ಮನೋರಂಜನೆ

ಹಳ್ಳ ಹಿಡಿಯುತ್ತಿರುವ ನಟಿ ಶೃತಿ ಹರಿಹರನ್ ಮೀಟೂ ಪ್ರಕರಣ..!

Pinterest LinkedIn Tumblr


ಬೆಂಗಳೂರು: ನಟಿ ಶೃತಿ ಹರಿಹರನ್ ಮೀಟೂ ಪ್ರಕರಣ ಹಳ್ಳ ಹಿಡಿಯುವ ಎಲ್ಲಾ ಲಕ್ಷಣಗಳು ಕಾಣಿಸ್ತಿವೆ. ಯಾಕಂದ್ರೆ ಬಿರುಸಿನ ತನಿಖೆಗೆ ಇಳಿದಿದ್ದ ಪೊಲೀಸರು ಕೂಡ ಸಾಕ್ಷಿಗಳ ಕೊರೆತೆಯಿಂದಾಗಿ ಅವಧಿಗೂ ಮುನ್ನವೇ ಬಿ ರಿಪೋರ್ಟ್ ಸಲ್ಲಿಸೋಕೆ ಮುಂದಾಗಿದ್ದಾರೆ.

ಹೌದು. ನಟಿ ಶೃತಿ ಹರಿಹರನ್ ಮೀಟೂ ಪ್ರಕರಣ ಇಡೀ ಕನ್ನಡ ಚಿತ್ರರಂಗವನ್ನೇ ತಲ್ಲಣಗೊಳಿಸುವಂತೆ ಮಾಡಿತ್ತು. ಖ್ಯಾತನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮೀಟೂ ಆರೋಪ ಮಾಡಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳದ ಕೇಸ್ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೂಡ ತನಿಖೆಗೆ ಬೇಕಾದ ಎಲ್ಲಾ ಆಯಾಮಗಳಿಂದ ಮಹಜರು ಮಾಡಿದ್ದರು. ಅರ್ಜುನ್ ಸರ್ಜಾ ಸೇರಿದಂತೆ ಕೇಸ್ ಸಂಬಂಧ ಹತ್ತಕ್ಕೂ ಹೆಚ್ಚು ಸಾಕ್ಷಿಗಳನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಸುಮಾರು 40 ಸಾಕ್ಷಿಗಳಿಂದ ಮಾಹಿತಿ ಕಲೆ ಹಾಕೋಕೆ ಪ್ಲಾನ್ ಮಾಡಿದ್ದ ಪೊಲೀಸರಿಗೆ ಕೇವಲ 10 ಜನರು ಸಾಕ್ಷಿಗಳನ್ನಾಗಿ ಮಾಡೋಕು ಒದ್ದಾಡ್ತಿದ್ದಾರಂತೆ.

ವಿಸ್ಮಯ ಚಿತ್ರದ ವೇಳೆ ನಟ ಅರ್ಜುನ್ ಸರ್ಜಾನ್ ಲೈಂಗಿಕ ಕಿರುಕುಳ ನೀಡಿದ್ರು ಅನ್ನೋ ಆರೋಪಕ್ಕೆ ತಕ್ಕಂತೆ ಶೃತಿ ಪರವಾಗಿ ಸಾಕ್ಷಿ ಹೇಳೋಕೆ ಯಾರು ಮುಂದೆ ಬರ್ತಿಲ್ಲ. ವಿಸ್ಮಯ ಚಿತ್ರದ ವೇಳೆ ಜೊತೆಗಿದ್ದ ಹತ್ತಕ್ಕೂ ಹೆಚ್ಚು ಸಾಕ್ಷಿಗಳು, ಪೊಲೀಸರ ವಿಚಾರಣೆ ವೇಳೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರ ನೀಡಿದ್ದಾರೆ. ಇನ್ನು ಶೃತಿ ಹರಿಹರನ್ ಕೂಡ ಘಟನೆ ನಡೆದ ಎರಡು ವರ್ಷಗಳ ನಂತರ ದೂರು ನೀಡಿರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೆ ಪ್ರಕರಣಕ್ಕೆ ಬೇಕಾದ ಯಾವುದೇ ಸೂಕ್ತ ಸಾಕ್ಷಿ ಸಿಕ್ಕದ ಹಿನ್ನೆಲೆಯಲ್ಲಿ ಶೃತಿ ಹರಿಹರನ್ ಮೀಟೂ ಪ್ರಕರಣಕ್ಕೆ ಪೊಲೀಸರು ಎಳ್ಳು ನೀರು ಬಿಡೋಕೆ ಮುಂದಾಗಿದ್ದಾರೆ ಅಂತ ಮೂಲಗಳಿಂದ ತಿಳಿದುಬಂದಿದೆ.

ತನಿಖೆ ಹಳ್ಳ ಹಿಡಿಯೋಕೆ ಕಾರಣಗಳೇನು..?
* ಅರ್ಜುನ್ ಸರ್ಜಾನ್ ಶೂಟಿಂಗ್ ವೇಳೆ ಆಶ್ಲೀಲವಾಗಿ ವರ್ತಿಸಿದ್ರು ಅನ್ನೋಕೆ ಯಾವುದೇ ಸಾಕ್ಷಿಗಳಿಲ್ಲ.
* ದೇವನಹಳ್ಳಿ ಹೈವೇಯಲ್ಲಿ ರೂಮ್ ಗೆ ಕರೆದ್ರು ಅನ್ನೋಕು ಸೂಕ್ತ ಸಾಕ್ಷಿಗಳಿಲ್ಲ.
* ಶೂಟಿಂಗ್ ನಲ್ಲಿ ಚಿತ್ರಕ್ಕೆ ಬೇಕಾದಂತೆ ನಟಿಸಿದೆ ಅಷ್ಟೇ ಅಂತಾರೆ ನಟ ಅರ್ಜುನ್ ಸರ್ಜಾ.
* ನಲವತ್ತು ಜನರನ್ನು ಸಾಕ್ಷಿಗಳನ್ನಾಗಿ ಮಾಡೋಕೆ ಹೊರಟಿದ್ದ ಪೊಲೀಸರಿಗೆ ಸಿಕ್ಕಿದ್ದು ಕೇವಲ ಹತ್ತು ಜನ.
* ಯುಬಿ ಸಿಟಿಯಲ್ಲಿ ರೂಮ್ ಬುಕ್ ಮಾಡಿದ್ದು ನಿಜವಾದ್ರೂ ಲೈಂಗಿಕ ಕಿರುಕುಳ ನೀಡಿದ್ದಕ್ಕೆ ಯಾವುದೇ ಸಿಸಿಟಿವಿ ಇಲ್ಲ.
* ಘಟನೆ ನಡೆದು 2 ವರ್ಷಗಳ ನಂತ್ರ ದೂರು ನೀಡಿರೋದು ಕೇಸ್‍ಗೆ ಹಿನ್ನೆಡೆ ಉಂಟುಮಾಡಿದೆ.
* ಶೂಟಿಂಗ್ ನಡೆದ ಜಾಗದಲ್ಲೂ ಯಾವುದೇ ಸಾಂದರ್ಭಿಕ ಸಾಕ್ಷಿಗಳು ಪತ್ತೆಯಾಗಿಲ್ಲ.

ಈ ಎಲ್ಲಾ ಕಾರಣಗಳು ಒಂದು ಕಡೆಯಾದರೆ, ನಟಿ ಶೃತಿ ಹರಿಹರನ್ ಕೇಸ್ ದಾಖಲಿಸಿದ್ದು ತಡವಾಯ್ತೋ ಅಥವಾ ಪ್ರಭಾವಿ ನಟ ಅನ್ನೋ ಕಾರಣಕ್ಕೆ ಸಾಕ್ಷಿಗಳು ಹಿಂದೇಟು ಹಾಕಿದ್ರೋ ಗೊತ್ತಿಲ್ಲ. ದೊಡ್ಡಮಟ್ಟದಲ್ಲಿ ಸೌಂಡ್ ಮಾಡಿದ್ದ ಮೀಟೂ ಪ್ರಕರಣ ಅಷ್ಟೇ ಸಣ್ಣಮಟ್ಟದಲ್ಲಿ ತೆರೆಮರೆಗೆ ಸರಿತಿರೋದಂತೂ ಸುಳ್ಳಲ್ಲ.

Comments are closed.