ಕರಾವಳಿ

ರೈಲ್ವೆ ಮೇಲ್ಸೇತುವೆ ಕೆಳಗಡೆ ಸಿಲುಕಿಕೊಂಡ ಕಂಟೈನರ್ : ರಸ್ತೆ ಸಂಚಾರ ಬಂದ್ – ಪರಾದಾಡಿದ ವಿದ್ಯಾರ್ಥಿಗಳು

Pinterest LinkedIn Tumblr

ಬಂಟ್ವಾಳ, ಫೆಬ್ರವರಿ. 7: ಬೃಹತ್ ಗಾತ್ರದ ಕಂಟೈನರೊಂದು ರೈಲ್ವೆ ಮೇಲ್ಸೇತುವೆ ಕೆಳಗಡೆ ಸಿಲುಕಿಕೊಂಡು ಕೆಲ ತಾಸು ವಾಹನ ಸಂಚಾರಕ್ಕೆ ಅಡಚಣೆಯುಂಟಾದ ಘಟನೆ ಪುತ್ತೂರು ತಾಲೂಕಿನ ಮಿತ್ತೂರಿನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.

ಬುಧವಾರ ಮುಂಜಾನೆ ಈ ಕಂಟೈನರ್ ರೈಲ್ವೆ ಮೇಲ್ಸೇತುವೆ ಕೆಳಗಡೆ ಸಿಲುಕಿಕೊಂಡಿದ್ದು ಪರಿಣಾಮ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಡಕುಂಟಾಯಿತು. ಮಾಣಿ-ಪುತ್ತೂರು ನಡುವಿನ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿರುವುದರಿಂದ‌ ಹೆದ್ದಾರಿಯಲ್ಲಿ ಸಂಚರಿಸುವವರು ಮುಂದೆ ಹೋಗಲಾಗದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ಮಾತ್ರವಲ್ಲದೇ ಘಟನೆಯ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನಗಳು ಸಂಚರಿಸದಷ್ಟು ರಸ್ತೆ ಬ್ಲಾಕ್ ಆಗಿತ್ತು. ಇದರಿಂದ ಮಾಣಿ, ನೇರಳಕಟ್ಟೆ, ಕೊಡಾಜೆಗಳಲ್ಲಿನ ಸಾರ್ವಜನಿಕರು, ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ತೊಂದರೆಗೊಳಗಾದರು.

ಬೃಹತ್ ಕಂಟೈನರ್ ಲಾರಿಯು ರೈಲ್ವೇ ಮೇಲ್ಸೇತುವೆಯ ಅಡಿಯಿಂದ ಸಂಚರಿಸುವ ವೇಳೆ ಈ ಅವಘಡ ಸಂಭವಿಸಿದೆ. ಕಂಟೈನರ್ನ ಗಾತ್ರ ಹಿರಿದಾಗಿದ್ದುದರಿಂದ ಸೇತುವೆಯ ಕೆಳಭಾಗದಲ್ಲಿ ಇಂದು ಸಂಚರಿಸುವುದು ತ್ರಾಸದಾಯಕವಾಗಿತ್ತು. ಆದರೂ ಚಾಲಕ ಕಂಟೈನರ್ ಅನ್ನು ಸೇತುವೆಯಡಿ ನುಗ್ಗಿಸಿದ್ದಾನೆ.

ಈ ವೇಳೆ ಸೇತುವೆಯಡಿಯಿಂದ ಕಂಟೈನರ್ ಯಶ್ವಸಿಯಾಗಿ ಪ್ರವೇಶಿಸಿದ್ದರೂ ಅದಕ್ಕೆ ಹೊಂದಿಕೊಂಡೇ ಸುಮಾರು 100 ಮೀ. ಅಂತರದಲ್ಲಿ ಅಳವಡಿಸಿದ್ದ ಭಾರೀ ಘನ ವಾಹನ ಸಂಚಾರ ನಿರ್ಬಂಧಕ ಕಬ್ಬಿಣದ ತಡೆಗೆ ಢಿಕ್ಕಿ ಹೊಡೆದಿದೆ. ಇದರಿಂದ ಕಬ್ಬಿಣದ ತಡೆ ಮುರಿದುಬಿದ್ದಿದ್ದರೆ, ಲಾರಿ ರಸ್ತೆಗೆ ಅಡ್ಡವಾಗಿ ತಿರುಗಿ ನಿಂತಿತ್ತು. ಢಿಕ್ಕಿ ಹೊಡೆದ ರಭಸಕ್ಕೆ ಲಾರಿಯ ಮುಂಭಾಗ ಜಖಂಗೊಂಡಿದೆ. ಇದರಿಂದ ಕೆಲ ಹೊತ್ತು ವಾಹನ ಸಂಚಾರ ಮೊಟಕುಗೊಂಡಿತ್ತು. ಹಲವು ತಾಸುಗಳ ಬಳಿಕ ಲಾರಿಯನ್ನು ರಸ್ತೆಯಿಂದ ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

Comments are closed.