ಮನೋರಂಜನೆ

ಶ್ರೀದೇವಿ ಬಣ್ಣದ ಬದುಕಿಗೆ

Pinterest LinkedIn Tumblr

srideviನಿರ್ಮಾಪಕ ಬೋನಿ ಕಪೂರ್ ಹಾಗೂ ನಟಿ ಶ್ರೀದೇವಿ ದಂಪತಿಯ ನಿರ್ಮಾಣದ ‘ಮಾಮ್ ಚಿತ್ರ ಬಹುತೇಕ ಪೂರ್ಣಗೊಂಡಿದೆ. ರವಿ ಉದ್ಯಾವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಬಿಡುಗಡೆಯನ್ನು ಬೇಕಂತಲೇ ವಿಳಂಬ ಮಾಡಲಾಗುತ್ತಿದೆಯಂತೆ. ಕಾರಣ, ಶ್ರೀದೇವಿ! ಹಾಗಂತ, ಶ್ರೀದೇವಿ ಸರಿಯಾಗಿ ಶೂಟಿಂಗ್ ಹೋಗುತ್ತಿಲ್ಲವೇ ಎಂದು ಯೋಚಿಸಬೇಡಿ. ಅದು ಅವರದ್ದೇ ನಿರ್ವಣದ ಚಿತ್ರವಾದ್ದರಿಂದ ಅಂಥ ಸಮಸ್ಯೆ ಏನೂ ಇಲ್ಲ. ಅಷ್ಟಕ್ಕೂ ಚಿತ್ರದ ಬಿಡುಗಡೆಯನ್ನು ಮುಂದೂಡುತ್ತಿರುವುದು ಯಾವುದೇ ಸಮಸ್ಯೆಯಿಂದಲ್ಲ, ಬದಲಿಗೆ ಒಂದೊಳ್ಳೆಯ ಕಾರಣಕ್ಕಾಗಿ. ಏಕೆಂದರೆ, ನಟಿ ಶ್ರೀದೇವಿಯ ಬಣ್ಣದ ಬದುಕಿಗೆ ಮುಂದಿನ ವರ್ಷ 50 ಸಂವತ್ಸರಗಳಾಗುತ್ತವೆ. ಹಾಗಾಗಿ, ಶ್ರೀದೇವಿಯ ಬಣ್ಣದ ಬದುಕಿನ ಸ್ವರ್ಣ ಮಹೋತ್ಸವದ ಸಂಭ್ರಮದ ಜತೆಗೆ ಅವರು ನಟಿಸುತ್ತಿರುವ ಚಿತ್ರದ ಬಿಡುಗಡೆ ಖುಷಿಯೂ ಸೇರಲಿ ಎಂಬ ಸದುದ್ದೇಶ.

‘ಒಂದು ಹಾಡಿನ ಚಿತ್ರೀಕರಣವಷ್ಟೇ ಬಾಕಿ ಇದೆ. ಮನಸ್ಸು ಮಾಡಿದ್ದರೆ ಇದನ್ನು ಇದೇ ವರ್ಷ ಬಿಡುಗಡೆ ಮಾಡಬಹುದಿತ್ತು. ಆದರೆ ಬೇಕಂತಲೇ ನಿಧಾನ ಮಾಡುತ್ತಿದ್ದೇವೆ. ಮುಂದಿನ ವರ್ಷಕ್ಕೆ ಶ್ರೀದೇವಿ ‘ಕಲಾವಿದೆ’ ಎನಿಸಿಕೊಂಡು 50 ವರ್ಷ ಪೂರ್ಣವಾಗುತ್ತದೆ. ಹೀಗಾಗಿ ಆವಾಗಲೇ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ’ ಎನ್ನುತ್ತಾರೆ ಚಿತ್ರದ ನಿರ್ವಪಕ ಬೋನಿ ಕಪೂರ್.

ಅಂದಹಾಗೆ ಶ್ರೀದೇವಿ ಮೊಟ್ಟಮೊದಲ ಬಾರಿಗೆ ಬಣ್ಣ ಹಾಕಿದ್ದು, 1967ರಲ್ಲಿ. ನಾಲ್ಕು ವರ್ಷವಿದ್ದಾಗಲೇ ತಮಿಳಿನ ‘ತುನೈವನ್’ ಚಿತ್ರದ ಬಾಲ ಮುರುಗ ಎಂಬ ದೇವರ ಪಾತ್ರದಲ್ಲಿ ಶ್ರೀದೇವಿ ಕಾಣಿಸಿಕೊಂಡಿದ್ದರು. ಆಮೇಲೆ ಅನೇಕ ತಮಿಳು-ತೆಲುಗು ಚಿತ್ರಗಳಲ್ಲಿ ನಟಿಸಿದ್ದ ಅವರು, 1975ರಲ್ಲಿ ಹಿಂದಿಯ ‘ಜೂಲಿ’ ಚಿತ್ರದಲ್ಲಿ ಬಾಲನಟಿಯಾಗಿ ಬಾಲಿವುಡ್ ಪ್ರವೇಶಿಸಿದರು. ಬಳಿಕ 1976ರಲ್ಲಿ ಕೆ. ಬಾಲಚಂದರ್ ನಿರ್ದೇಶನದ ‘ಮೂಂಡ್ರು ಮುಡಿಚು’ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ತದನಂತರ ರಜನಿಕಾಂತ್, ಕಮಲಹಾಸನ್, ಅಮಿತಾಭ್ ಬಚ್ಚನ್ ಸೇರಿ ಅನೇಕ ಘಟಾನುಘಟಿಗಳ ಜತೆ ನಟಿಸುವ ಮೂಲಕ ಶ್ರೀದೇವಿ ಬಹುಬೇಡಿಕೆಯ ನಟಿ ಎನಿಸಿಕೊಂಡರು.

Comments are closed.