ಮನೋರಂಜನೆ

ಹೀರೋ ಆಗೋ ಮುನ್ನ ರಿಯಲ್ ಲೈಫ್ ನಲ್ಲಿ ಮಿಥುನ್…ನಕ್ಸಲೈಟ್ ಆಗಿದ್ದ!

Pinterest LinkedIn Tumblr


1970ರ ದಶಕದಲ್ಲಿ ನಟನಾಗಿ, ಡಿಸ್ಕೋ ಡ್ಯಾನ್ಸರ್ ಆಗಿ ಈ ನಟ ಜನಪ್ರಿಯನಾಗತೊಡಗಿದ್ದ. ತನ್ನ ಕಷ್ಟದ ದಿನದಲ್ಲಿ ಡ್ಯಾನ್ಸರ್ ಹೆಲೆನ್ ರಿಚರ್ಡ್ಸನ್ ಖಾನ್ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. 90ರ ದಶಕದವರೆಗೆ ಈತ ಬಹು ಬೇಡಿಕೆಯ ಸ್ಟಾರ್ ನಟನಾಗಿ ಬೆಳೆದು ಬಿಟ್ಟಿದ್ದರು. ಹಿಂದಿ, ಬೆಂಗಾಲಿ, ಒರಿಯಾ ಮತ್ತು ಭೋಜ್ ಪುರಿ, ಪಂಜಾಬಿ, ತೆಲುಗು ಭಾಷೆ ಸೇರಿದಂತೆ 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ನಟ ಬೇರೆ ಯಾರು ಅಲ್ಲ ಅದು ಗೌರಂಗ್ ಚಕ್ರವರ್ತಿ ಅಲಿಯಾಸ್ ಮಿಥುನ್ ಚಕ್ರವರ್ತಿ!

ಸ್ಯಾಂಡಲ್ ವುಡ್, ಬಾಲಿವುಡ್, ಟಾಲಿವುಡ್ ಹೀಗೆ ಸಿನಿಲೋಕವನ್ನು ವಿವಿಧ ಹಿನ್ನೆಲೆಯಿಂದ ಬಂದವರು ಪ್ರವೇಶಿಸಿದ್ದರು. ನಾಟಕದ ಕಂಪನಿಯಲ್ಲಿ ಟಿಕೆಟ್ ಮಾರಾಟ ಮಾಡುತ್ತಿದ್ದವರು, ಹೋಟೆಲ್ ಮಾಣಿಯಾಗಿದ್ದವರು, ಕಾರು ಚಾಲಕರಾಗಿದ್ದವರು, ಹಣ್ಣು ಮಾರಾಟ ಮಾಡುತ್ತಿದ್ದವರು ಹೀಗೆ ಕಷ್ಟದ ಬದುಕನ್ನು ಕಂಡು ಬದುಕಿನ ಸವಾಲನ್ನು ಎದುರಿಸಲೇಬೇಕೆಂಬ ಛಲದಿಂದ ಸಿನಿಮಾರಂಗಪ್ರವೇಶಿಸಿ ಯಶಸ್ವಿಯಾದವರ ಕಥೆಯೇ ನಮ್ಮ ಕಣ್ಣ ಮುಂದಿದೆ.

ಆದರೆ ಮಿಥುನ್ ಚಕ್ರವರ್ತಿ ಹಿನ್ನೆಲೆ ಅವೆಲ್ಲಕ್ಕಿಂತ ತುಂಬಾ ಭಿನ್ನವಾದದ್ದು, ಮಿಥುನ್ ಸಿನಿಮಾ ರಂಗಕ್ಕೆ ಬರುವ ಮೊದಲು ಏನಾಗಿದ್ದ ಎಂಬ ವಿಚಾರವೇ ಹುಬ್ಬೇರಿಸುವಂತಹದ್ದು ಎಂಬುದರಲ್ಲಿ ಎರಡು ಮಾತಿಲ್ಲ!?

ಹೀರೋ ಆಗೋ ಮುನ್ನ ರಿಯಲ್ ಲೈಫ್ ನಲ್ಲಿ ಮಿಥುನ್…ನಕ್ಸಲೈಟ್ ಆಗಿದ್ದ!

1952ರ ಜೂನ್ 16ರಂದು ಪ್ರಸ್ತುತ ಈಗ ಬಾಂಗ್ಲಾದೇಶವಾಗಿರುವ ಪೂರ್ವ ಬಂಗಾಳದ ಬಾರಿಸಾಲ್ ಪ್ರದೇಶದಲ್ಲಿ ಚಕ್ರವರ್ತಿ ಜನಿಸಿದ್ದರು. ಕೊಲ್ಕೊತಾದ ಪ್ರತಿಷ್ಠಿತ ಸ್ಕಾಟಿಶ್ ಚರ್ಚ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಮಿಥುನ್ ಕೆಮಿಸ್ಟ್ರಿಯಲ್ಲಿ ಪದವಿ ಪಡೆದಿದ್ದರು. ಅಷ್ಟೇ ಅಲ್ಲ ಮಿಥುನ್ ಸಿನಿಮಾ ಕ್ಷೇತ್ರಕ್ಕೆ ಕಾಲಿಡುವ ಮುನ್ನ ಕಟ್ಟಾ ನಕ್ಸಲೈಟ್ ಆಗಿದ್ದ ಎಂಬ ವಿಚಾರ ಅನೇಕರಿಗೆ ತಿಳಿದಿರಲಿಕ್ಕಿಲ್ಲ!!

ಬಂಗಾಳದ ನಕ್ಸಲೀಯರ ಗುಂಪಿನಲ್ಲಿದ್ದ ಮಿಥುನ್ ಹೋರಾಟದಲ್ಲಿ ತೊಡಗಿಕೊಂಡಿದ್ದ. ಅದೆಲ್ಲಕ್ಕಿಂತ ಕುತೂಹಲಕಾರಿ ಅಂಶವೆಂದರೆ ಬಂಗಾಳ ಪೊಲೀಸರ ವಾಂಟೆಡ್ ಲಿಸ್ಟ್ ನಲ್ಲಿ ಈಗಲೂ ಮಿಥುನ್ ಚಕ್ರವರ್ತಿ ಹೆಸರಿದೆಯಂತೆ! ನಕ್ಸಲೈಟ್ ಆಗಿದ್ದ ವೇಳೆ ಆ ಕಾಲದ ಕುಖ್ಯಾತ ನಕ್ಸಲ್ ರವಿ ರಂಜನ್ ಮತ್ತು ಮಿಥುನ್ ಸ್ನೇಹಿತರಾಗುತ್ತಾರೆ. ಹೀಗೆ ಶಸ್ತ್ರಾಸ್ತ್ರಧಾರಿಯಾಗಿ ತಲೆಮರೆಸಿಕೊಂಡು ತಿರುಗಾಡುತ್ತಿದ್ದ ಮಿಥುನ್ ಜೀವನದಲ್ಲಿ ಅದೊಂದು ಟರ್ನಿಂಗ್ ಪಾಯಿಂಟ್ ಬರದೇ ಇದ್ದಿದ್ದರೇ..ಇಷ್ಟೊತ್ತಿಗಾಗಲೇ ಎನ್ ಕೌಂಟರ್ ಗೆ ಬಲಿಯಾಗಿರುತ್ತಿದ್ದರೇನೋ?

ಆ ಘಟನೆಯೇ ಮಿಥುನ್ ಸ್ಟಾರ್ ಆಗುವಂತೆ ಮಾಡಲು ಕಾರಣ!

ನಕ್ಸಲ್ ಚಳವಳಿಯಲ್ಲಿ ತೊಡಗಿಕೊಂಡಿದ್ದ ಮಿಥುನ್ ಚಕ್ರವರ್ತಿಯ ಏಕೈಕ ಸೋದರ ಆಕಸ್ಮಿಕ ಎಂಬಂತೆ ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿದ್ದ. ಈ ಘಟನೆಯಿಂದ ಇಡೀ ಕುಟುಂಬವೇ ಆಘಾತಕ್ಕೊಳಗಾಗಿತ್ತು. “ತಮ್ಮ” ಸಾವನ್ನಪ್ಪಿರುವ ವಿಷಯ ಮಿಥುನ್ ಕಿವಿಗೂ ಬಿದ್ದಿತ್ತು. ಆ ಸಂದರ್ಭದಲ್ಲಿ ಮಿಥುನ್ ನಕ್ಸಲಿಸಂ ತೊರೆದು ಮನೆಗೆ ವಾಪಸ್ ಆಗುವ ದೃಢ ನಿರ್ಧಾರ ಕೈಗೊಂಡು ಬಿಟ್ಟಿದ್ದರು. ಆದರೆ ಅಂಡರ್ ವರ್ಲ್ಡ್ ನಂತೆ ಒಂದು ಬಾರಿ ನಕ್ಸಲ್ ಗುಂಪಿಗೆ ಸೇರಿಕೊಂಡ ಮೇಲೆ ಅದನ್ನು ಬಿಟ್ಟು ಬರೋದು ಸುಲಭದ ಮಾತಾಗಿರಲಿಲ್ಲವಾಗಿತ್ತು. ಆದರೂ ಸಾಕಷ್ಟು ಅಪಾಯದ ನಡುವೆಯೂ ನಕ್ಸಲಿಸಂಗೆ ಗುಡ್ ಬೈ ಹೇಳಿ ತನ್ನ ಕುಟುಂಬದ ವರ್ಗದ ಜೊತೆ ಮಿಥುನ್ ಮತ್ತೆ ಸೇರಿಕೊಂಡುಬಿಟ್ಟಿದ್ದ!

ಮನೆಗೆ ಬಂದ ಮಿಥುನ್ ಗೆ ಕುಟುಂಬದವರು ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾಕ್ಕೆ ಸೇರಿಕೊಳ್ಳಲು ಸಲಹೆ ನೀಡಿದ್ದರು. ಬಳಿಕ ಮಿಥುನ್ ಎಫ್ ಟಿಐಐನಲ್ಲಿ ಅಭಿನಯದ ಪದವಿ ಪಡೆದಿದ್ದ. 1976ರಲ್ಲಿ ಮೃಣಾಲ್ ಸೇನ್ ನಿರ್ದೇಶನದ “ಮೃಗಯಾ” ಸಿನಿಮಾದಲ್ಲಿ ನಟಿಸುವ ಮೂಲಕ ಮಿಥುನ್ ಬಾಲಿವುಡ್ ಪ್ರವೇಶಿಸಿದ್ದರು. ಮೊತ್ತ ಮೊದಲ ಸಿನಿಮಾದಲ್ಲಿ ಚಕ್ರವರ್ತಿ ಅತ್ಯುತ್ತಮ ನಟ ಎಂಬ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಬಿಟ್ಟಿದ್ದರು!

1976ರಿಂದ 1990ರವರೆಗೆ ಸ್ಟಾರ್ ನಟನಾಗಿ ಮೆರೆದ ಚಕ್ರವರ್ತಿ:

ಮೇರಾ ರಕ್ಷಕ್ ಸಿನಿಮಾದ ಯಶಸ್ಸಿನ ನಂತರ 1979ರಲ್ಲಿ ಕಡಿಮೆ ವೆಚ್ಚದಲ್ಲಿ ನಿರ್ಮಾಣವಾದ ಪತ್ತೆದಾರಿ ಸಿನಿಮಾ ಸುರಕ್ಷಾ ಮಿಥುನ್ ಚಕ್ರವರ್ತಿಗೆ ಸ್ಟಾರ್ ಗಿರಿಯನ್ನು ತಂದುಕೊಟ್ಟಿತ್ತು. ಬಸು ಚಟರ್ಜಿ ನಿರ್ದೇಶನದ ಪ್ರೇಮ್ ವಿವಾಹ್, 1980ರ ದಶಕದಲ್ಲಿ ಮಿಥುನ್ ಬರೋಬ್ಬರಿ 110 ಸಿನಿಮಾದಲ್ಲಿ ನಾಯಕ ನಟನಾಗಿ ನಟಿಸಿದ್ದರು. ಹಮ್ ಪಾಂಚ್, ಡಿಸ್ಕೋ ಡ್ಯಾನ್ಸರ್, ಕಸಂ ಪೈದಾ ಕರ್ನೆ ವಾಲೆ ಕಿ, ಡ್ಯಾನ್ಸ್, ಡ್ಯಾನ್ಸ್, ಮುಝೆ ಇನ್ಸಾಫ್ ಚಾಹಿಯೇ, ಪ್ಯಾರ್ ಕಾ ಮಂದಿರ್, ವಾಂಟೆಡ್, ಬಾಕ್ಸರ್, ಜಾಗೀರ್, ಜಾಲ್, ವತನ್ ಕೀ ರಖವಾಲೆ, ಕಮಾಂಡೋ, ವಕ್ತ್ ಕೀ ಅವಾಜ್. ದುಷ್ಮನ್, ಕಾಲ್ ಪುರುಷ್, ತಿತ್ಲೀ, ಅಗ್ನಿಪಥ್, ಮುಜ್ರಿಮ್, ಜಲ್ಲಾದ್ ಸೇರಿದಂತೆ ನೂರಾರು ಸಿನಿಮಾಗಳಲ್ಲಿ ಅದ್ಭುತ ಅಭಿನಯದ ಮೂಲಕ ಚಿತ್ರರಸಿಕರ ಮನಗೆದ್ದಿದ್ದರು. ಮಿಥುನ್ 1994ರಿಂದ 1999ರವರೆಗೆ ಸತತವಾಗಿ ಅತ್ಯಂತ ಹೆಚ್ಚಿನ ತೆರಿಗೆಯನ್ನು ಪಾವತಿಸಿದ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2018ರಲ್ಲಿ ಬಿಡುಗಡೆಯಾಗಿದ್ದ ಶಿವರಾಜ್ ಕುಮಾರ್, ಸುದೀಪ್ ಅಭಿನಯದ ದ ವಿಲನ್ ಸಿನಿಮಾದಲ್ಲಿ ಮಿಥುನ್ ಚಕ್ರವರ್ತಿ ನಟಿಸಿದ್ದರು.

ಶ್ರೀದೇವಿ ಜತೆ ರಹಸ್ಯವಾಗಿ ಮದುವೆಯಾಗಿದ್ದ ಮಿಥುನ್!

1980ರಲ್ಲಿ ಸ್ಟಾರ್ ನಟನಾಗಿ ಮೆರೆಯುತ್ತಿದ್ದ ವೇಳೆಯಲ್ಲಿ ಮಿಥುನ್ ಚಕ್ರವರ್ತಿ ಮೋಹಕ ಸುಂದರಿ ನಟಿ ಶ್ರೀದೇವಿಯ ಪ್ರೇಮಪಾಶದೊಳಕ್ಕೆ ಬಿದ್ದಿದ್ದ! ಇಬ್ಬರ ಪ್ರೇಮ ಕಹಾನಿ ಅಂದು ಬಹಳ ಗುಟ್ಟಾಗಿ ಇದ್ದರೂ ಕೂಡಾ, ಅಲ್ಲಲ್ಲಿ ಗಾಸಿಪ್ ಗಳಾಗಿ ಹರಿದಾಡುತ್ತಿದ್ದವು. ಏತನ್ಮಧ್ಯೆ ಮಿಥುನ್ ಶ್ರೀದೇವಿಯನ್ನು 1985ರಲ್ಲಿ ಗುಟ್ಟಾಗಿ ಮದುವೆಯಾಗಿದ್ದ. ಆದರೆ ಮಿಥುನ್ ತನಗೆ ಮೊದಲೇ ಯೋಗಿತಾ ಬಾಲಿ ಜೊತೆ ವಿವಾಹವಾಗಿತ್ತು ಎಂಬುದನ್ನು ಮರೆತುಬಿಟ್ಟಿದ್ದ!

ಇಬ್ಬರ ಕಳ್ಳಾಟದ ಮದುವೆ ಯೋಗಿತಾಗೆ ತಿಳಿದ ಮೇಲೆ ಆಕೆ ರಂಪಾಟ ನಡೆಸಿ ಶ್ರೀದೇವಿಯನ್ನು ಬಿಡದಿದ್ದರೆ ವಿಷ ಕುಡಿದು ಸಾಯುವುದಾಗಿ ಬೆದರಿಕೆ ಹಾಕಿಬಿಟ್ಟಿದ್ದಳು. ಈ ಹಗ್ಗಜಗ್ಗಾಟದಲ್ಲಿ ಮಿಥುನ್ ಗೆ ಶ್ರೀದೇವಿ ಒಂದು ಆಫರ್ ಕೊಡುತ್ತಾಳೆ..ನಿನಗೆ ನಾನು ಬೇಕೋ ಅಥವಾ ಹೆಂಡತಿ, ಮಕ್ಕಳು ಬೇಕೋ ಎಂಬುದಾಗಿ. ಕೊನೆಗೆ ಯೋಗಿತಾ ಪ್ರೀತಿಗೆ ಕಟ್ಟುಬಿದ್ದ ಮಿಥುನ್ ಯೋಗಿತಾಳನ್ನೇ ಆರಿಸಿಕೊಂಡುಬಿಟ್ಟಿದ್ದ. ಭಗ್ನಪ್ರೇಮಿಯಂತಾದ ಶ್ರೀದೇವಿ ಮಿಥುನ್ ಜೀವನದಿಂದ ದೂರ ಹೊರಟು ಹೋಗಿ ಬೋನಿ ಕಪೂರ್ ನನ್ನು ಮದುವೆಯಾಗಿಬಿಟ್ಟಿದ್ದಳು. ಅದೂ ಕೂಡಾ ಬೋನಿಗೆ 2ನೇ ಮದುವೆಯಾಗಿತ್ತು!

1979ರಲ್ಲಿ ಮಿಥುನ್ ರೂಪದರ್ಶಿ ಹೆಲೆನ್ ಲ್ಯೂಕ್ ಜೊತೆ ವಿವಾಹವಾಗಿದ್ದ, ಆದರೆ ಈ ವಿವಾಹ ಹೆಚ್ಚು ದಿನ ಬಾಳಲಿಲ್ಲವಾಗಿತ್ತು. ನಂತರ ನಟಿ ಯೋಗೀತಾ ಬಾಲಿಯನ್ನು ಮದುವೆಯಾಗಿದ್ದ. ದಂಪತಿಗೆ ಮೂವರು ಗಂಡು, ಒಬ್ಬಳು ಹೆಣ್ಣು ಮಗಳು.

ರಾಜಕೀಯ, ಬ್ರ್ಯಾಂಡ್ ಅಂಬಾಸಿಡರ್…

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ನಿಂದ ಮಿಥುನ್ ಚಕ್ರವರ್ತಿಯನ್ನು ರಾಜ್ಯಸಭಾ ಸದಸ್ಯರನ್ನಾಗಿ 2014ರಲ್ಲಿ ಆಯ್ಕೆ ಮಾಡಲಾಗಿತ್ತು. ಆದರೆ 2016ರಲ್ಲಿ ಮಿಥುನ್ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. 1980ರ ಸುಮಾರಿಗೆ ಮಿಥುನ್ ಪ್ಯಾನಸೋನಿಕ್ ಎಲೆಕ್ಟ್ರಾನಿಕ್ಸ್ ನ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದರು. ಜೀ ಟಿವಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್, ಡ್ಯಾನ್ಸ್ ಬಾಂಗ್ಲಾ ಡ್ಯಾನ್ಸ್ ರಿಯಾಲಿಟಿ ಶೋನ ಮುಖ್ಯ ತೀರ್ಪುಗಾರರಾಗಿ ಮಿಥುನ್ ಕಾರ್ಯನಿರ್ವಹಿಸುತ್ತಿದ್ದಾರೆ. ರಾಯಲ್ ಬೆಂಗಾಲ್ ಟೈಗರ್ಸ್ ಕ್ರಿಕೆಟ್ ತಂಡದ ಸಹ ಮಾಲೀಕರೂ ಹೌದು.

1990ರ ದಶಕದ ನಂತರ ಮಿಥುನ್ ಊಟಿಯಲ್ಲಿ ಮೊನಾರ್ಕ್ ಗ್ರೂಫ್ ಆಫ್ ಹೋಟೆಲ್ ನ ಮಾಲೀಕನಾಗುವ ಮೂಲಕ ಸಿನಿಮಾದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವುದನ್ನು ಕಡಿಮೆ ಮಾಡಿ, ಕಡಿಮೆ ಬಜೆಟ್ಟಿನ ಬಿ ದರ್ಜೆಯ ಸಿನಿಮಾಗಳಲ್ಲಿ ಅಭಿನಯಿಸತೊಡಗಿದ್ದರು. ಹೀಗೆ ಸಿನಿ ಜೀವನದಲ್ಲಿ ಯಶಸ್ವಿ ಚಿತ್ರಗಳ ಜೊತೆಗೆ ಹಲವು ಪ್ಲಾಪ್ ಸಿನಿಮಾಗಳನ್ನು ಕೊಟ್ಟಿದ್ದರೂ ಕೂಡಾ ಮಿಥುನ್ ಅಪಾರ ಅಭಿಮಾನಿಗಳ ಹೊಂದಿರುವ ನಟರಾಗಿದ್ದಾರೆ.

Comments are closed.