ಕರಾವಳಿ

ದೀಪಕ್ ಕೊಲೆ : ಕ್ಷೀಪ್ರ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ನಗದು ಬಹುಮಾನ

Pinterest LinkedIn Tumblr

ಮಂಗಳೂರು, ಜನವರಿ 5: ಮಂಗಳೂರಿನ ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ನಡೆದ ದೀಪಕ್ ರಾವ್ ಹತ್ಯೆ ಪ್ರಕರಣ ಭೇದಿಸುವಲ್ಲಿ ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಗೆ ಎಡಿಜಿಪಿ ಕಮಲ್ ಪಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಗುರುವಾರ ಸಂಜೆ ನಡೆಯಿತು.

ಈ ವೇಳೆ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳಿಗೆ ಎಡಿಜಿಪಿ ಕಮಲ್ ಪಂತ್ 1.20 ಲಕ್ಷ ರೂಪಾಯಿ ಬಹುಮಾನ ವಿತರಿಸಿ ಮಾತನಾಡಿದರು. ದೀಪಕ್ ಹತ್ಯಾ ಆರೋಪಿಗಳನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಚೇಸ್‌ ಮಾಡಿ ಘಟನೆ ನಡೆದ ಮೂರುವರೆ ತಾಸುಗಳಲ್ಲಿ ಬಂಧಿಸಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಅವರು, ಕ್ಷಿಪ್ರ ಕಾರ್ಯಾಚರಣೆ ಮೂಲಕ ಆರೋಪಿಗಳ‌ನ್ನು ಬಂಧಿಸಿದ ಮಂಗಳೂರು ಪೊಲೀಸರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ದೀಪಕ್ ರಾವ್ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಾಣ ಒತ್ತೆ ಇಟ್ಟು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ 4 ಮಂದಿ ಆರೋಪಿಗಳ ವಿಚಾರಣೆ ನಡೆಯುತ್ತಿದೆ. ತನಿಖೆಯಲ್ಲಿ ಎಲ್ಲಾ ಸತ್ಯಾತ್ಯತೆಯನ್ನು‌ ಬಯಲಿಗೆಳೆಯುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ಅವರು ಮಾತನಾಡಿ, ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ನವಾಜ್ ಅಲಿಯಾಸ್ ಪಿಂಕಿ ನವಾಜ್ ಮತ್ತು‌ ನೌಷಾದ್ ಕಾಲಿಗೆ ಗುಂಡೇಟು ತಗುಲಿ ಗಾಯವಾಗಿದೆ. ಆರೋಪಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು ನಂತರ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಹೇಳಿದರು.

ಆರೋಪಿಗಳಾದ ಪಿಂಕಿ ನವಾಜ್ ವಿರುದ್ಧ 10 ಪ್ರಕರಣ, ರಿಜ್ವಾನ್ ವಿರುದ್ಧ 2 ಪ್ರಕರಣ, ನೌಷಾದ್ ಮೇಲೆ 1 ಪ್ರಕರಣ, ನಿರ್ಷಾನ್ ಮೇಲೆ 1 ಪ್ರಕರಣ ಈ ಮೊದಲೇ ದಾಖಲಾಗಿವೆ. ಈ ಹತ್ಯೆಗೆ ನಿಜವಾದ ಕಾರಣ ತನಿಖೆಯಿಂದ ತಿಳಿದುಬರಲಿದೆ ಎಂದು ಕಮಿಷನರ್ ತಿಳಿಸಿದರು..

ಈ ವೇಳೆ ಎಸ್ಪಿ ಸುಧೀರ್‌ ಕುಮಾರ್ ರೆಡ್ಡಿ, ಡಿ.ಸಿ.ಪಿ ಉಮಾಪ್ರಶಾಂತ್, ಕಾರ್ಯಾಚರಣೆಯಲ್ಲಿ ಭಾಗಿಯಾದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Comments are closed.