ಕರ್ನಾಟಕ

ಸಿದ್ಧಗಂಗಾ ಶ್ರೀಗಳಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಹುಲ್ ಗಾಂಧಿ

Pinterest LinkedIn Tumblr

ಬೆಂಗಳೂರು: ಕಾಯಕ ಯೋಗಿ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಜಿಗಳ 111ನೇ ಜನ್ಮ ದಿನೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನಡೆದಾಡುವ ದೇವರಿಗೆ ಕನ್ನಡದಲ್ಲೇ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.

ಇಂದು 111ನೇ ವಸಂತಕ್ಕೆ ಕಾಲಿಟ್ಟ ಸಿದ್ದಗಂಗಾ ಶ್ರೀಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿ ಕನ್ನಡದಲ್ಲೇ ಟ್ವೀಟ್​ ಮಾಡಿದ್ದಾರೆ.

ದೇಶದ ಅತ್ಯಂತ ವಂದನೀಯ ಮತ್ತು ಪೂಜನೀಯ ಗುರುಗಳಲ್ಲಿ ಪೂಜ್ಯ ಶ್ರೀಗಳು ಒಬ್ಬರಾಗಿದ್ದಾರೆ. ತುಮಕೂರಿನ ಶ್ರೀ ಸಿದ್ದಗಂಗಾ ಮಠ ಭಾರತ ದೇಶದ ಹಿರಿಮೆಯಾಗಿದೆ. ಸಮಾಜಕ್ಕೆ ಶಕ್ತಿ ತುಂಬುತ್ತಾ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಸಿದ್ದಗಂಗಾ ಮಠ ಮುಂಚೂಣಿಯಲ್ಲಿದೆ. ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಸುದೀರ್ಘ ಆಯುಷ್ಯ ಮತ್ತು ಆರೋಗ್ಯಕ್ಕಾಗಿ ಸದಾ ಪ್ರಾರ್ಥಿಸುತ್ತೇನೆ. ಶ್ರೀಗಳ ಮಾರ್ಗದರ್ಶನ ದೇಶಕ್ಕೆ ನಿರಂತರವಾಗಿ ಸಿಗಲಿ ಎಂದು ಮೋದಿ ಹಾರೈಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೂ ಸಹ ಶಿವಕುಮಾರ ಸ್ವಾಮೀಜಿಗಳಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಕಾಯಕಯೋಗಿ ಬಸವಣ್ಣನವರ ತತ್ವಗಳನ್ನು ಸಮಾಜದ ಉನ್ನತಿಗಾಗಿ ಪಸರಿಸಲು ಜೀವನವನ್ನೇ ಮುಡಿಪಾಗಿಟ್ಟಿರುವ ಶ್ರೀ ಶಿವಕುಮಾರ ಸ್ವಾಮಿಜಿಗಳಿಗೆ ಜನ್ಮ ದಿನದ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಶ್ರೀಗಳಿಗೆ ಶುಭಾಶಯ ಕೋರಿದ್ದು, ಕಾಯಕ ಯೋಗಿ ಬಸವಣ್ಣನವರ ಸಮ ಸಮಾಜ, ದುರ್ಬಲರ ಸಬಲೀಕರಣ ಮುಂತಾದ ತತ್ವಗಳಿಗೆ ಸಂಪೂರ್ಣ ಬದ್ಧರಾಗಿ ಸಾಮಾಜಿಕ ಸೇವೆಯನ್ನೇ ಬದುಕನ್ನಾಗಿಸಿಕೊಂಡಿರುವ ಸಿದ್ದಗಂಗಾ ಮಠಾಧೀಶರಾದ ತ್ರಿವಿಧ ದಾಸೋಹಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರು 111ನೇ ಜನ್ಮದಿನೋತ್ಸವ ಆಚರಣೆ ಮಾಡಿಕೊಳ್ಳುತ್ತಿರುವುದು ಅತ್ಯಂತ ಸಂತಸ ನೀಡಿದೆ. ನಿಮ್ಮ ಸೇವೆ ಹೀಗೆ ನಿರಂತರ ಸಾಗಲಿ ಎಂದು ಟ್ವೀಟ್ ಮಾಡಿದ್ದಾರೆ.

Comments are closed.