ಪದ್ಮಾವತಿ ಚಿತ್ರ ವಿವಾದದ ಬಗ್ಗೆ ಇತ್ತೀಚೆಗೆ ಶಿವರಾಜ್‌ಕುಮಾರ್ ಪ್ರತಿಕ್ರಿಯಿಸಿದ ಬೆನ್ನಲ್ಲೇ ನಟ ಉಪೇಂದ್ರ ಕೂಡಾ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಸರಿಯಲ್ಲ ಎಂದಿದ್ದಾರೆ.
ಪದ್ಮಾವತಿ ಚಿತ್ರದ ವಿವಾದ ಇಲ್ಲಿಗೇ ಮುಗಿಯುವಂತೆ ಕಾಣುತ್ತಿಲ್ಲ. ಚಿತ್ರವನ್ನು ಬ್ಯಾನ್‌ಮಾಡಬೇಕೆಂಬ ಅರ್ಜಿಯನ್ನು ಸುಪ್ರೀಂ ಕೋರ್ಟ್‌ತಳ್ಳಿ ಹಾಕಿದ ನಂತರವೂ ಪದ್ಮಾವತಿ ಚಿತ್ರ ಬಿಡುಗಡೆಯ ಹಾದಿ ಸುಗಮವಾಗಿಲ್ಲ. ಭಾರತೀಯ ಚಿತ್ರರಂಗ ಈ ವಿವಾದದಲ್ಲಿ ಪದ್ಮಾವತಿ ಪರವಾಗಿ ಮಾತನಾಡುತ್ತಿದೆ. ಸ್ಯಾಂಡಲ್‌ವುಡ್‌ನಿಂದ ತಡವಾಗಿಯಾದರೂ ಸ್ಟಾರ್‌ನಟರು ಮಾತನಾಡಲು ಪ್ರಾರಂಭಿಸಿದ್ದಾರೆ. ಶಿವರಾಜ್‌ಕುಮಾರ್ ಹೇಳಿಕೆಗೆ ತೀವ್ರ ಸಭ್ಯತೆ ಮೀರಿ ಅಂತರ್ಜಾಲದಲ್ಲಿ ವಿರೋಧಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಈಗ ನಟ ಉಪೇಂದ್ರ ಕೂಡಾ ಈ ಬಗ್ಗೆ ಮಾತನಾಡಿದ್ದಾರೆ.
‘ನಮ್ಮಲ್ಲಿ ಒಂದು ವ್ಯವಸ್ಥೆ ಇದೆ. ಇದನ್ನು ಬ್ರೇಕ್‌ಮಾಡಿದರೆ ನಮ್ಮ ಸಮಾಜ ಏನಾಗುತ್ತೆ? ನಾವು ಪಾಲಿಸಲೆ ಬೇಕಾದ ನಿಯಮಗಳಿವೆ, ಸೆನ್ಸಾರ್‌ಬೋರ್ಡ್‌ಇದೆ. ನಿಮಗೆ ಇಷ್ಟವಾಗದ ವಿಷಯದ ಬಗ್ಗೆ ಪ್ರತಿಭಟನೆ ಮಾಡಬೇಡಿ ಎಂದು ನಾನು ಹೇಳುತ್ತಿಲ್ಲ. ನೀವು ಶಾಂತರೀತಿಯಿಂದ ಪ್ರತಿಭಟಿಸಿ, ನಿರ್ದೇಶಕರನ್ನು ಚರ್ಚೆಗೆ ಕರೆದು ಮಾತನಾಡಿ’ ಎಂದು ಸಲಹೆ ನೀಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕ ಸಂಜಯ್‌ಲೀಲಾ ಬನ್ಸಾಲಿ ವಿರುದ್ಧ ಮಾಡುತ್ತಿರುವ ಪ್ರತಿಭಟನೆಗೆ ಪ್ರತಿಕ್ರಿಯಿಸಿದ್ದಾರೆ.
‘ಪದ್ಮಾವತಿ ಸಿನಿಮಾ ನಾನು ನೋಡಿಲ್ಲ. ಹಾಗಾಗಿ ಕತೆ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಈಗ ಈ ಸಿನಿಮಾ ನೋಡಿರುವವರು, ಸಿನಿಮಾ ಮಾಡಿರುವವರ ಜತೆ ಜನರು ಮಾತಾಡಿ ತಮ್ಮ ಅನುಮಾನ ಬಗೆಹರಿಸಿಕೊಳ್ಳಬೇಕು. ಇದರ ಬಗ್ಗೆ ಗೊತ್ತಿಲ್ಲದವರು ಮಾತನಾಡದೆ ಸುಮ್ಮನೆ ಇದ್ದುಬಿಟ್ಟರೆ ಸಾಕು ಬಹುತೇಕ ಸಮಸ್ಯೆ ಬಗೆಹರಿಯುತ್ತೆ’ ಎಂದಿದ್ದಾರೆ ಅವರು.
‘ಮಾಧ್ಯಮಗಳೂ ಕೂಡಾ ಇಂಥ ವಿಚಾರಗಳನ್ನು ವಿಜೃಂಬಿಸಿ ಪ್ರಚಾರ ನೀಡಬಾರದು. ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ. ಕೆಲವು ವಿಚಾರಗಳನ್ನು ನಿರ್ಲಕ್ಷಿಸಿ, ಅದರ ಪಾಡಿಗೆ ಅದನ್ನು ಬಿಟ್ಟುಬಿಡಬೇಕು. ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾದಾಗ ಜನರೂ ಮಾತನಾಡಲು ಪ್ರಾರಂಭಿಸುತ್ತಾರೆ’ ಎಂದು ಕಿವಿಮಾತು ಹೇಳಿದ್ದಾರೆ.
ದೀಪಿಕಾ ಪಡುಕೋಣೆ ಅಭಿನಯದ ಮೊದಲ ಚಿತ್ರ ಐಶ್ವರ್ಯಾ. ಈ ಕನ್ನಡ ಚಿತ್ರದಲ್ಲಿ ಉಪೇಂದ್ರ ಜತೆ ನಾಯಕಿಯಾಗಿ ನಟಿಸುವ ಮೂಲಕ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ‘ಹಿಂದೆ ಎಚ್‌ಓ ಸಿನಿಮಾ ಮಾಡಿದಾಗಲೂ ಕಾವೇರಿ ಕರ್ನಾಟಕ, ತಮಿಳುನಾಡಿನಲ್ಲಿ ಕಾವೇರಿ ಬಿಸಿ ಏರಿತ್ತು. ಇಂಥ ಸಂದರ್ಭದಲ್ಲಿ ಕಾವೇರಿ ನದಿ ಬಗ್ಗೆ ಸಿನಿಮಾದಲ್ಲಿ ಹೇಳಲಾಗಿತ್ತು. ಸಮಸ್ಯೆಯಾಗಬಾರದು ಎಂದು ಕೆಲ ಬದಲಾವಣೆ ಮಾಡಿಕೊಂಡೆವು ಎಂದಿದ್ದಾರೆ.
ಕೋಟ್
ನಮ್ಮ ದೇಶದಲ್ಲಿ ಗ್ಲೋಬಲ್‌ವಾರ್ಮಿಂಗ್, ರೈತರ ಆತ್ಮಹತ್ಯೆಯಂಥ ದೊಡ್ಡ ದೊಡ್ಡ ಸಮಸ್ಯೆಗಳು ಇವೆ. ಇದರ ಬಗ್ಗೆ ಮಾತನಾಡೋಣ. ನಮಗೆ ನಿಜವಾಗಲೂ ಸಮಸ್ಯೆಯಾಗಿರೋದರ ಬಗ್ಗೆ ಮಾತನಾಡಬೇಕಿದೆ.
-ಉಪೇಂದ್ರ, ನಟ