ಮನೋರಂಜನೆ

‘ಪದ್ಮಾವತಿ’ ತಲೆಯ ರಕ್ಷಣೆಗೆ ನಿಂತ ನಟ ಕಮಲ್ ಹಾಸನ್

Pinterest LinkedIn Tumblr

ಬಾಲಿವುಡ್‍ನಲ್ಲಿ ವಿವಾದ ಎಬ್ಬಿಸಿರುವ ‘ಪದ್ಮಾವತಿ’ ಸಿನಿಮಾಗೆ ನಟ ಕಮಲ್ ಹಾಸನ್ ಬೆಂಬಲ ಸೂಚಿಸಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಅವಕಾಶ ಮಾಡಿಕೊಡಲ್ಲ ಎಂದು ಕರ್ಣಿ ಸೇನಾ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಪದ್ಮಾವತಿ ಪಾತ್ರ ಪೋಷಿಸಿರುವ ನಟಿ ದೀಪಿಕಾ ಪಡುಕೋಣೆ ತಲೆಗೆ ರೂ.5 ಕೋಟಿ, ರೂ.10 ಕೋಟಿ ಬಹುಮಾನ ನೀಡುವುದಾಗಿ ಘೋಷಿಸಿವೆ.

ಈ ಬಗ್ಗೆ ಕಮಲ್ ಹಾಸನ್ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿದ್ದಾರೆ. ದೀಪಿಕಾ ತಲೆ ಕಡಿದು ತರಬೇಕು ಎಂದು ಘೋಷಿಸಿರುವವರ ವಿರುದ್ಧ ಅವರು ತಿರುಗಿಬಿದ್ದಿದ್ದಾರೆ. ಇಂತಹ ಹೇಳಿಕೆ ಕೊಡುವವರ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ.

‘ದೀಪಿಕಾ ತಲೆಯನ್ನು ನಾನು ರಕ್ಷಿಸಬೇಕು ಎಂದುಕೊಂಡಿದ್ದೇನೆ. ನಾವು ಮಹಿಳೆಯರನ್ನು ಅವರ ದೇಹಕ್ಕಿಂತ ಹೆಚ್ಚಾಗಿ ಗೌರವಿಸುತ್ತೇವೆ. ಎಲ್ಲಕ್ಕಿಂತ ಮುಖ್ಯವಾಗಿ ದೇಶ ಅವರಿಗೆ ಕೊಟ್ಟಿರುವ ಸ್ವಾತಂತ್ರ್ಯವನ್ನು ಗೌರವಿಸಬೇಕು. ಇದನ್ನು ಯಾರೂ ಬೇಡ ಎನ್ನಲ್ಲ. ಬಹಳಷ್ಟು ಮಂದಿ ನನ್ನ ಸಿನಿಮಾಗಳನ್ನು ವಿರೋಧಿಸಿದರು. ಯಾವುದೇ ಕ್ಷೇತ್ರದಲ್ಲಾಗಬಹುದು ಉಗ್ರವಾದ ಧೋರಣೆ ಒಳ್ಳೆಯದಲ್ಲ. ಎಚ್ಚೆತ್ತುಕೋ ಬೌದ್ಧಿಕ ಭಾರತ.. ಕೇಳಿಸಿಕೊಳ್ಳುತ್ತಿದ್ದೀಯಾ ಭಾರತ ಮಾತೆ.’ ಎಂದು ಟ್ವಿಟ್ಟರ್‌ನಲ್ಲಿ ಹೇಳಿದ್ದಾರೆ.

ಒಟ್ಟಾರೆ ಈ ಹೇಳಿಕೆ ಮೂಲಕ ಪದ್ಮಾವತಿ ಸಿನಿಮಾ ಬೆನ್ನಿಗೆ ನಿಂತಿದ್ದಾರೆ. ಪದ್ಮಾವತಿ ಚಿತ್ರದ ವಿರುದ್ಧ ಈಗಾಗಲೆ ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳಲ್ಲಿ ನಿಷೇಧ ಹೇರಲಾಗಿದೆ. ಅದರೆ ಸುಪ್ರೀಂಕೋರ್ಟ್ ಮಾತ್ರ ಈ ವಿಷಯದಲ್ಲಿ ಪದ್ಮಾವತಿ ಪರವಾಗಿ ನಿಂತಿದೆ. ಸಿನಿಮಾ ಸೆನ್ಸಾರ್ ಮಂಡಳಿ ಮುಂದೆ ಹೋಗುವುದಕ್ಕೂ ಮುನ್ನವೇ ಟೀಕಿಸುವುದು ಸರಿಯಲ್ಲ ಎಂದು ತೀರ್ಪು ನೀಡಿದೆ.

Comments are closed.