ಚೆನ್ನೈ: ನವೆಂಬರ್ 7ರಂದು ಹೊಸ ಪಕ್ಷ ಸ್ಥಾಪಿಸಿ ಕಮಲ್ ಹಾಸನ್ ರಾಜಕೀಯ ಪ್ರವೇಶಿಸುತ್ತಾರೆ ಎಂಬ ಊಹಾಪೋಹಗಳಿಗೆ ತಾತ್ಕಾಲಿಕ ತೆರೆ ಎಳೆಯಲಾಗಿದೆ. ಸದ್ಯಕ್ಕೆ ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಹೇಳಿರುವ ಕಮಲ್ ಹಾಸನ್ ಜನರೊಂದಿಗೆ ಸಂವಾದ ನಡೆಸಲು ಹೊಸ ಆ್ಯಪ್ ಒಂದನ್ನು ಮಂಗಳವಾರ ಬಿಡುಗಡೆ ಮಾಡಿದ್ದಾರೆ. ತಮ್ಮ 63ನೇ ಹುಟ್ಟುಹಬ್ಬದ ವೇಳೆ ಮಯ್ಯಂ ವಿಸಿಲ್ ಬಿಡುಗಡೆ ಮಾಡಿದ ಅವರು ಜನರಿಗೆ ತಮ್ಮ ಬಗ್ಗೆ ಅರಿಯಲು ಈ ಆ್ಯಪ್ ಸಹಾಯ ಮಾಡುತ್ತದೆ ಎಂದಿದ್ದಾರೆ.
63ನೇ ಹುಟ್ಟುಹಬ್ಬದಂದು ಕಮಲ್ ಹಾಸನ್ ಅವರು ಹೊಸ ಪಕ್ಷ ಸ್ಥಾಪಿಸುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ರಾಜಕೀಯಕ್ಕೆ ಪ್ರವೇಶಿಸಬೇಕಾದರೆ ಜನರ ಮಧ್ಯೆ ಹೋಗಿ ಇನ್ನಷ್ಟು ವಿಷಯಗಳನ್ನು ಅರಿತುಕೊಳ್ಳಬೇಕಿದೆ. ಅದಕ್ಕಾಗಿ ಚರ್ಚೆ ಸಂವಾದಗಳನ್ನು ನಡೆಸಬೇಕಿದೆ. ತಮಿಳುನಾಡಿನಾದ್ಯಂತ ಸಂಚರಿಸಿ ಜನರ ಸಮಸ್ಯೆಗಳನ್ನು ಅರಿತುಕೊಳ್ಳುವ ಯೋಜನೆ ಇದೆ. ತಮ್ಮ ಕಾರ್ಯಕರ್ತರು ಎಲ್ಲ ಜಿಲ್ಲೆಗಳಲ್ಲಿಯೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ರಾಜಕೀಯ ಪಕ್ಷ ಸ್ಥಾಪನೆ ಬಗ್ಗೆ ಅವಸರ ಮಾಡಲ್ಲ. ಈಗ ಸಂದರ್ಭ ಸನ್ನಿವೇಶಗಳ ಬಗ್ಗೆ ಅರಿತುಕೊಳ್ಳುತ್ತಿದ್ದೇನೆ. ಪಕ್ಷದ ಹೆಸರು ಇಲ್ಲಿ ಮುಖ್ಯವಲ್ಲ, ಆದರೆ ಶೀಘ್ರದಲ್ಲೇ ಪಕ್ಷ ಸ್ಥಾಪನೆ ಮಾಡುತ್ತೇನೆ ಎಂದಿದ್ದಾರೆ ಕಮಲ್ ಹಾಸನ್.
ಏನಿದು ಮಯ್ಯಂ ವಿಸಿಲ್ ?
ನಿಮ್ಮ ನಿಲುವು ಏನು ಎಂದು ಜನರು ನನ್ನಲ್ಲಿ ಕೇಳುತ್ತಿರುತ್ತಾರೆ. ನಾನು ಎಡವೂ ಅಲ್ಲ ಬಲವೂ ಅಲ್ಲ. ನಾನು ಮಧ್ಯ. ನಾನು ಮಧ್ಯ ಇರಲು ಬಯಸುತ್ತೇನೆ. ಹಾಗಾಗಿ ಮಯ್ಯಂ (ಮಧ್ಯ) ಎಂದು ಹೆಸರಿಟ್ಟಿದ್ದೇನೆ. ಮಯ್ಯ ವಿಸಿಲ್ ಎಂಬುದು ಕೇವಲ ಆ್ಯಪ್ ಅಲ್ಲ, ಜನರೊಂದಿಗೆ ಬೆರೆಯಲು ಇರುವ ಮುಕ್ತ ವೇದಿಕೆ. ಇದೊಂದು ವಿಸಿಲ್ ಬ್ಲೋಯರ್, ಏನಾದರೂ ತಪ್ಪು ಅಥವಾ ಅನ್ಯಾಯವಾದರೆ ಅದರ ವಿರುದ್ಧ ದನಿಯೆತ್ತಲು ಈ ಆ್ಯಪ್ ಸಹಾಯ ಮಾಡುತ್ತದೆ ಎಂದು ಕಮಲ್ ಹಾಸನ್ ಹೇಳಿದ್ದಾರೆ.