ಮನೋರಂಜನೆ

ತಮಿಳು ರಿಮೇಕ್ ಚಿತ್ರಕ್ಕೆ ಗಣೇಶ್‌ಗೆ ಭಾವನಾ ನಾಯಕಿ

Pinterest LinkedIn Tumblr


ನಟ ಗಣೇಶ್‌ “99′ ಎಂಬ ಸಿನಿಮಾದಲ್ಲಿ ನಟಿಸಲಿದ್ದಾರೆಂಬ ಸುದ್ದಿ ನಿಮಗೆ ಗೊತ್ತೇ ಇದೆ. ಪ್ರೀತಂ ಗುಬ್ಬಿ ನಿರ್ದೇಶನದ ಈ ಚಿತ್ರವನ್ನು ರಾಮು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಮುಹೂರ್ತ ಡಿ.07 ರಂದು ನಡೆದಿದೆ. ಗಣೇಶ್‌ಗೆ ನಾಯಕಿ ಯಾರಾಗುತ್ತಾರೆಂಬ ಕುತೂಹಲ ಅನೇಕರಲ್ಲಿತ್ತು. ಈಗ
ಆ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಭಾವನಾ “99′ ಸಿನಿಮಾದಲ್ಲಿ ಗಣೇಶ್‌ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಯಾವ ಭಾವನಾ ಎಂದರೆ “ಜಾಕಿ’ ಭಾವನಾ ಎನ್ನಬೇಕು. “ಜಾಕಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಮಲಯಾಳಿ ಬೆಡಗಿ ಭಾವನಾ ಆ ನಂತರ ಕನ್ನಡದಲ್ಲಿ ಬಿಝಿ ನಟಿಯಾಗಿದ್ದು, ಕನ್ನಡ ಹುಡುಗ ನವೀನ್‌ ಅವರ ಕೈ ಹಿಡಿದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಮದುವೆ ನಂತರ ಭಾವನಾ ನಟಿಸುತ್ತಾರಾ ಎಂಬ ಕುತೂಹಲ ಅನೇಕರಲ್ಲಿತ್ತು.

ಹೀಗಿರುವಾಗಲೇ ಪ್ರಜ್ವಲ್‌ ದೇವರಾಜ್‌ ನಾಯಕರಾಗಿರುವ “ಇನ್ಸ್‌ಪೆಕ್ಟರ್‌ ವಿಕ್ರಂ’ ಚಿತ್ರಕ್ಕೆ ಭಾವನಾ ನಾಯಕಿ ಎಂಬ ಸುದ್ದಿ ಬಂತು. ಈಗ ಭಾವನಾ “99′ ಸಿನಿಮಾಕ್ಕೆ ನಾಯಕಿತಯಾಗಿದ್ದಾರೆ. ಗಣೇಶ್‌ ಹಾಗೂ ಭಾವನಾ ಈಗಾಗಲೇ “ರೋಮಿಯೋ’ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ಆ ಚಿತ್ರ ಒಂದು ಮಟ್ಟಕ್ಕೆ ಯಶಸ್ಸು ಕೂಡ ಕಂಡಿತ್ತು. ಈಗ ಆ ಜೋಡಿ ಮತ್ತೂಮ್ಮೆ ಒಂದಾಗಿದೆ.

ಅಂದಹಾಗೆ, ಇದು ತಮಿಳಿನ “96′ ಚಿತ್ರದ ರೀಮೇಕ್‌ ಆಗಿದ್ದು, ಅಲ್ಲಿನ 96 ಅನ್ನು ಇಲ್ಲಿ 99 ಮಾಡಲಾಗಿದೆ. ವಿಜಯ್‌ ಸೇತುಪತಿ ಹಾಗೂ ತ್ರಿಶಾ ನಟಿಸಿರುವ ತಮಿಳು ಚಿತ್ರ “96′ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿತ್ತು. ಹೊಸ ಬಗೆಯ ಕಥೆಯೊಂದಿಗೆ ಈ ಚಿತ್ರ ಗಮನ ಸೆಳೆಯುವ ಮೂಲಕ ಪ್ರೇಕ್ಷಕರನ್ನು ರಂಜಿಸಿತ್ತು. ಸಿನಿಮಾ ಹಿಟ್‌ಲಿಸ್ಟ್‌ ಸೇರುತ್ತಿದ್ದಂತೆ ಕನ್ನಡದ ರೀಮೇಕ್‌ ರೈಟ್ಸ್‌ ಅನ್ನು ನಿರ್ಮಾಪಕ ರಾಮು ಪಡೆದಿದ್ದಾರೆ. ಅದರಂತೆ ಈಗ ಗಣೇಶ್‌ ಅವರಿಗೆ ಸಿನಿಮಾ ಮಾಡುತ್ತಿದ್ದಾರೆ.

ಮೂಲ ಚಿತ್ರದ ಕಥೆಯನ್ನು ಉಳಿಸಿಕೊಂಡು ಉಳಿದಂತೆ ಇಲ್ಲಿನ ನೇಟಿವಿಟಿಗೆ ತಕ್ಕಂತೆ ಸಾಕಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ. ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತ, ಸಂತೋಷ್‌ ರೈ ಪಾತಾಜೆ ಛಾಯಾಗ್ರಹಣವಿದೆ. ಗಣೇಶ್‌ ಹಾಗೂ ಭಾವನಾ ಅವರ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಎರಡನೇ ಸಿನಿಮಾ “99′ ಆದರೆ, ನಿರ್ದೇಶಕ ಪ್ರೀತಂ ಗುಬ್ಬಿ ಹಾಗೂ ಗಣೇಶ್‌ ಕಾಂಬಿನೇಶನ್‌ನಲ್ಲಿ ತಯಾರಾಗುತ್ತಿರುವ ಮೂರನೇ ಸಿನಿಮಾವಿದು. ಈಗಾಗಲೇ “ಮಳೆಯಲಿ ಜೊತೆಯಲಿ’ ಹಾಗೂ “ದಿಲ್‌ ರಂಗೀಲಾ’ ಚಿತ್ರಗಳನ್ನು ಇವರಿಬ್ಬರು ಮಾಡಿದ್ದಾರೆ.

Comments are closed.