ಮನೋರಂಜನೆ

ಕೊಟ್ಟ ಮಾತಿನಂತೆ ಗುರಿ ಸಾಧಿಸಿದ ಯಶ್

Pinterest LinkedIn Tumblr


ಬೆಂಗಳೂರು: ರಾಜ್ಯ, ದೇಶ ಮಾತ್ರವಲ್ಲದೇ ಹೊರದೇಶದಲ್ಲೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಅಬ್ಬರದಿಂದ ಮುನ್ನುಗ್ಗುತ್ತಿದ್ದು, ಈ ಮೂಲಕ ಯಶ್ ತಾನು ಈ ಹಿಂದೆ ಕೊಟ್ಟ ಮಾತನ್ನು ಉಳಿಸಿಕೊಂಡು, ಕಟ್ಟಿಕೊಂಡ ಕನಸನ್ನು ನನಸು ಮಾಡಿಕೊಂಡು ಛಲ ಬಿಡದೆ ಗುರಿ ಸೇರಿದ್ದಾರೆ.

ಹೌದು. ಯಾವುದೇ ಒಂದು ಕೆಲಸ ಪ್ರಾರಂಭಿಸುವ ಮೊದಲು ಯಶ್ ತುಂಬಾನೇ ಯೋಚನೆ ಮಾಡುತ್ತಾರೆ. ಅಲ್ಲದೇ ಆ ಕೆಲಸ ಮಾಡಿ ಮುಗಿಸುವ ಛಲ ಹೊಂದಿದ್ದಾರೆ. ಇದಕ್ಕೆ ಅವರ ‘ಯಶೋಮಾರ್ಗ’ವೇ ಸಾಕ್ಷಿ. ಈ ಬೆನ್ನಲ್ಲೇ ಅವರಿಗೆ ಗಾಂಧಿನಗರದಲ್ಲಿ ತನ್ನದೊಂದು ಕಟೌಟ್ ರಾರಾಜಿಸಬೇಕು ಅಂತ ಗುರಿ ಹೊಂದಿದ್ದರು. ಅಲ್ಲದೇ ಕನ್ನಡದ ಚಿತ್ರವೊಂದು ಇಡೀ ಚಿತ್ರರಂಗವನ್ನೇ ತಲ್ಲಣಗೊಳಿಸುವಂತೆ ಮಾಡಬೇಕೆಂಬ ಬಹುದೊಡ್ಡ ಕನಸನ್ನು ಹೊಂದಿದ್ದರು. ಯಶ್ ಅವರ ಈ ಕನಸು ಇದೀಗ ನನಸಾಗಿದೆ.

ಈ ಹಿಂದೆ ಖಾಸಗಿ ಚಾನೆಲೊಂದರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ್ದ ಯಶ್ ತಮ್ಮ ಮುಂದಿನ ಕನಸನ್ನು ಬಿಚ್ಚಿಟ್ಟಿದ್ದರು. ನಾನು ಸ್ಟಾರ್ ಆಗಬೇಕು. ಈ ಗಾಂಧಿನಗರದ ಟಾಪ್ ನಲ್ಲಿ ನಿಂತುಕೊಳ್ಳಬೇಕು ಹಠ ಬಂತು ಅಂದಿದ್ದರು. ಅವರ ಕನಸಿನಂತೆಯೇ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿಯೇ ಬಿಟ್ಟರು. ಅಂದು ಧಾರವಾಹಿಯ ಮುಖಾಂತರ ಮನೆಮಾತಾಗಿದ್ದ ಯಶ್ ಇಂದು ಅಸಂಖ್ಯ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ನಟರಾಗಿ ಅಭಿಮಾನಿಗಳ ಮನಗಳಲ್ಲಿ ಆಳವಾಗಿ ಬೇರೂರಿದ್ದಾರೆ.

ಆ ನಂತರ ಇನ್ನೊಂದು ಬಾರಿ ಕಾರ್ಯಕ್ರಮೊಂದರಲ್ಲಿ ಭಾಗಿಯಾಗಿದ್ದ ಯಶ್, ತನ್ನ ಮತ್ತೊಂದು ಕನಸನ್ನು ಹಂಚಿಕೊಂಡಿದ್ದರು. ಕನ್ನಡ ಚಿತ್ರರಂಗ, ಕನ್ನಡ ಸಿನಿಮಾವನ್ನು ಇಡೀ ಭಾರತ ತಿರುಗಿ ನೋಡಬೇಕು. ಬರೀ ಸುಮ್ನೆ ನೋಡೋದಲ್ಲ. ಚಪ್ಪಾಳೆ ಹೊಡೆದು ಸೆಲ್ಯೂಟ್ ಹೊಡೀಬೇಕು ಅದು ನನ್ನ ಮುಂದಿನ ಗುರಿ ಅಂತ ಹೇಳಿದ್ದರು. ಯಶ್ ಮಾತಿನಂತೆ ಅವರ ಕೆಜಿಎಫ್ ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡಿತ್ತು.

ಇದೀಗ ಡಿ.21ರಂದು ಚಿತ್ರ ರಾಜ್ಯ, ದೇಶ ಹಾಗೂ ಹೊರದೇಶದಲ್ಲೂ ಬಿಡುಗಡೆಯಾಗಿದೆ. ಯಶ್ ಅಭಿಮಾನಿಗಳಂತೂ ಮಧ್ಯರಾತ್ರಿ ಚಳಿಯನ್ನೂ ಲೆಕ್ಕಿಸದೇ ಚಿತ್ರ ಬಿಡುಗಡೆಗೋಸ್ಕರ ಕಾಯುತ್ತಿದ್ದರು. ಅಲ್ಲದೇ ಹೆಚ್ಚಿನ ಚಿತ್ರಮಂದಿರಗಳಲ್ಲಿ ಯಶ್ ಅವರ ದೊಡ್ಡ ದೊಡ್ಡ ಕಟೌಟ್ ಗಳನ್ನು ಹಾಕಿ ಹಾಲಿನ ಅಭಿಷೇಕವನ್ನು ಮಾಡಿದ್ದಾರೆ. ಕೆಲ ಅಭಿಮಾನಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಿಲಿಕಾನ್ ಸಿಟಿಯಲ್ಲಿರುವ ನರ್ತಕಿ ಚಿತ್ರಮಂದಿರದಲ್ಲಿ ಯಶ್ ಅವರ ಬೃಹದಾಕಾರದ ಕಟೌಟ್ ನಿಲ್ಲಿಸಿದ್ದಾರೆ. ಮಾತ್ರವಲ್ಲದೇ ಈ ಕಟೌಟ್ ಗೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದ್ರೆ ಇಡೀ ಕನ್ನಡ ಚಿತ್ರರಂಗದಲ್ಲಿ ಯಶ್ ತಮ್ಮದೇ ಹವಾ ಸೃಷ್ಟಿಸಿರೋದಂತು ಸುಳ್ಳಲ್ಲ. ಸಾಮಾಜಿಕ ಜಾಲತಾಣಗಳಲ್ಲಂತೂ ಯಶ್ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿದೆ.

ಚಿತ್ರ ನೋಡಿದ ಪ್ರತಿಯೊಬ್ಬರು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಇಂತದ್ದೊಂದು ಚಿತ್ರ ಮೂಡಿ ಬಂದಿದ್ದು ಪ್ರಪಥಮ ಬಾರಿಗೆ ಅಂತ ಹೇಳುವಷ್ಟರ ಮಟ್ಟಿಗೆ ಇದೀಗ ಕೆಜಿಎಫ್ ಎಲ್ಲಾ ಥಿಯೇಟರ್ ಗಳಲ್ಲೂ ಅಬ್ಬರಿಸುತ್ತಿದೆ. ಒಟ್ಟಿನಲ್ಲಿ ಯಶ್ ತಾನು ಕಟ್ಟಿದ್ದ ಕನಸಿನ ಗೋಪುರಕ್ಕೆ ಬಣ್ಣ ಹಚ್ಚಿದ್ದು ದೇಶ, ಹೊರದೇಶದಲ್ಲೂ ಮಿಂಚುತ್ತಿದ್ದಾರೆ.

Comments are closed.