ಯುಂಜಯನಂತೆ, ದೌಲತ್ತಿನೆದುರು ದಂಗೆಯಾ ರೂಪದಲ್ಲಿ, ದಶಕಂಠನೆದುರು ಧನುಜಾರಿ ರೀತಿಯಲ್ಲಿ, ಉರಿವ ಜಮದಗ್ನಿಯ ಬೆದರಿಸಿ, ಸರ್ವವೂ ತಾನೆಂದು ಪರಮಾತ್ಮನನ್ನು ಪ್ರಶ್ನಿಸಿ, ಸಿಡಿಲಂತೆ ಸಿಡಿದ ಧೀರನೊಬ್ಬನ ಕಥೆ’ ಎನ್ನುತ್ತಾ ಪಾತ್ರಕ್ಕೆ ಜೀವ ತುಂಬಿದ್ದರು.

ಭುವನ್ ಗೌಡ ಅವರು ಹಾಕಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಶೇರ್ ಮಾಡಿಕೊಂಡು ಕಲಾವಿದನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಬೇಡಿಕೊಂಡಿದ್ದಾರೆ. ಇತ್ತ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಕೂಡ ಲಕ್ಷ್ಮೀಪತಿ ಅವರ ವೀಡಿಯೋ ಟ್ವೀಟ್ ಮಾಡುವ ಮೂಲಕ ನಮನ ಸಲ್ಲಿಸಿದ್ದಾರೆ.

Comments are closed.