ಮನೋರಂಜನೆ

ಮದುವೆ ದಿನ ಅಂಬಿಯನ್ನು ನೆನೆದ ಸುಮಲತಾ ವ್ಯಕ್ತಪಡಿಸಿದ ಭಾವನೆ ನೋಡಿ…

Pinterest LinkedIn Tumblr

ಅಂಬರೀಷ್​-ಸುಮಲತಾ ಮದುವೆಯಾದ ದಿನ ಇಂದು. ಎಲ್ಲ ಸರಿಯಾಗಿದ್ದರೆ ಇಷ್ಟೊತ್ತಿಗೆ ಅಂಬಿ ಮನೆಯಲ್ಲಿ 27ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ ತುಂಬಿ ತುಳುಕುತ್ತಿರುತ್ತಿತ್ತು. ಆದರೆ, ಇದೀಗ ಅಂಬರೀಷ್​ ನಮ್ಮೊಡನೆ ಇಲ್ಲ. ಆದರೆ, ಅವರ ನೆನಪುಗಳು ಅವರ ಕುಟುಂಬದವನ್ನು ಸದಾ ಕಾಡುತ್ತಲೇ ಇರುತ್ತದೆ.

ತಮ್ಮ ವಿವಾಹ ವಾರ್ಷಿಕೋತ್ಸವ ಪ್ರಯುಕ್ತ ಇಂದು ಮಗ ಅಭಿಷೇಕ್​ ಜೊತೆಗೆ ಅಂಬರೀಷ್​ ತವರೂರಾದ ಮದ್ದೂರಿನ ದೊಡ್ಡರಸಿಕೆರೆ ಗ್ರಾಮಕ್ಕೆ ಹೋಗಿರುವ ಸುಮಲತಾ ಅಂಬರೀಷ್ ಅವರನ್ನು ಅಲ್ಲಿನ ಗ್ರಾಮಸ್ಥರು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಇದರ ಜೊತೆಗೆ ಬೆಳಗ್ಗೆ ತಮ್ಮ ಮತ್ತು ಅಂಬರೀಷ್ ನಡುವಿನ​ ಪ್ರೇಮ, ದಾಂಪತ್ಯದ ಕುರಿತು ಫೇಸ್​ಬುಕ್​ನಲ್ಲಿ ಭಾವನಾತ್ಮಕ ಪೋಸ್ಟ್​ ಒಂದನ್ನು ಹಾಕಿದ್ದಾರೆ.

27 ವರ್ಷದಿಂದ ಇಬ್ಬರೂ ಈ ದಿನವನ್ನು ಒಟ್ಟಿಗೇ ಆಚರಿಸುತ್ತಿದ್ದೆವು. ಅದರೆ, ಮೊದಲ ಬಾರಿ ನೀವಿಲ್ಲದೇ ಈ ದಿನ ಆರಂಭಿಸಿದ್ದೇನೆ. ನಿಮ್ಮಂತಹ ವ್ಯಕ್ತಿಯ ಜೊತೆಗೆ ಜೀವನ ಹಂಚಿಕೊಂಡಿದ್ದಕ್ಕೆ ತುಂಬ ಹೆಮ್ಮೆಯಿದೆ. ನೀವು ಕೋಟಿಗೊಬ್ಬರು ಎಂದು ಭಾವುಕರಾಗಿ ಹಳೇ ಫೋಟೋಗಳು, ತಮ್ಮಿಬ್ಬರ ಸಿನಿಮಾದ ಹಾಡುಗಳ ಜೊತೆಗೆ ದೀರ್ಘ ಪೋಸ್ಟ್​ ಒಂದನ್ನು ಹಾಕಿದ್ದಾರೆ.

ಸುಮಲತಾ ಬರೆದ ಪೋಸ್ಟ್​ನಲ್ಲೇನಿದೆ?:

ನನ್ನ ಪ್ರೀತಿಯ ಅಂಬರೀಷ್​…
ಡಿಸೆಂಬರ್​ 8.. ಈ ದಿನವನ್ನು ಮರೆಯಲು ಸಾಧ್ಯವೇ ಇಲ್ಲ. ಆದರೆ, ಇದೇ ಮೊದಲ ಬಾರಿ ಈ ದಿನ ನೀವು ನನ್ನ ಜೊತೆಗಿಲ್ಲ. ಇದು ನಮ್ಮಿಬ್ಬರ ದಿನ. ನೀವು ನನ್ನ ಜಗತ್ತಿನ ಕೇಂದ್ರ ಮಾತ್ರ ಆಗಿರಲಿಲ್ಲ; ನೀವೇ ನನ್ನ ಜಗತ್ತಾಗಿದ್ದಿರಿ, ನನ್ನ ಬದುಕಾಗಿದ್ದಿರಿ.

ಆ ನಿಮ್ಮ ಕೈ ನನ್ನನ್ನು ಎಂದೂ ಬೀಳದಂತೆ ಗಟ್ಟಿಯಾಗಿ ಹಿಡಿದಿತ್ತು. ಆ ಹೃದಯ ನನ್ನನ್ನು ಬಹಳ ಪ್ರೀತಿಯಿಂದ ನೋಡಿಕೊಂಡಿತ್ತು. ನನಗೇನೋ ನಿಮ್ಮೊಂದಿಗೆ ಈಗಷ್ಟೇ ಬದುಕು ಆರಂಭಿಸಿದ ಹಾಗೆ ಅನಿಸುತ್ತಿದೆ. ಆದರೆ, ಅದೆಷ್ಟು ಬೇಗ 27 ವರ್ಷಗಳೇ ಕಳೆದುಹೋದವು! ನೀವು ನನ್ನನ್ನು ಪ್ರೀತಿಸತೊಡಗಿದ ಮೇಲೇ ನನ್ನ ನಿಜವಾದ ಬದುಕು ಶುರುವಾಗಿದ್ದು. ನಿಮ್ಮ ನಗುವಿನ ಮುಂದೆ ಬೇರಾವುದೂ ಸಾಟಿಯಿಲ್ಲ.

ನಿಮ್ಮೊಂದಿಗೆ ನಾನು ನಿರಾಳವಾಗಿದ್ದೆ:

ನಿಮ್ಮ ಪ್ರೀತಿಯಲ್ಲಿ ನಾನು ಬಹಳ ಸುರಕ್ಷಿತವಾಗಿದ್ದೆ. ಈಗ ತೀರಾ ಒಂಟಿಯೆಂದು ಅನಿಸುತ್ತಿದೆ. ನಿಮ್ಮ ಜೊತೆಗಿದ್ದಷ್ಟೂ ದಿನ ಚಳಿಗಾಲದಲ್ಲಿ ಕಂಬಳಿ ಹಾಗೆ, ಬಿಸಿಲು ಮತ್ತು ಮಳೆಲ್ಲಿ ಛತ್ರಿಯ ಹಾಗೆ ನನ್ನನ್ನು ರಕ್ಷಿಸಿದ್ದೀರಿ, ಬೆಚ್ಚಗೆ ನೋಡಿಕೊಂಡಿದ್ದೀರಿ. ನೀವು ಈಗ ಎಲ್ಲೇ ಇದ್ದರೂ ಅಲ್ಲಿಂದಲೇ ನನ್ನನ್ನು ನೋಡುತ್ತಿದ್ದೀರಿ ಎಂದು ನನಗೆ ಗೊತ್ತು. ನೀವು ಈಗಲೂ ನಿಮ್ಮ ಮಗನ ಬಗ್ಗೆ ಯೋಚನೆ ಮಾಡುತ್ತಿರುತ್ತೀರಿ ಎಂದು ನನಗೆ ಗೊತ್ತು. ನೀವು ಅಲ್ಲಿಂದಲೇ ನಮ್ಮ ಕಾಳಜಿ ವಹಿಸುತ್ತೀರಿ ಎಂಬ ನಂಬಿಕೆ ನನಗಿದೆ.

Comments are closed.