ಮನೋರಂಜನೆ

‘ತರ್ಲೆ ವಿಲೇಜ್ ‘ ಸಿನೆಮಾದಲ್ಲಿ ‘ತಿಥಿ’ ನಟರ ಕೆಟ್ಟ ಚಿತ್ರಣ: ಈರೇ ಗೌಡ ಆಕ್ರೋಶ

Pinterest LinkedIn Tumblr

tarle-village

ಬೆಂಗಳೂರು: ವಿಶ್ವದೆಲ್ಲೆಡೆ ಹಲವು ಅಂತಾರಾಷ್ಟ್ರೀಯ ಸಿನೆಮೋತ್ಸವಗಳಲ್ಲಿ ಪ್ರಶಸ್ತಿ ಗಳಿಸಿ, ರಾಷ್ಟ್ರ ಪ್ರಶಸ್ತಿ ಕೂಡ ಗೆದ್ದ ‘ತಿಥಿ’ ಕನ್ನಡ ಚಿತ್ರರಂಗಕ್ಕೆ ಗೌರವ ತಂದುಕೊಟ್ಟ ಚಿತ್ರ. ಈ ಚಿತ್ರದಲ್ಲಿ ನಟಿಸಿದ್ದ ವೃತ್ತಿಪರ ನಟರಲ್ಲದ ಗ್ರಾಮಸ್ಥರು ಕರ್ನಾಟಕದ ಮನೆಮಾತಾಗಿದ್ದರು. ಇದೆ ನಟರನ್ನು ನಿಯೋಜಿಸಿಕೊಂಡು ತೆರೆಕಂಡ ‘ತರ್ಲೆ ವಿಲೇಜ್’ ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಆ ಮುಗ್ಧ ಗ್ರಾಮಸ್ಥರನ್ನು ‘ತರ್ಲೆ ವಿಲ್ಲೇಜ್’ ಸಿನೆಮಾದಲ್ಲಿ ಕೆಟ್ಟದಾಗಿ ಚಿತ್ರಿಸಿದ್ದಾರೆ ಎಂದು ‘ತಿಥಿ’ ಸಿನೆಮಾದ ಕಥಾ ರಚನಕಾರ-ಸಂಭಾಷಣಕಾರ ಈರೇ ಗೌಡ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಈರೇಗೌಡ ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿರುವ ಒಕ್ಕಣೆ ಹೀಗಿದೆ “ಇತ್ತೀಚಿನ ಕನ್ನಡ ಸಿನೆಮಾಗಳಲ್ಲಿ ‘ತಿಥಿ’ ನಟರನ್ನು ಕೆಟ್ಟದಾಗಿ ಬಳಸಿಕೊಂಡಿರುವ ರೀತಿಗೆ ನನಗೆ ತೀವ್ರ ನೋವಾಗಿದೆ. ಅವರು ‘ತಿಥಿ’ಯಲ್ಲಿ ಅಭಿನಯಿಸಿದ ಪಾತ್ರಗಳನ್ನೇ ನಕಲು ಮಾಡಿಸಿದ್ದಾರೆ. ಕನಿಷ್ಠ ಪಕ್ಷ ಹೆಸರುಗಳನ್ನೂ ಬದಲಾಯಿಸಿಲ್ಲ – ಅವರು ಆ ಪಾತ್ರಗಳಿಗೆ ಅಂತಾರಾಷ್ಟ್ರೀಯ ಖ್ಯಾತಿ ಮತ್ತು ಪ್ರಶಂಸೆ ಪಡೆದಿದ್ದರು. ಈಗ ಅವರನ್ನು ಬಳಸಿಕೊಂಡಿರುವ ರೀತಿಗೆ, ಬಳಸಿರುವ ಅಶ್ಲೀಲ ಮತ್ತು ಮೂಢತನದ ಹಾಸ್ಯಕ್ಕೆ ತಲೆತಗ್ಗಿಸುವಂತಾಗಿದೆ.
ಇದನ್ನು ನಿಲ್ಲಿಸಲು ನನಗೇನು ಮಾಡಲು ಸಾಧ್ಯವಾಗುತ್ತಿಲ್ಲವೆಂದು ಬೇಸರವಾಗಿದೆ. ಈ ವೃತ್ತಿಪರರಲ್ಲದ ನಟರನ್ನು ಈ ರೀತಿ ಬಳಸಿಕೊಂಡಿರುವುದಕ್ಕೆ ನನಗೆ ದುಃಖವು ಆಗಿದೆ. ‘ತಿಥಿ’ ಸಿನೆಮಾದಲ್ಲಿ ಇವರನ್ನು ನೈಜ ವ್ಯಕ್ತಿಗಳಂತೆ ಬಿಂಬಿಸಲಾಗಿತ್ತು. ನಿರ್ದೇಶನ ಮತ್ತು ನಿರ್ಮಾಪಕರ ತಂಡ ಈ ನಟರನ್ನು ಬಹಳ ಚೆನ್ನಾಗಿ ನಡೆಸಿಕೊಂಡಿತ್ತು. ಅವರ ಆತ್ಮಗೌರವಕ್ಕೆ ಮತ್ತು ಅವರ ವ್ಯಕ್ತಿತ್ವಕ್ಕೆ ಧಕ್ಕೆ ಬಾರದಂತೆ ಕ್ರಮ ತೆಗೆದುಕೊಳ್ಳಲಾಗಿತ್ತು. ತಿಥಿ ಸಿನೆಮಾದಲ್ಲಿ ಈ ಜನರ ಮಾನವೀಯತೆಯನ್ನು ಜಗತ್ತಿಗೆ ಅನಾವರಣ ಮಾಡಲಾಗಿತ್ತು. ಅವರು ಹಾಸ್ಯದ ವಸ್ತುಗಳಾಗಿರಲಿಲ್ಲ. ಮುಂದಿನ ಕನ್ನಡ ನಿರ್ದೇಶಕರು ಮತ್ತು ನಿರ್ಮಾಪಕರು ಆ ಜಾಗರೂಕತೆಯನ್ನು ತೆಗೆದುಕೊಳ್ಳುತ್ತಾರೆ ಎಂದು ನಂಬಿದ್ದೇನೆ” ಎಂದು ಬರೆದಿರುವ ಈರೇ ಗೌಡ ಅವರು “ಈ ಸ್ಥಿತಿ ನನಗೆ ನೋವುಂಟು ಮಾಡಿ ಅಳುವಂತೆ ಮಾಡಿದೆ” ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Comments are closed.