ಮನೋರಂಜನೆ

ಲಾಲು ಪ್ರಸಾದ್‌ ಯಾದವ್‌ ಸೊಸೆ ಐಶ್ವರ್ಯಾ ರಾಜಕೀಯಕ್ಕೆ?

Pinterest LinkedIn Tumblr


ಪಟ್ನಾ : ಬಹು ಕೋಟಿ ಮೇವು ಹಗರಣದಲ್ಲಿ ಜೈಲು ಪಾಲಾಗಿ ಪ್ರಕೃತ ಮುಂಬಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲು ಪ್ರಸಾದ್‌ ಯಾದವ್‌ ಅವರ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಪಕ್ಷದ ಸ್ಥಾಪನಾ ದಿನದ ಪೋಸ್ಟರ್‌ ಈಗ ಹೊಸ ಊಹಾಪೋಹಗಳಿಗೆ ಕಾರಣವಾಗಿದೆ. ಆರ್‌ಜೆಡಿ ಸ್ಥಾಪನಾ ದಿನ ಇದೇ ಜುಲೈ 5ರಂದು ನಡೆಯಲಿದೆ.

ಸ್ಥಾಪನಾ ದಿನದ ಪೋಸ್ಟರ್‌ನಲ್ಲಿ ಈಚೆಗೆ ವಿವಾಹಿತರಾದ ಲಾಲು ಪುತ್ರ ತೇಜ್‌ ಪ್ರತಾಪ್‌ ಯಾದವ್‌ ಮತ್ತು ಅವರ ಪತ್ನಿ ಐಶ್ವರ್ಯಾ ರಾಯ್‌ ವಧೂವರರಾಗಿ ಕೈಮುಗಿಯುವ ಫೋಟೋ ಇದೆ. ಯಾದವ್‌ ಕುಟುಂಬದ ನೂತನ ವಧು ಐಶ್ವರ್ಯಾ ಈಗಿನ್ನು ರಾಜಕೀಯ ರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಸಂದೇಶವನ್ನು ಇದು ನೀಡುವಂತಿದೆ. ಹಾಗಿದ್ದರೂ ಐಶ್ವರ್ಯಾ ರಾಜಕಾರಣ ಪ್ರವೇಶಿಸುವುದಿಲ್ಲ ಎಂದು ತೇಜ್‌ ಪ್ರತಾಪ್‌ ಈ ಹಿಂದೆ ಪದೇ ಪದೇ ಹೇಳಿದ್ದರು.

ಇದೇ ವೇಳೆ ಆರ್‌ಜೆಡಿ ಸ್ಥಾಪನಾ ದಿನದ ಆಹ್ವಾನ ಪತ್ರಿಕೆ ಇನ್ನೊಂದು ರೀತಿಯ ವಿವಾದವನ್ನು ಹುಟ್ಟು ಹಾಕಿದೆ. ಅದೆಂದರೆ ಈ ಆಹ್ವಾನ ಪತ್ರಿಕೆಯಲ್ಲಿ ಲಾಲು ಪುತ್ರ ತೇಜ್‌ ಪ್ರತಾಪ್‌ ಯಾದವ್‌ ಮತ್ತು ಪುತ್ರಿ ಮೀಸಾ ಭಾರ್ತಿ ಅವರ ಹೆಸರೇ ನಾಪತ್ತೆಯಾಗಿವೆ.

ಸ್ಥಾಪನಾ ದಿನದ ಕಾರ್ಯಕ್ರಮವನ್ನು ಬಹುತೇಕ ಲಾಲು ಕಿರಿಯ ಪುತ್ರ ತೇಜಸ್ವಿ ಯಾದವ್‌ ಉದ್ಘಾಟಿಸುವ ಸಾಧ್ಯತೆ ಇದೆ. ತೇಜಸ್ವಿ ಅವರು ಬಿಹಾರದಲ್ಲಿ ಈ ಹಿಂದೆ ಇದ್ದ ಮಹಾಘಟಬಂಧನ ಸರಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದರು.

ಆರ್‌ಜೆಡಿ ವಕ್ತಾರ ಚಿತ್ತರಂಜನ್‌ ಗರ್ಗ್‌ ಹೇಳಿರುವ ಪ್ರಕಾರ ಪಕ್ಷದ ಸ್ಥಾಪನಾ ದಿನ ಪಟ್ನಾದಲ್ಲಿನ ಪಕ್ಷದ ಕಾರ್ಯಾಲಯದಲ್ಲಿ ನಡೆಯಲಿದೆ; ಆರ್‌ಜೆಡಿ ಮುಖ್ಯಸ್ಥ ಡಾ. ರಾಮಚಂದ್ರ ಪುರ್ವೆ ಉಸ್ತುವಾರಿ ನಡೆಸಲಿದ್ದಾರೆ. ಲಾಲು ಪ್ರಸಾದ್‌ ಯಾದವ್‌ ಅವರು ಪ್ರಕೃತ ಮುಂಬಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಪಕ್ಷದ ಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ತೇಜಸ್ವಿ ಯಾದವ್‌ ಅವರೇ ಮುಖ್ಯ ವ್ಯಕ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಪ್ರಭಾತ್‌ ಖಬರ್‌ ವರದಿ ಮಾಡಿದೆ.

Comments are closed.