ಕೆಲವು ಸಿನಿಮಾ ತಾರೆಯರು ‘ಕಾಸ್ಟಿಂಗ್ ಕೌಚ್ಗೆ ಒಳಗಾಗಿದ್ದೆ’ ಎಂದು ಹೇಳಿಕೊಂಡಿದ್ದಾರೆ. ಆದರೆ ಮತ್ತೆ ಕೆಲವರು ಸಿನಿಮಾ ತಾರೆ ಎನಿಸಿಕೊಳ್ಳುವ ಮುಂಚೆ, ಅಂದರೆ ಬಾಲ್ಯದಲ್ಲೇ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇವೆ ಎಂದು ಹೇಳಿಕೊಂಡಿರುವುದು ಆಘಾತಕಾರಿ ವಿಷಯ. ಅಂಥದ್ದೊಂದು ಶೋಷಣೆಗೆ ಒಳಗಾದ ಮುಜುಗರದ ಸನ್ನಿವೇಶದ ಬಗ್ಗೆ ಹೇಳಿಕೊಂಡಿದ್ದು ಬೇರೆ ಯಾರೂ ಅಲ್ಲ, ಬಾಲಿವುಡ್ನ ಖ್ಯಾತ ನಟ ಅನಿಲ್ ಕಪೂರ್ ಅವರ ಪುತ್ರಿ ಸೋನಮ್ ಕಪೂರ್.
ಅಂದಹಾಗೆ, ಇದೇನೂ ಗಾಸಿಪ್ ಅಲ್ಲ. ಸೋನಮ್ ಕಪೂರ್ ಅವರೇ ಖುದ್ದಾಗಿ ಈ ವಿಷಯ ಹೇಳಿಕೊಂಡಿದ್ದಾರೆ. ಸಿನಿಮಾ ವಿಮರ್ಶಕ ರಾಜೀವ್ ಮಸಂದ್ ಅವರ ಕಾರ್ಯಕ್ರಮದಲ್ಲಿ ಸೋನಮ್ ಕಪೂರ್ ಭಾಗಿಯಾಗಿದ್ದರು. ಅವರ ಜತೆಗೆ ಖ್ಯಾತ ನಟಿಯರಾದ ಆಲಿಯಾ ಭಟ್, ಅನುಷ್ಕಾ ಶರ್ವ, ವಿದ್ಯಾ ಬಾಲನ್ ಹಾಗೂ ರಾಧಿಕಾ ಆಪ್ಟೆ ಕೂಡ ಪಾಲ್ಗೊಂಡಿದ್ದರು. ಐವರ ಸಮ್ಮುಖದಲ್ಲಿ ನಡೆಯುತ್ತಿದ್ದ ಸಂವಾದ ಇದ್ದಕ್ಕಿದ್ದಂತೆ ಲೈಂಗಿಕ ಶೋಷಣೆ ಕಡೆ ತಿರುಗಿತು. ‘ನನಗೆ ಚೆನ್ನಾಗಿ ನೆನಪಿದೆ, ನಾನು ಚಿಕ್ಕವಳಿದ್ದಾಗ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ’ ಎಂದು 31ರ ಹರೆಯದ ಸೋನಮ್ ಹೇಳುತ್ತಿದ್ದಂತೆ ಉಳಿದ ನಟಿಯರೂ ಅವರ ಮಾತಿಗೆ ದನಿಗೂಡಿಸಿದರು. ‘ಇದರಲ್ಲಿ ಅವರದ್ದೇನೂ ತಪ್ಪಿಲ್ಲ’ ಎಂದು ವಿದ್ಯಾ ಬಾಲನ್ ಹೇಳಿದರೆ, ತಮ್ಮ ಬಾಲ್ಯದಲ್ಲಿ ಅಮ್ಮ ಹೇಳುತ್ತಿದ್ದ ಮಾತನ್ನು ಸ್ಮರಿಸಿಕೊಂಡರು ಅನುಷ್ಕಾ ಶರ್ವ. ‘ಯಾರಾದರೂ ಅಸಭ್ಯವಾಗಿ ರ್ಸ³ಸಿದ್ರಾ?’ ಎಂದು ಅಮ್ಮ ಆಗಾಗ ಕೇಳುತ್ತಿದ್ದರು ಎಂಬುದನ್ನು ಅನುಷ್ಕಾ ನೆನಪಿಸಿಕೊಂಡರು. ಹಾಗಂತ ಈ ಥರ ಹೇಳಿಕೆ ಇದೇ ಮೊದಲೇನಲ್ಲ. ಎರಡು ವರ್ಷದ ಹಿಂದೆ ನಟಿ ಕಲ್ಕಿ ಕೊಚ್ಲಿನ್ ಕೂಡ ಇದೇ ರೀತಿ ಹೇಳಿಕೊಂಡಿದ್ದರು. ‘ನಾನು ಬಾಲ್ಯದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ, ಆದರೆ ಅದು ಒಂದು ದಿನದ ಕಥೆಯಷ್ಟೇ ಆಗಿರಲಿಲ್ಲ’ ಎಂದು ಕಲ್ಕಿ
ಬಹಿರಂಗವಾಗಿ ಹೇಳಿಕೊಂಡಿದ್ದರು. ‘ನನ್ನ ಆತ್ಮೀಯ ಕೆಲವು ಮಹಿಳೆಯರೂ ಒಂದಲ್ಲ ಒಂದು ರೀತಿಯಲ್ಲಿ ಬಾಲ್ಯದಲ್ಲಿ ಲೈಂಗಿಕ ಶೋಷಣೆಗೆ ಒಳಗಾಗಿದ್ದೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಇದು ನಿರ್ಲಕ್ಷಿಸುವಂಥ ವಿಷಯವಲ್ಲ’ ಎಂದು ಕಲ್ಕಿ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.