ಮನೋರಂಜನೆ

ಏನಾಗಲ್ಲ ಬಾರ್ಲಾ, ಚುಚ್ಚು..! ಖಳನಟ ಕೋಟೆ ಪ್ರಭಾಕರ್​ಗೆ ಅಂಬರೀಷ್!

Pinterest LinkedIn Tumblr


ಹಿರಿಯ ನಟ ಅಂಬರೀಷ ಅವರೊಂದಿಗೆ ಅಭಿನಯಿಸುವ ಪ್ರತಿ ಕಲಾವಿದನಿಗೂ ಮನಸ್ಸಿನ ಮೂಲೆಯಲ್ಲೋ ಸ್ವಲ್ಪ ಭಯ ಹಾಗೂ ಅಳುಕು ಇದ್ದೇ ಇರುತ್ತದೆ. ಅದರಲ್ಲೂ ಗಡುಸು ಧ್ವನಿಯಲ್ಲಿ ಎಲ್ಲರನ್ನೂ ತಮಾಷೆ ಮಾಡುತ್ತಾ ಮಾತನಾಡಿಸಿದರೂ ನಟನೆಯ ವಿಷಯದಲ್ಲಿ ಅವರೊಂದಿಗೆ ಅಭಿನಯಿಸುವಾಗ ಕಲಾವಿದರು ಹೆದರುತ್ತಿದ್ದರು.

ಹೌದು, ಹೆದರುತ್ತಾ ಅಭಿನಯಿಸುತ್ತಿದ್ದ ಸಹ ಕಲಾವಿದರಿಗೆ ಸ್ಫೂರ್ತಿಯ ಚಿಲುಮೆಯಾಗುತ್ತಿದ್ದವರು ಅಂಬಿ. ಇದಕ್ಕೆ ಸಾಕ್ಷಿ ಎಂಬಂತೆ ಖಳನಟ ಕೋಟೆ ಪ್ರಭಾಕರ್​ ಅವರು ಅಂಬಿಯೊಂದಿಗೆ ತಮಗಾದ ಒಂದು ಅನುಭವವನ್ನು ಹಂಚಿಕೊಂಡಿದ್ದಾರೆ.

`ವೀರ ಪರಂಪರೆ’ ಚಿತ್ರೀಕರಣದಲ್ಲೊಂದು ಪಜೀತಿಯಾಗಿತ್ತು. ಹೊಸ ನಾಯಕರಾದರೆ ನಮಗೆ ಹೊಡೆದಾಡುವುದು ಸಲೀಸು. ಹಿರಿಯ ನಟರೊಂದಿಗೆ ಸೆಣೆಸುವಾಗ ಭಯ ಕಾಡುತ್ತದೆ. ಆಕಸ್ಮಾತಾಗಿ ಅವರಿಗೆ ಏಟು ಬಿದ್ದೀತು ಎನ್ನುವ ಆತಂಕ.

`ವೀರ ಪರಂಪರೆ’ ಚಿತ್ರದಲ್ಲಿ ಅಂಬರೀಷ ಅವರು ಧ್ಯಾನಸ್ಥರಾಗಿ ಕುಳಿತಿರುತ್ತಾರೆ. ಹಿಂದಿನಿಂದ ಬರುವ ನಾನು ಅವರ ಬೆನ್ನಿಗೆ ಚೂರಿ ಹಾಕುವ ದೇಶ್ಯ ಚಿತ್ರಿಸಬೇಕಿತ್ತು. ಇನ್ನೇನು ಇರಿಯಬೇಕು ಎನ್ನುವಾಗ ನಟ ಶೋಭರಾಜ್ ಅಡ್ಡ ಬಂದು ಚೂರಿ ಹಿಡಿಯುತ್ತಾರೆ.

ಕ್ಲೋಸ್‍ಅಪ್ ಶಾಟ್ ಆದ್ದರಿಂದ ನಿಜವಾದ ಚೂರಿಯನ್ನೇ ಕೊಟ್ಟಿದ್ದರು. ನಿರ್ದೇಶಕರು ಆ್ಯಕ್ಷನ್​ ಎನ್ನುತ್ತಿದ್ದಂತೆ ನಾನು ಚೂರಿ ಹಿಡಿದು ಸಿದ್ಧನಾದೆ. ಅಂಬರೀಷ ಅವರೇನೋ ಆರಾಮವಾಗಿ ಕುಳಿತಿದ್ದರು. ಆದರೆ ನನಗೇ ಭಯ, ಆತಂಕ. ನಾನು ತಡವರಿಸುತ್ತಿದ್ದುದನ್ನು ನೋಡಿದ ಅಂಬರೀಷ ಅವರು, `ಏನಾಗಲ್ಲ ಬಾರ್ಲಾ, ಚುಚ್ಚೋ..!’ ಎಂದು ಗದರಿಕೊಂಡರು. ನನಗೆ ಇನ್ನೂ ಭಯವಾಯ್ತು! ಕೊನೆಗೆ ಸಾವರಿಸಿಕೊಂಡು ಹೇಗೋ ಶಾಟ್ ಮುಗಿಸಿದೆ.

ನಿರೂಪಣೆ: ಶಶಿಧರ್​ ಚಿತ್ರದುರ್ಗ

Comments are closed.