ಮನೋರಂಜನೆ

ಮೀಟೂ ಖ್ಯಾತಿಯ ಶೃತಿ ಹರಿಹರನ್ ನಟನೆಯ ನಾತಿಚರಾಮಿ ಚಿತ್ರ ವಿಮರ್ಶೆ!

Pinterest LinkedIn Tumblr


ಬೆಂಗಳೂರು: ಒಬ್ಬಳನ್ನು ಬಾಧಿಸುವ ಗಂಡನಿಲ್ಲದ ನೀರವ. ಅವನ ನೆನಪಲ್ಲಿಯೇ ಬದುಕಿ ಬಿಡುವ ಗಟ್ಟಿ ನಿರ್ಧಾರಕ್ಕೆ ನೇತುಬೀಳೋ ದೈಹಿಕ ವಾಂಛೆ. ಇನ್ನೊಬ್ಬಳಿಗೆ ಗಂಡ ಇದ್ದರೂ ಆತನ ಪಾಲಿಗವಳು ಸುಖದ ಸರಕು ಮಾತ್ರ. ಆಕೆಯ ಪಾಲಿಗೆ ದೈಹಿಕ ಬಯಕೆ ನೀಗಿಕೊಂಡೂ ಆತ್ಮಸಾಂಗತ್ಯವಿಲ್ಲದ ನಿತ್ಯ ಸೂತಕ. ಮತ್ತೊಬ್ಬಾಕೆ ಬಂದದ್ದನ್ನು ಬಂದಂತೆಯೇ ಸ್ವೀಕರಿಸೋ ಸ್ಥಿತಪ್ರಜ್ಞೆಯುಳ್ಳ ಗಟ್ಟಿಗಿತ್ತಿ. ಈ ಮೂರು ಪಾತ್ರಗಳ ಮೂಲಕವೇ ಕಟ್ಟುಪಾಡುಗಳೊಳಗೆ ಅದೆಷ್ಟೋ ಮಹಿಳೆಯರು ಕಟ್ಟಿಟ್ಟುಕೊಂಡ ಭಾವಗಳಿಗೆ ಬಿಂದಾಸ್ ಆಗಿಯೇ ಮಾತು ಕೊಟ್ಟಿರೋ ಚಿತ್ರ ನಾತಿಚರಾಮಿ. ಈ ಮೂಲಕ ನಿರ್ದೇಶಕ ಮಂಸೋರೆಯವರ ಎರಡನೇ ಮ್ಯಾಜಿಕ್ಕು ಮನಸೂರೆಗೊಂಡಿದೆ.

ಲೈಂಗಿಕ ತುಮುಲಗಳಿಗೂ ಮಡಿಬಟ್ಟೆ ಹೊದ್ದು ಬದುಕೋ ವಾತಾವರಣ ಈ ನೆಲದ್ದು. ಅದರಲ್ಲಿಯೂ ಹೆಣ್ಣಿನ ಪಾಲಿಗೆ ಇಂಥಾ ದೈಹಿಕ ವಾಂಛೆಗಳನ್ನು ಅಭಿವ್ಯಕ್ತಗೊಳಿಸೋದೇ ನಿಷಿದ್ಧ. ಆದರೆ ಮಂಸೋರೆ ನಾತಿಚರಾಮಿ ಮೂಲಕ ಮಡಿವಂತಿಕೆಯೊಳಗೇ ಅವಿತಿರೋ ಕುತೂಹಲ, ಹತ್ತಿಕ್ಕಲಾರದ ತಲ್ಲಣಗಳನ್ನು ಬಿಡುಬೀಸಾಗಿ ಹೇಳಿದ್ದಾರೆ. ಇದಕ್ಕೆ ಸಂಧ್ಯಾರಾಣಿಯವರ ಕಥೆ ಮತ್ತು ಸಂಭಾಷಣೆ ಸಖತ್ತಾಗಿಯೇ ಸಾಥ್ ನೀಡಿದೆ.

ಮಂಸೋರೆ ಮೂರು ಸ್ಥರಗಳ ಮೂರು ಮಹಿಳಾ ಪಾತ್ರಗಳ ಮೂಲಕ ಬೇರೆಯದ್ದೇ ಒಂದು ಮನೋಲೋಕವನ್ನು ಕಟ್ಟಿ ಕೊಟ್ಟಿದ್ದಾರೆ.

ಶ್ರುತಿ ಹರಿಹರನ್ ಗಂಡನನ್ನು ಕಳೆದುಕೊಂಡು ಆತನ ನೆನಪಲ್ಲಿಯೇ ಬೇಯುತ್ತಾ, ನೆನಪಿನಂತೆಯೇ ಕಾಡುವ ದೈಹಿಕ ತುಮುಲವನ್ನು ಹತ್ತಿಕ್ಕಲಾರದೆ ಒದ್ದಾಡೋ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಪಾತ್ರದ ಮೂಲಕವೇ ಅವರೊಳಗಿನ ಪರಿಪೂರ್ಣ ನಟಿಯ ದರ್ಶನವೂ ಆಗುತ್ತದೆ. ಇನ್ನು ಶರಣ್ಯ ಗಂಡ ಇದ್ದರೂ ಮಾನಸಿಕ ನೆಮ್ಮದಿಯಿಲ್ಲದ ಹೆಣ್ಣಿನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಶ್ವೇತಾ ಬಂದದ್ದನ್ನು ಬಂದಂತೆಯೇ ಸ್ವೀಕರಿಸೋ ಹೆಂಗಸಾಗಿ ನಟಿಸಿದ್ದಾರೆ. ಈ ಮೂರೂ ಪಾತ್ರಗಳು ಬೆಚ್ಚಿ ಬೀಳಿಸುತ್ತಾ ಬೆರಗಾಗಿಸುತ್ತಾ ಬದುಕಿನ ಸೂಕ್ಷ್ಮಗಳನ್ನು ಅನಾವರಣಗೊಳಿಸುತ್ತಾ ಸಾಗುತ್ತವೆ.

ಇಂಥಾ ಸೂಕ್ಷ್ಮ ವಿಚಾರ ಹೇಳುವಾಗ ಕೊಂಚ ಸಿನಿಮಾ ಕುಸುರಿಯನ್ನು ಮರೆತರೂ ದೃಶ್ಯ ಪೇಲವವಾಗುತ್ತದೆ. ಆದರೆ ಮಂಸೋರೆ ಅಂಥಾ ಯಾವ ಅವಘಡವೂ ಆಗದಂತೆ ಇಡೀ ಚಿತ್ರವನ್ನು ರೂಪಿಸಿದ್ದಾರೆ. ಸ್ವತಃ ಕಲಾ ನಿರ್ದೇಶಕರೂ ಆಗಿರೋ ಮಂಸೋರೆ ಅದನ್ನೂ ಪಾತ್ರವಾಗಿಸಿದ್ದಾರೆ. ಬಟ್ಟೆಗಳೂ ಇಲ್ಲಿ ಏನನ್ನೋ ಧ್ವನಿಸುತ್ತವೆ. ಮೌನವೂ ಕೂಡಾ ಮಾತಿಗಿಂತ ತೀವ್ರವಾಗಿ ತಟ್ಟುತ್ತದೆ. ಇದಕ್ಕೆ ಬಿಂದುಮಾಲಿನಿಯವರ ಸಂಗೀತ ಸಾಥ್ ನೀಡುತ್ತದೆ.

ಒಟ್ಟಾರೆಯಾಗಿ ಹೊಸಾ ಬಗೆಯಲ್ಲಿ, ಎಲ್ಲ ಸಿದ್ಧ ಸೂತ್ರಗಳನ್ನು ಮೀರಿದ ಚಿತ್ರವೊಂದನ್ನು ಕಟ್ಟಿ ಕೊಡುವಲ್ಲಿ ಮಂಸೋರೆ ಯಶ ಕಂಡಿದ್ದಾರೆ. ಬಾಲಾಜಿ ಮನೋಹರ್, ಪೂರ್ಣಚಂದ್ರ ಮೈಸೂರು, ಗೋಪಾಲ ದೇಶಪಾಂಡೆ, ಕಲಾಗಂಗೋತ್ರಿ ಮಂಜು ಸೇರಿದಂತೆ ಎಲ್ಲ ಕಲಾವಿದರೂ ತಂತಮ್ಮ ಪಾತ್ರಗಳನ್ನು ಆವಾಹಿಸಿಕೊಂಡು ನಟಿಸಿದ್ದಾರೆ. ಮಾನಸಾ ಮುಸ್ತಫಾ ಕಾಸ್ಟ್ಯೂಮಿನಲ್ಲಿಯೂ ಕಲಾತ್ಮಕ ಕೈಚಳಕ ತೋರಿಸಿದ್ದಾರೆ. ಸಿದ್ಧ ಸೂತ್ರಗಳಾಚೆಗಿನ ಈ ಚಿತ್ರ ಪ್ರೇಕ್ಷಕರಿಗೆ ಭಿನ್ನ ಅನುಭವ ನೀಡುವಲ್ಲಿ ಶಕ್ತವಾಗಿದೆ.

Comments are closed.