ಮನೋರಂಜನೆ

ಅಂಬರೀಷ್ ಕಾರಿನಲ್ಲಿ ಕುಳಿತ್ತಿದ್ದ ನಟ ಅಶ್ವಥ್​ ಇಳಿದು ಬಸ್​ ಏರಿದ್ದೇಕೆ ?

Pinterest LinkedIn Tumblr


ಅಂಬಿಗೆ ಸುಮ್ಮನೆ ರೆಬೆಲ್​ ಅನ್ನೋ ಪಟ್ಟ ಸಿಕ್ಕಿಲ್ಲ. ಯಾರ ಮಾತೂ ಕೇಳದ ಅವರ ವರ್ತನೆ ಹಾಗೂ ಏನೇ ಆದರೂ ತಿರುಗಿ ಬೀಳುತ್ತಿದ್ದ ಅವರ ವ್ಯಕ್ತಿತ್ವವೇ ಇದಕ್ಕೆಲ್ಲ ಕಾರಣ. ಇದರಿಂದಾಗಿಯೇ ಯಾರೇ ಆದರೂ ಅವರ ಬಳಿ ಮಾತನಾಡಲೂ ನೂರು ಬಾರಿ ಯೋಚಿಸುತ್ತಿದ್ದರು.

ಅವರ ಈ ರೆಬೆಲ್​ ಸ್ವಭಾವ ಕೇವಲ ಮಾತಿನಲ್ಲಿ ಮಾತ್ರವಲ್ಲ, ಅವರ ಕೃತಿಯಲ್ಲೂ ಇತ್ತಿ. ಅವರಿಗೆ ಕರಿನ ಕ್ರೇಜ್​ ತುಂಬಾ ಇತ್ತಂತೆ. ಅದರಲ್ಲೂ ಬೆಂಗಳೂರು-ಮೈಸೂರು ರಸ್ತೆಯಲ್ಲಿ ಕಾರಿನ ಸ್ಟೇರಿಂಗ್​ ಹಿಡಿದರೆ ಸಾಕು ಅದು ಮೈಸೂರಿನಲ್ಲೇ ನಿಲ್ಲುತ್ತಿತ್ತು. ಹೀಗೆ ಅಂಬಿ ಬಗ್ಗೆ ತಿಳಿದೋ -ತಿಳಿಯದೆಯೋ ಹಿರಿಯ ನಟ ಅಶ್ವಥ್​ ಅವರು ಅಂಬರೀಷರ ಜತೆ ಕಾರಿನಲ್ಲಿ ಕುಳಿತು ಬಿಡುತ್ತಾರೆ. ಆಗ ಅವರಿಗಾದ ಅನುಭವವನ್ನು ಅವರೇ ಒಮ್ಮೆ ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ…

ಹಿರಿಯ ನಟ ಕೆ.ಎಸ್.ಅಶ್ವಥ್ ಮೈಸೂರು ನಿವಾಸಿ. ಆರಂಭದಲ್ಲಿ ನಟ ಅಂಬರೀಷ ಕೂಡ ಮೈಸೂರಿನಲ್ಲೇ ನೆಲೆಸಿದ್ದರು. ಒಮ್ಮೆ ಶೂಟಿಂಗ್ ನಿಮಿತ್ತ ಇಬ್ಬರೂ ಮೈಸೂರಿನಿಂದ ಬೆಂಗಳೂರಿಗೆ ಬರಬೇಕಿರುತ್ತದೆ. `ನೀವು ಬೆಂಗಳೂರಿಗೆ ಪ್ರತ್ಯೇಕವಾಗಿ ಹೋಗೋದೇಕೆ? ನನ್ ಜೊತೆ ಕಾರಿನಲ್ಲಿ ಬಂದ್ಬಿಡಿ’ ಎಂದು ಅಂಬರೀಷ, ಅಶ್ವಥ್‍ರನ್ನು ಆಹ್ವಾನಿಸಿದ್ದರು. ಕರೆಗೆ ಓಗೊಟ್ಟ ಅಶ್ವಥ್, ಅಂಬಿ ಕಾರನ್ನು ಏರಿದ್ದಾರೆ.

ಏರು ಯೌವ್ವನದ ಅಂಬರೀಶ್‍ಗೆ ಆಗ ಕಾರುಗಳ ಬಗ್ಗೆ ವಿಪರೀತ ಕ್ರೇಜ್. ರೆಬೆಲ್ ಹೀರೋಗೆ ವೇಗವಾಗಿ ಡ್ರೈವ್ ಮಾಡೋದು ಅಂದರೆ ಬಲು ಇಷ್ಟ. ಮೈಸೂರು – ಬೆಂಗಳೂರು ಮಾರ್ಗವನ್ನು ಕಾರಿನಲ್ಲಿ ಅವರು ಒಂದೂವರೆ ಗಂಟೆಯಲ್ಲೇ ಕ್ರಮಿಸುತ್ತಾರೆ ಎನ್ನುವ ಕತೆಗಳೆಲ್ಲ ಆಗ ಚಾಲ್ತಿಯಲ್ಲಿದ್ದವು! ಇದು ಗೊತ್ತಿದ್ದೋ, ಗೊತ್ತಿಲ್ಲದೆಯೋ ಶಿಸ್ತಿನ ವ್ಯಕ್ತಿ ಅಶ್ವಥ್ ಕಾರು ಹತ್ತಿದ್ದಾರೆ. ಕಾರು ಹತ್ತಿದ ಹತ್ತೇ ನಿಮಿಷಕ್ಕೆ ಅಂಬರೀಷರ ವೇಗ ಅಶ್ವಥ್‍ರಲ್ಲಿ ನಡುಕ ಹುಟ್ಟಿಸಿದೆ.

`ಬೇಡ ಕಣಯ್ಯಾ, ನಿಧಾನಕ್ಕೆ ಕಾರು ಓಡ್ಸೋ..’ ಎಂದಿದ್ದಾರೆ ಅಶ್ವಥ್. `ಸುಮ್ನೆ ಕುತ್ಕೋಳ್ರೀ, ನನಗೆಲ್ಲ ಗೊತ್ತಿದೆ. ನಿಮ್ಮನ್ನ ನಾನು ಹುಷಾರಾಗಿ ಕರೆದುಕೊಂಡು ಹೋಗುತ್ತೀನಿ’ ಎಂದು ತಮ್ಮ ರೆಬೆಲ್ ಶೈಲಿಯಲ್ಲೇ ಅಂಬರೀಷ ಗದರಿಕೊಂಡಿದ್ದಾರೆ.

ಮಾತು ಕೇಳದ ಅಂಬಿ ಮೇಲೆ ಅಶ್ವಥ್‍ರಿಗೆ ಕೋಪ, ಮತ್ತೊಂದೆಡೆ ಭಯ. ಆಗ ಅವರಿಗೆ ಒಂದು ಐಡಿಯಾ ಹೊಳೆಯುತ್ತದೆ. `ಸ್ವಲ್ಪ ಕಾರು ನಿಲ್ಸಯ್ಯಾ, ನನಗೆ ಮೂತ್ರವಿಸರ್ಜನೆಗೆ ಅರ್ಜೆಂಟ್ ಆಗಿದೆ’ ಎನ್ನುತ್ತಾರೆ.

ಅಂಬಿಗೆ ಕಾರು ನಿಲ್ಲಿಸುವುದು ಅನಿವಾರ್ಯವಾಗುತ್ತದೆ. ಕಾರಿನಿಂದ ಇಳಿದ ಅಶ್ವಥ್, `ನಿನಗೆ ದೊಡ್ಡದೊಂದು ನಮಸ್ಕಾರ ! ಇನ್ಮೇಲೆ ನಿನ್ನ ಕಾರು ಹತ್ತೋಲ್ಲ..’ ಎಂದು ಹೊರಡುತ್ತಾರೆ. ಅವರ ಅದೃಷ್ಟಕ್ಕೆ ಅದೇ ವೇಳೆಗೆ ರಸ್ತೆಯಲ್ಲಿ ಮೈಸೂರು – ಬೆಂಗಳೂರು ಬಸ್ ಕಾಣಿಸುತ್ತದೆ. ಕೈ ಅಡ್ಡ ಹಾಕಿದವರೇ ಬಸ್ ಹತ್ತಿಕೊಂಡು ಬೆಂಗಳೂರಿಗೆ ಹೊರಡುತ್ತಾರೆ.

ನಿರೂಪಣೆ: ಶಶಿಧರ್​ ಚಿತ್ರದುರ್ಗ
(ಇದು ಕೆ.ಎಸ್.ಅಶ್ವಥ್ ಅವರು ಅಶ್ವತ್ಥ ನಾರಾಯಣರಿಗೆ ಹೇಳಿದ ಘಟನೆ)
ಚಿತ್ರಗಳು : ಪ್ರಗತಿ ಅಶ್ವತ್ಥ ನಾರಾಯಣ

Comments are closed.