ಮನೋರಂಜನೆ

‘ಪದ್ಮಾವತಿ’ಯ ಮುಗಿಯದ ಫಜೀತಿ

Pinterest LinkedIn Tumblr


ಚಿತ್ರೀಕರಣ ಆರಂಭವಾದ ದಿನದಿಂದಲೂ ‘ಪದ್ಮಾವತಿ’ಗೆ ವಿರೋಧ, ಪ್ರತಿಭಟನೆ ಹೊಸತಲ್ಲ. ಶುಕ್ರವಾರವೂ ಪದ್ಮಾವತಿ ಫಜೀತಿ ಮುಂದುವರೆಯಿತು. ಈ ಮಧ್ಯೆ ಸುಪ್ರೀಂ ಕೋರ್ಟ್‌ ಚಿತ್ರಕ್ಕೆ ತಡೆ ನೀಡಲು ನಕಾರ ವ್ಯಕ್ತಪಡಿಸಿದರೆ, ಸೆನ್ಸಾರ್‌ ಮಂಡಳಿಯನ್ನು ಸಂಪರ್ಕಿಸುವಂತೆ ವಿರೋಧಿಗಳಿಗೆ ಹೈಕೋರ್ಟ್‌ ಸಲಹೆ ನೀಡಿತು. ಇನ್ನು ಚಿತ್ರದಲ್ಲಿ ಆಕ್ಷೇಪಾರ್ಹ ವಿಷಯಗಳಿವೆಯೇ ಎಂದು ಗಮನಿಸಲು ಸಮಿತಿ ರಚಿಸುವ ಕುರಿತೂ ಹಲವೆಡೆ ಚಿಂತನೆ ನಡೆಯುತ್ತಿದೆ.

”ಚಿತ್ರವನ್ನು ಸೆನ್ಸಾರ್‌ ಮಂಡಳಿ ವೀಕ್ಷಿಸಿದೆಯೇ? ಇಲ್ಲದಿದ್ದಲ್ಲಿ ಅವರ ಕೆಲಸಕ್ಕೆ ನಾವು ಮೂಗು ತೂರಿಸುವುದಿಲ್ಲ,” ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಖಡಾಖಂಡಿತವಾಗಿ ಹೇಳಿತು.

ಬಾಲಿವುಡ್‌ ಚಿತ್ರ ‘ಪದ್ಮಾವತಿ’ ಬಿಡುಗಡೆಗೆ ತಡೆ ನೀಡಬೇಕೆಂಬ ಮನವಿಯನ್ನು ತಳ್ಳಿ ಹಾಕಿದ ನ್ಯಾಯಾಲಯ, ಸೆನ್ಸಾರ್‌ ಮಂಡಳಿಯು ಚಿತ್ರವೊಂದಕ್ಕೆ ಪ್ರಮಾಣಪತ್ರ ನೀಡಬೇಕಾದರೆ ಹಲವಾರು ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ. ಜೊತೆಗೆ, ಚಿತ್ರ ಪ್ರಮಾಣೀಕರಣ ಮೇಲ್ಮನವಿ ಪ್ರಾಧಿಕಾರ(ಎಫ್‌ಸಿಎಟಿ)ವೂ ಚಿತ್ರದಲ್ಲಿ ಆಕ್ಷೇಪಾರ್ಹ ಅಂಶಗಳಿದ್ದರೆ ಗಮನಿಸುತ್ತದೆ. ಈ ಬಗ್ಗೆ ನ್ಯಾಯಾಲಯ ಚರ್ಚಿಸಬೇಕಿಲ್ಲ ಎಂದಿತು.

ತಡೆ ನೀಡಬೇಕೆಂದಷ್ಟೇ ಅಲ್ಲದೆ, ಇತಿಹಾಸಕಾರರನ್ನೊಳಗೊಂಡ ಸಮಿತಿಯೊಂದನ್ನು ರಚಿಸಿ ರಾಣಿ ಪದ್ಮಾವತಿಯ ಪಾತ್ರವನ್ನು ಸರಿಯಾಗಿ ಚಿತ್ರಿಸಲಾಗಿದೆಯೇ ಎಂದು ತೀರ್ಮಾನಿಸಲು ಆದೇಶಿಸಬೇಕು. ಇಲ್ಲದಿದ್ದಲ್ಲಿ, ತಿರುಚಿದ ಕತೆಯನ್ನು ಸರಿಪಡಿಸಿದ ಬಳಿಕವಷ್ಟೇ ಚಿತ್ರ ಬಿಡುಗಡೆಗೆ ಅವಕಾಶ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿತ್ತು.

ದೀಪಿಕಾ ಪಡುಕೋಣೆ, ರಣವೀರ್‌ ಸಿಂಗ್‌, ಶಾಹಿದ್‌ ಕಪೂರ್‌ ತಾರಾಗಣ ಹೊಂದಿರುವ ಸಂಜಯ್‌ಲೀಲಾ ಬನ್ಸಾಲಿಯ ಹೊಸ ಚಿತ್ರವು ಡಿ.1ರಂದು ಬಿಡುಗಡೆಗೆ ಸಿದ್ಧವಾಗುತ್ತಿದೆ.

ಮಂಡಳಿಗೆ ಮನವಿ ನೀಡಿ: ಪದ್ಮಾವತಿಯಲ್ಲಿ ನಿಷೇಧಿತ ಸತಿ ಪದ್ಧತಿಯನ್ನು ತೋರಿಸಲಾಗಿದ್ದು, ಇದು ಕಾನೂನುವಿರೋಧಿ ನಡೆಯಾಗಿದೆ. ಹೀಗಾಗಿ ಚಿತ್ರಕ್ಕೆ ನಿಷೇಧ ಹೇರಬೇಕೆಂಬ ಅರ್ಜಿಯನ್ನು ಅಲಹಾಬಾದ್‌ ಹೈಕೋರ್ಟ್‌ ವಿಚಾರಣೆ ನಡೆಸಿತು.

ಈ ಸಂಬಂಧ ಸೆನ್ಸಾರ್‌ ಮಂಡಳಿಗೆ ಅಹವಾಲು ಸಲ್ಲಿಸುವಂತೆ ಅರ್ಜಿದಾರರಿಗೆ ನ್ಯಾಯಾಲಯ ಸೂಚಿಸಿತು.

ಭಜರಂಗದಳ ಪ್ರತಿಭಟನೆ

‘ಪದ್ಮಾವತಿ’ಗೆ ನಿಷೇಧ ಹೇರಬೇಕು ಎಂದು ಆಗ್ರಹಿಸಿ ಭಜರಂಗದ ನೂರಾರು ಸದಸ್ಯರು ಶುಕ್ರವಾರ ಜೈಪುರದಲ್ಲಿ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿ ವಸುಂಧರಾ ರಾಜೆಗೆ ಮನವಿ ಸಲ್ಲಿಸಿದರು.

”ರಾಣಿ ಪದ್ಮಾವತಿಯನ್ನು ಕೆಟ್ಟದಾಗಿ ಚಿತ್ರಿಸಿರುವುದು ಪ್ರೋಮೋ ನೋಡಿದರೇ ಸ್ಪಷ್ಟವಾಗುತ್ತದೆ. ಇತಿಹಾಸ ತಿರುಚಿ ಮಾಡಿದ ಚಿತ್ರದ ಬಿಡುಗಡೆಯನ್ನು ರಾಜ್ಯದಲ್ಲಿ ಬ್ಯಾನ್‌ ಮಾಡಬೇಕು,” ಎಂದು ಆಗ್ರಹಿಸಿದ ಭಜರಂಗ ದಳದ ರಾಜ್ಯ ಸಂಚಾಲಕ ಅಶೋಕ್‌ ಸಿಂಗ್‌, ಇಷ್ಟಾಗಿಯೂ ಚಿತ್ರ ಬಿಡುಗಡೆಗೆ ಅವಕಾಶ ನೀಡಿದರೆ, ನಂತರ ಸಿನಿಮಾ ಹಾಲ್‌ಗಳಿಗಾಗುವ ಯಾವುದೇ ಹಾನಿಗಳಿಗೆ ತಾವು ಜವಾಬ್ದಾರರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಇಂಥದೇ ಪ್ರತಿಭಟನೆಗಳು ಕಂಡುಬಂದವು. ಮಹಾರಾಷ್ಟ್ರದ ಠಾಣೆಯಲ್ಲೂ ನೂರಾರು ರಜಪೂತ ಮಹಿಳೆಯರು ಸೇರಿದಂತೆ ಹತ್ತಾರು ಸಂಘಟನೆಗಳಿಂದ ಚಿತ್ರ ನಿಷೇಧಕ್ಕೆ ಆಗ್ರಹಿಸಿ ರಾರ‍ಯಲಿ ನಡೆದವು. ರಾಜಸ್ಥಾನದ ಬಿಜೆಪಿ ಶಾಸಕಿ ದಿವ್ಯಾ ಕುಮಾರಿ ರಾರ‍ಯಲಿಯ ನೇತೃತ್ವ ವಹಿಸಿದ್ದರು.

ರಾಣಿ ಪದ್ಮಾವತಿ ಹಾಗೂ ಅಲ್ಲಾವುದ್ದೀನ್‌ ಖಿಲ್ಜಿ ನಡುವೆ ಸರಸ ಸಂಬಂಧ ತೋರಿ, ಇತಿಹಾಸಕ್ಕೆ ಹಾಗೂ ರಾಣಿಯ ಘನತೆಗೆ ಅಪಮಾನ ಎಸಗಲಾಗಿದೆ ಎಂಬುದು ಆರ್‌ಎಸ್‌ಎಸ್‌ ಸೇರಿದಂತೆ ಬಲಪಂಥೀಯ ಸಂಘಟನೆಗಳ ಆಕ್ಷೇಪ.

ಸಂಸ್ಕೃತಿ ವಿಭಾಗಕ್ಕೆ ಹೊಣೆ: ವಿವಾದಿತ ಚಿತ್ರದಲ್ಲಿ ಆಕ್ಷೇಪಾರ್ಹ ಅಂಶಗಳಿವೆಯೇ ಎಂದು ಗಮನಿಸಲು ಹಾಗೂ ಇದ್ದರೆ ಏನು ಕ್ರಮ ಕೈಗೊಳ್ಳಬಹುದು ಎಂದು ನಿರ್ಧರಿಸಲು ರಾಜಸ್ಥಾನದ ಬಿಜೆಪಿ ಸರಕಾರ ಕಲೆ ಮತ್ತು ಸಂಸ್ಕೃತಿ ವಿಭಾಗಕ್ಕೆ ಹೊಣೆ ಹೊರಿಸಿದೆ ಎಂದು ರಾಜ್ಯ ಗೃಹಸಚಿವ ಗುಲಾಬ್‌ ಚಾಂದ್‌ ಕಟಾರಿಯಾ ತಿಳಿಸಿದ್ದಾರೆ.

ರಜಪೂತ ಹಾಗೂ ಕ್ಷ ತ್ರಿಯ ಸಮುದಾಯಗಳು, ಹಿಂದೂ ಸಂಘಟನೆಗಳ ವಿರೋಧ ಹಿನ್ನೆಲೆಯಲ್ಲಿ ವಸುಂಧರಾ ರಾಜೇ ಸರಕಾರವು ಚಿತ್ರದ ಕುರಿತು ನಿರ್ಧರಿಸಲು ಇತಿಹಾಸಕಾರರನ್ನೊಳಗೊಂಡ ಸಮಿತಿ ರಚಿಸಲು ನಿರ್ಧರಿಸಲಿದೆ.

ಹಿಂದೂ ಭಾವನೆಗಳಿಗೆ ಧಕ್ಕೆ: ಶಾಸಕರ ಆತಂಕ

ಗುರುವಾರವಷ್ಟೇ ಮಹಾರಾಷ್ಟ್ರದ ಶಾಸಕ ರಾಜ್‌ ಪುರೋಹಿತ್‌ ಪದ್ಮಾವತಿ ನಿಷೇಧಕ್ಕೆ ಕೋರಿ ತಾವು ಸೆನ್ಸಾರ್‌ ಮಂಡಳಿ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಪತ್ರ ಬರೆದಿರುವುದಾಗಿ ಹೇಳಿದ್ದ ಬೆನ್ನಲ್ಲೇ ಶುಕ್ರವಾರ ಇಲ್ಲಿನ ಬಿಜೆಪಿಯ ಮತ್ತೊಬ್ಬ ಶಾಸಕ ಮಂಗಲ್‌ ಪ್ರಭಾತ್‌ ಲೋಧಾ ಚಿತ್ರ ನಿಷೇಧಕ್ಕೆ ಆಗ್ರಹಿಸಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ಗೆ ಪತ್ರ ಬರೆದಿದ್ದಾರೆ.

ಇತಿಹಾಸಕಾರರು, ಚಿತ್ರ ನಿರ್ಮಾಪಕರು, ಸೆನ್ಸಾರ್‌ ಮಂಡಳಿ ಸದಸ್ಯರು ಹಾಗೂ ಪ್ರತಿಭಟನಾಕಾರರನ್ನೊಳಗೊಂಡ ಸಮಿತಿ ರಚಿಸಿ ‘ಪದ್ಮಾವತಿ’ ಕುರಿತು ಒಮ್ಮತಕ್ಕೆ ಬರಬೇಕು ಎಂದು ಸೂಚಿಸಿದ್ದಾರೆ.

***

ಸಂಜಯ್‌ ಲೀಲಾ ಬನ್ಸಾಲಿ ಅಥವಾ ಇತರೆ ಯಾರಿಗಾದರೂ ಬೇರೆ ಧರ್ಮದ ಕುರಿತು ಚಿತ್ರ ನಿರ್ಮಿಸಲು ಅಥವಾ ಆ ಬಗ್ಗೆ ಮಾತನಾಡಲು ಧೈರ್ಯವಿದೆಯೇ? ಹಿಂದೂ ಗುರುಗಳು, ದೇವರು, ಹೋರಾಟಗಾರರ ಮೇಲೆ ಮಾತ್ರ ಚಿತ್ರ ತೆಗೆಯುತ್ತಾರೆ. ನಾವಿದನ್ನು ಇನ್ನು ಸಹಿಸುವುದಿಲ್ಲ.

– ಗಿರಿರಾಜ್‌ ಸಿಂಗ್‌, ಕೇಂದ್ರ ಸಚಿವ

Comments are closed.