ಮುಂಬೈ

ಮುಂಬೈ: ರೂಫ್ ಟಾಪ್ ಪಬ್ ನಲ್ಲಿ ಭೀಕರ ಅಗ್ನಿ ದುರಂತ, 15 ಸಾವು, 12 ಮಂದಿಗೆ ಗಾಯ

Pinterest LinkedIn Tumblr

ಮುಂಬೈ: ಇಲ್ಲಿನ ಲೋವರ್ ಪರೆಲ್ ಪ್ರದೇಶದ ಕಮಲಾ ಮಿಲ್ಸ್ ಕಂಪೌಂಡ್ ನಲ್ಲಿರುವ ರೆಸ್ಟೊರೆಂಟ್ ನಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 15 ಮಂದಿ ಮೃತಪಟ್ಟು, ಸುಮಾರು 12 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿಜೆ.

ಮೃತಪಟ್ಟವರಲ್ಲಿ 12 ಮಂದಿ ಮಹಿಳೆಯರು. ಇನ್ನು ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಕಿಂಗ್​ ಎಡ್ವರ್ಡ್​ ಮೆಮೋರಿಯಲ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಾರತೀಯ ದಂಡ ಸಂಹಿತೆ ಸೆಕ್ಷನ್ 304ರಡಿಯಲ್ಲಿ ನರಹತ್ಯೆ ಆರೋಪದ ಮೇಲೆ ರೆಸ್ಟೊರೆಂಟ್ ಮಾಲಿಕರ ವಿರುದ್ಧ ಕೇಸು ದಾಖಲಿಸಲಾಗಿದೆ.

ಮುಂಬೈಯ ವಾಣಿಜ್ಯ ಚಟುವಟಿಕೆಯ ಕೇಂದ್ರವಾದ ಸೇನಾಪತಿ ಬಾಪಟ್ ಮಾರ್ಗ್ ನಲ್ಲಿ 4 ಅಂತಸ್ತಿನ ಕಟ್ಟಡದ ಮೂರನೇ ಮಹಡಿಯಲ್ಲಿ ಕಳೆದ ಮಧ್ಯರಾತ್ರಿ ಅಗ್ನಿ ಅವಘಡ ಸಂಭವಿಸಿತು ಎಂದು ಅಧಿಕಾರಿಯೊಬ್ಬರು ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಅಗ್ನಿ ದುರಂತಕ್ಕೆ ಪಕ್ಕದಲ್ಲಿರುವ ಟೈಮ್ಸ್ ನೌ, ಮಿರ್ರರ್ ನೌ, ಝೂಮ್ ಮತ್ತು ಟಿವಿ9 ಮರಾಠಿ ಸುದ್ದಿ ವಾಹಿನಿಗಳ ಕಚೇರಿಗಳು ಕೂಡ ಹಾನಿಗೀಡಾಗಿವೆ.

ಈ ಬಗ್ಗೆ ಟೈಮ್ಸ್ ನೌ ಸುದ್ದಿ ವಾಹಿನಿಯ ಹಿರಿಯ ಸಂಪಾದಕ ಆನಂದ್ ನರಸಿಂಹನ್ ಟ್ವೀಟ್ ಮಾಡಿದ್ದು, ತಮ್ಮ ಕಚೇರಿಯ ಪಕ್ಕದಲ್ಲಿರುವ ಮೊಜೊ ಬಾರ್ ಅಂಡ್ ರೆಸ್ಟೊರೆಂಟ್ ನಲ್ಲಿ ಬೆಂಕಿ ಹತ್ತಿಕೊಂಡಿದೆ. ವಿದ್ಯುತ್ ಸಂಪರ್ಕ, ದೂರವಾಣಿ ಸಂಪರ್ಕ ಕಡಿತಗೊಂಡಿದೆ ಎಂದಿದ್ದಾರೆ.

ಗಾಯಗೊಂಡವರನ್ನು ಕೆಇಎಂ, ಸಿಯಾನ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಮುಂಬೈ ಮಹಾನಗರ ಪಾಲಿಕೆಯ ವಿಪತ್ತು ನಿರ್ವಹಣಾ ಘಟಕ ತಿಳಿಸಿದೆ.

ಹತ್ತಿಕೊಳ್ಳುತ್ತಿದ್ದ ಬೆಂಕಿಯನ್ನು ನಂದಿಸಲು ಮತ್ತು ಗಾಯಗೊಂಡವರನ್ನು ಸಾಗಿಸಲು ಅಗ್ನಿ ಶಾಮಕ, ನೀರಿನ ಟ್ಯಾಂಕರ್, ತುರ್ತು ಆಂಬ್ಯುಲೆನ್ಸ್ ಮತ್ತು ಪೊಲೀಸ್ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು.

ಕೇಂದ್ರ ಮುಂಬೈಯಲ್ಲಿರುವ ಈ ಕಟ್ಟಡದಲ್ಲಿ ಮನೆಗಳು, ಕೆಲವು ವಾಣಿಜ್ಯ ಸಂಕೀರ್ಣಗಳು, ಹೊಟೇಲ್ ಗಳು ಇವೆ. ಬೆಂಕಿ ಹತ್ತಿಕೊಳ್ಳಲು ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ.

Comments are closed.