ಮನೋರಂಜನೆ

ಕ್ವೀನ್‌ ಕಂಗನಾ ರಾಣಾವತ್‌ ರಾಜಕೀಯ ಸೇರ್ತಾರಾ ? ಇಲ್ಲಿದೆ ಸತ್ಯ

Pinterest LinkedIn Tumblr


ಮುಂಬಯಿ: ಇರುವುದನ್ನು ಇರುವ ಹಾಗೆಯೇ ಮುಲಾಜಿಲ್ಲದೆ ಹೇಳಿ ಬಿಡುವ ಛಾತಿ ಹೊಂದಿರುವ ಹಾಗೂ ಅದೇ ಕಾರಣಕ್ಕೆ ಸದಾ ವಿವಾದಕ್ಕೆ ಗುರಿಯಾಗುತ್ತಲೇ ಬಂದಿರುವ ಬಾಲಿವುಡ್‌ ನಟಿ ಕಂಗನಾ ರಾಣಾವತ್‌ ರಾಜಕೀಯ ಸೇರ್ತಾರಾ ?

ಇಂಥದ್ದೊಂದು ದಟ್ಟ ವದಂತಿ ಈಗ ಕೆಲ ದಿನಗಳಿಂದ ಮಾಧ್ಯಮ ವರ್ತುಲಗಳಲ್ಲಿ ಹರಿದಾಡುತ್ತಿದೆ. ಕಂಗನಾ ರಾಣಾವತ್‌ ರಾಜಕೀಯ ಸೇರುವ ಇರಾದೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂಬ ವರದಿಗಳು ಎಲ್ಲರ ಹುಬ್ಬೇರಿಸಿವೆ.

ಈ ವರದಿಗಳ ಸತ್ಯಾಂಶದ ಬಗ್ಗೆ ಕಂಗನಾ ಪ್ರತಿಕ್ರಿಯೆ ಏನು ಎಂದು ತಿಳಿಯುವ ಕುತೂಹಲದಲ್ಲಿ ಬಾಂಬೇ ಟೈಮ್ಸ್‌ ಕಂಗನಾ ವಕ್ತಾರೆಯನ್ನು ಸಂಪರ್ಕಿಸಿದಾಗ, ಆಕೆ ‘ಈ ಬಗೆಯ ವದಂತಿಗಳು ಕೇವಲ ಊಹಾಪೋಹದ ವರದಿಗಳು ಮತ್ತು ಅವು ಸಂಪೂರ್ಣ ಸುಳ್ಳು; ಕಂಗನಾ ರಾಣಾವತ್‌ ರಾಜಕೀಯ ಸೇರುವ ಪ್ರಶ್ನೆಯೇ ಇಲ್ಲ’ ಎಂದು ಕಡ್ಡಿ ಮುರಿದಂತೆ ಉತ್ತರಿಸಿದ್ದಾರೆ.

ಈಚೆಗೆ ಬಿಕಾನೇರ್‌ನಲ್ಲಿ ಮಣಿ ಕರ್ಣಿಕಾ ಚಿತ್ರದ ಶೂಟಿಂಗ್‌ ನಡೆಯುತ್ತಿದ್ದ ವೇಳೆ ಕಂಗನಾ ತಾನು ‘ರಾಜಕೀಯ ಸೇರುವ ಬಗೆಗಿನ ವದಂತಿಗಳು, ವರದಿಗಳು ಸಂಪೂರ್ಣ ಸುಳ್ಳು; ಅವುಗಳಲ್ಲಿ ಯಾವುದೇ ಹುರುಳಿಲ್ಲ’ ಎಂದು ಖುದ್ದಾಗಿ ಹೇಳಿದ್ದರು. ತನ್ನ ಮುಂದೆ ಸಾಲು ಸಾಲು ಚಿತ್ರಗಳೇ ಇರುವಾಗ ತಾನು ಅವುಗಳನ್ನು ಬಿಟ್ಟು ರಾಜಕೀಯವನ್ನು ಯಾಕಾದರೂ ಸೇರಿಯೇನು ? ಎಂದು ಕಂಗನಾ ಮಾಧ್ಯಮದವರನ್ನೇ ಪ್ರಶ್ನಿಸಿದ್ದರು.

ಕಂಗನಾ ರಾಣಾವತ್‌ ಪ್ರಕೃತ “ಮಣಿಕರ್ಣಿಕಾ : ದಿ ಕ್ವೀನ್‌ ಆಫ್ ಝಾನ್ಸಿ’ ಚಿತ್ರದಲ್ಲಿ ರಾಣಿ ಲಕ್ಷ್ಮೀ ಬಾಯಿಯಾಗಿ ನಟಿಸುತ್ತಿದ್ದಾಳೆ. ಕೃಷ್‌ ನಿರ್ದೇಶನದ ಈ ಚಿತ್ರ ಈ ವರ್ಷವೇ ತೆರೆ ಕಾಣಲಿದೆ.

-ಉದಯವಾಣಿ

Comments are closed.