ಮನೋರಂಜನೆ

‘ಅಂಬಿ’ ನನ್ನ ಆಸ್ತಿ ಮತ್ತು ದೌರ್ಬಲ್ಯ: ವಿಷ್ಣುವರ್ಧನ್

Pinterest LinkedIn Tumblr


ವಿಷ್ಣು-ಅಂಬಿ ಸ್ನೇಹ ಅದ್ಯಾವ ಮಟ್ಟದಲ್ಲಿತ್ತು ಎಂದರೆ ‘ನಾನು ಸತ್ತಾಗ ನನ್ನ ಹೆಣವನ್ನು ಹೊರಲು ಅಂಬರೀಶ್ ಖಂಡಿತಾ ಎಲ್ಲಿದ್ದರೂ ಬಂದೇ ಬರುತ್ತಾನೆ’ ಎಂದು ಹೇಳಿದ್ದರು.

ಎಲ್ಲರಿಗೂ ಆತ ಮಹಾನ್ ಒರಟ, ಭಯಾನಕ ಕೋಪಿಷ್ಠ. ಆದರೂ ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡುವ ಅದ್ಭುತ ಹೃದಯವಂತ. ಅವರ ಸ್ನೇಹದ ಬಲೆಯಲ್ಲಿ ಒಮ್ಮೆ ಹೊಕ್ಕರೆ ಅದರಿಂದ ಹೊರ ಬರುವುದು ತುಸು ಕಷ್ಟ. ಅಂತಹ ಸ್ನೇಹಮಯಿ. ಇದು ರೆಬೆಲ್ ಸ್ಟಾರ್​ ಬಗೆಗೆ ಅವರ ಗೆಳೆಯರು ಹೇಳುವ ಮಾತುಗಳು.

ಹೌದು, ಅಂಬರೀಶ್ ಎಂಬ ವ್ಯಕ್ತಿ ಪ್ರತಿಯೊಂದರಲ್ಲೂ ಅಚ್ಚರಿಯಾಗಿಯೇ ಉಳಿದಿದ್ದರು. ಅವರ ದಿಟ್ಟತನ, ಅಸಾಮಾನ್ಯ ಗುಣಗಳು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಕಾಣುತ್ತಿತ್ತು. ಇವೆಲ್ಲದರ ನಡುವೆ ಅಂಬಿ-ವಿಷ್ಣು ಜೋಡಿ ಸ್ನೇಹಕ್ಕೆ ಭಾಷ್ಯ ಬರೆದಿದ್ದರು. ಗೆಳೆತನಕ್ಕೆ ಹೊಸ ಮೆರಗು ನೀಡಿದ್ದರು. ವಿಷ್ಣುವರ್ಧನ್ ಸದೃಯಿ, ಸ್ನೇಹಮಯಿ ಸ್ವಭಾವದವರು. ಯಾರಿಗೂ ನೋವಾಗದ ಹಾಗೆ ನಡೆದುಕೊಳ್ಳುತ್ತಿದ್ದರು. ಆದರೆ ರೆಬೆಲ್ ಸ್ಟಾರ್ ಇವೆಲ್ಲದಕ್ಕೂ ತದ್ವಿರುದ್ದ. ಸೀದಾಸಾದಾ ಮನುಷ್ಯ. ಬಿರುದಿಗೆ ತಕ್ಕಂತೆ ರೆಬೆಲ್ ಆಗಿರುತ್ತಿದ್ದರು. ಅಂತಹ ಅಂಬಿಯನ್ನು ವಿಷ್ಣು ಹಚ್ಚಿಕೊಂಡಿದ್ದರು. ಅಂಬಿ ಕೂಡ ವಿಷ್ಣುವನ್ನು ಜೀವದ ಗೆಳೆಯನನ್ನಾಗಿ ಮಾಡಿಕೊಂಡಿದ್ದರು.

ಇವರಿಬ್ಬರ ಸ್ನೇಹ ಎಂಥಹದ್ದು ಎಂದು ತಿಳಿದುಕೊಳ್ಳಲು ಈ ಎರಡು ಘಟನೆಗಳೇ ಸಾಕ್ಷಿ.

ಒಮ್ಮೆ ಅಂಬರೀಶ್ ಅವರು ವಿಷ್ಣುವರ್ಧನ್ ಅವರ ಮನೆಗೆ ಹೋಗಿದ್ದರು. ಮನೆಗೆ ಬರುತ್ತಿದ್ದಂತೆ ಅಂಬಿ ತಮ್ಮ ಶೈಲಿಯಲ್ಲಿ ಒಂದು ಡೈಲಾಗ್​ ಹೊಡೆದೇ ಬಿಟ್ಟರು. ಏನು ಇಲ್ಲಿ ಸೂಪರ್ ಸ್ಟಾರ್ ಮನೆಯಂತೆ ಗುಂಡು-ತುಂಡು ಏನೂ ಇಲ್ಲ ಎಂದುಬಿಟ್ಟರಂತೆ. ಗೆಳೆಯನ ಮನದ ಇಂಗಿತವನ್ನು ಅರಿತ ವಿಷ್ಣು ಮರುದಿನವೇ ಕುಚುಕುಗಾಗಿ ತಮ್ಮ ಮನೆಯಲ್ಲಿ ಸಣ್ಣದೊಂದು ಬಾರ್ ಕೌಂಟರ್ ನಿರ್ಮಿಸಿಬಿಟ್ಟರು. ಇಬ್ಬರ ನಡುವೆ ಅಂಥಹದ್ದೊಂದು ಒಡನಾಟವಿತ್ತು. ಅದೆಷ್ಟೋ ಸಲ ಅಂಬಿ ರಾತ್ರೋ ರಾತ್ರಿ ವಿಷ್ಣುಗೆ ಕಾಲ್ ಮಾಡಿ ಎಬ್ಬಿಸುತ್ತಿದ್ದರಂತೆ. ಕಾರಣ ಕೇಳಿದರೆ ಲೇ, ಕುಚುಕೂ, ಟೀವಿ ಆನ್​ ಮಾಡೋ, ನಿನ್ ಹಳೇ ಸಿನಿಮಾದ ಹಾಡು ಬರ್ತಿದೆ. ನೀನು ಸಖತ್ ಆಗಿ ಆ್ಯಕ್ಟ್ ಮಾಡಿದ್ದೀಯಾ.. ಅಪ್ಪಟ ಫ್ಯಾನ್​ ರೀತಿಯಲ್ಲಿ ಕಂಪ್ಲಿಮೆಂಟ್​ಗಳನ್ನು ಕೊಡುತ್ತಿದ್ದರು. ಒಂದಾರ್ಥದಲ್ಲಿ ಅಂಬಿ ವಿಷ್ಣುಪ್ರಿಯರಾಗಿದ್ದರು. ವಿಷ್ಣುಗೆ ಅಂಬಿಯೇ ಜೀವಾಳವಾಗಿದ್ದರು.

ಅಂಬಿ ನನ್ನ ಆಸ್ತಿ ಮತ್ತು ದೌರ್ಬಲ್ಯ
ಅಂಬಿ-ವಿಷ್ಣು ಚಂದನವನದ ಕುಚುಕುಗಳು ಎಂದು ಖ್ಯಾತಿ ಪಡೆದಿದ್ದರು.ಹಾಗೆ ನೋಡಿದರೆ ಸಿನಿಮಾಗೆ ಬರುವ ಮುಂಚೆ ಇವರಿಬ್ಬರಿಗೂ ಯಾವುದೇ ಪರಿಚಯವಿರಲಿಲ್ಲ. ಮೊದಲ ಚಿತ್ರ ‘ನಾಗರಹಾವು’ ಸ್ಕ್ರೀನ್ ಟೆಸ್ಟ್​ ವೇಳೆ ಇವರಿಬ್ಬರೂ ಪರಸ್ಪರ ಮೊದಲ ಬಾರಿ ಭೇಟಿಯಾಗಿದ್ದರು. ಮೊದಲ ಚಿತ್ರದಲ್ಲೇ ದುಷ್ಮನ್​ಗಳಾಗಿ ಮಾರಾಮಾರಿ ಸೀನ್. ರೀಲ್​ನಲ್ಲಿ ಗುದ್ದಾಡಿಕೊಂಡಿದ್ದ ಇವರು ರಿಯಲ್​ನಲ್ಲಿ ಪ್ರಾಣಮಿತ್ರರಾದರು. ಎಲ್ಲಿಯವರೆಗೆ ಅಂದರೆ ವಿಷ್ಣುಗೆ ದಿನಕ್ಕೆರಡು ಬಾರಿ ಅಂಬಿಯೊಂದಿಗೆ ಫೋನ್​ನಲ್ಲಿ ಮಾತನಾಡದೇ ಇದ್ದರೆ ಅದೇನೋ ಕಳೆದುಕೊಂಡಂತಾಗುತ್ತಿತ್ತಂತೆ. ವಿಷ್ಣು ಅಷ್ಟೊಂದು ಅಂಬಿಯನ್ನು ಹಚ್ಚಿಕೊಂಡಿದ್ದರು.

ನನ್ನ ಮತ್ತು ಅಂಬರೀಶ್ ಅವರ ಸ್ನೇಹ ಸಂಬಂಧದ ಬಗ್ಗೆ ದಿನಗಟ್ಟಲೆ, ಅಲ್ಲ ವರ್ಷಗಟ್ಟಲೇ ಬೇಕಾದಷ್ಟು ನಾನು ಮಾತನಾಡಬಲ್ಲೆ. ಆತ ಬರೀ ನನ್ನ ಸ್ನೇಹಿತನಾಗಿರಲಿಲ್ಲ. ನನ್ನ ಜೀವನದ ಒಂದು ಅವಿಭಾಜ್ಯ ಅಂಗವಾಗಿದ್ದಾನೆ ಎಂದು ಸಂದರ್ಶನವೊಂದರಲ್ಲಿ ವಿಷ್ಣು ಅಂಬರೀಶ್ ಬಗ್ಗೆ ಹೇಳಿಕೊಂಡಿದ್ದರು.

ಅಂಬರೀಶ್ ಬಿಟ್ಟರೆ ನಾನು ಅಷ್ಟೊಂದು ಹಚ್ಚಿಕೊಂಡ ಮತ್ತೊಬ್ಬ ಸ್ನೇಹಿತನಿಲ್ಲ. ಕಳೆದ ಮೂವತ್ತು ವರ್ಷದಲ್ಲಿ ನನ್ನ ಮತ್ತು ಆತನ ನಡುವೆ ಯಾವುದೇ ವೈಮನಸ್ಸು ಮೂಡೇ ಇಲ್ಲ. ಮುಂದೆ ಅಂತಹ ಮನಸ್ತಾಪ ಹುಟ್ಟುವುದು ಇಲ್ಲ. ಬಹುಶಃ ಪ್ರಪಂಚದಲ್ಲಿ ಯಾವುದೇ ಭಾಗದಲ್ಲಿ ತಾರೆಯರಿಬ್ಬರು ಇಷ್ಟೊಂದು ಅನ್ಯೋನ್ಯತೆಯಿಂದ ಪ್ರೀತಿ, ವಿಶ್ವಾಸದಿಂದ ಇರಲು ಸಾಧ್ಯವಿಲ್ಲ ಅನಿಸುತ್ತದೆ ಎಂದು ವಿಷ್ಣುದಾದಾ ಹೇಳಿಕೊಂಡಿದ್ದರು.

ವಿಷ್ಣುವರ್ಧನ್ ಜೊತೆಗೆ ಅಂಬರೀಶ್ ಕೂಡ ಅದೇ ರೀತಿಯಾಗಿ ನಡೆದುಕೊಂಡಿದ್ದರು. ವಿಷ್ಣುವಿನ ತಾಯಿ ಕೂಡ ಅಂಬರೀಶ್ ಅವರನ್ನು ಸ್ವತಃ ಮಗನಂತೆ ನೋಡುತ್ತಿದ್ದರು. ಆಕೆಗೂ ಅಂಬಿ ಎಂದರೆ ಪಂಚಪ್ರಾಣ. ಅದೊಂದು ದಿನ ಅನಾರೋಗ್ಯದಿಂದ ಬಳಲುತ್ತಿದ್ದ ವಿಷ್ಣುವರ್ಧನ್ ತಾಯಿ ಅಂಬಿಯನ್ನು ನೋಡಬೇಕೆಂದು ಹಠ ಹಿಡಿದಿದ್ದಳು. ಆದರೆ ಈ ವಿಷಯ ತಿಳಿದಾಗ ರೆಬೆಲ್ ಸ್ಟಾರ್ ದೂರದೂರಿನಲ್ಲಿ ಶೂಟಿಂಗ್​ನಲ್ಲಿದ್ದರು. ಇದು ತಿಳಿಯುತ್ತಿದ್ದಂತೆ ಶೂಟಿಂಗ್​ ನಿಲ್ಲಿಸಿ ಅಂಬಿ ಓಡಿ ಬಂದಿದ್ದರು.

ವಿಷ್ಣು-ಅಂಬಿ ಸ್ನೇಹ ಅದ್ಯಾವ ಮಟ್ಟದಲ್ಲಿತ್ತು ಎಂದರೆ ‘ನಾನು ಸತ್ತಾಗ ನನ್ನ ಹೆಣವನ್ನು ಹೊರಲು ಅಂಬರೀಶ್ ಖಂಡಿತಾ ಎಲ್ಲಿದ್ದರೂ ಬಂದೇ ಬರುತ್ತಾನೆ’ ಎಂಬ ವಿಶ್ವಾಸ ನನಗಿದೆ ಎಂದಿದ್ದರು ವಿಷ್ಣುದಾದಾ. ಅಂತಹದೊಂದು ದೊಡ್ಡ ಗುಣ ಅವನಲ್ಲಿದೆ. ನಿಮಗೆಲ್ಲ ತೀರಾ ಪ್ರಬುದ್ಧನಂತೆ ಕಾಣಿಸುವ ಅಂಬಿ ಕೆಲವೊಮ್ಮೆ ಪುಟ್ಟ ಮಕ್ಕಳಂತೆ ವರ್ತಿಸುತ್ತಾನೆ ಎಂದು ಸ್ವತಃ ವಿಷ್ಣುವರ್ಧನ್ ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದರು. ಆದರೆ ಆ ಮಾತುಗಳು ಅಂಬಿ ಎಂಬ ರೆಬೆಲ್​ ಸ್ಟಾರ್​ನ್ನು ನೋಡಿದವರಿಗೆ ಆಗೋಚರದಂತಿತ್ತು.

ಸಾಹಸಸಿಂಹ ಕಣ್ಮುಚ್ಚಿದಾಗ ಅದೆಲ್ಲಿಂದಲೋ ಅಂಬಿ ಓಡೋಡಿ ಬಂದಿದ್ದರು. ಎಳೇ ಮಗುವಿನಂತೆ ಕಣ್ಣೀರಿಟ್ಟದ್ದರು. ಆಪ್ತಮಿತ್ರನನ್ನು ನೋಡಿ ಒಡಹುಟ್ಟಿದವರಿಗಿಂತಲೂ ಹೆಚ್ಚಾಗಿ ರೋಧಿಸಿದ್ದರು. ಅಂದೇ ರೆಬೆಲ್ ಸ್ಟಾರ್ ಆಗಿ ಮೆರೆದ ಕರುನಾಡ ಕರ್ಣನ ಮುಗ್ಧತೆ ಹೊರ ಜಗತ್ತಿಗೆ ಗೊತ್ತಾಗಿದ್ದು. ವಿಷ್ಣುದಾದ ಹೇಳಿದ ಮಾತು ಅಕ್ಷರಶಃ ಸತ್ಯವಾಗಿತ್ತು ಎಂಬುದು ಇಡೀ ಜಗತ್ತಿಗೆ ತಿಳಿದು ಬಂದಿದ್ದು. ಇದಕ್ಕೆ ಅಲ್ಲವೇ ಪ್ರಾಣ ಸ್ನೇಹಿತರು ಅನ್ನುವುದು.

Comments are closed.