ಮನೋರಂಜನೆ

ವರದಿಗಾರ್ತಿಯಾಗಿ ನಟಿ ಶ್ರಿಯಾ ಸರನ್

Pinterest LinkedIn Tumblr

sreya-saranದಕ್ಷಿಣಭಾರತದ ಎಲ್ಲ ಭಾಷೆಗಳ ಸಿನಿಪ್ರೇಕ್ಷಕರಿಗೂ ನಟಿ ಶ್ರಿಯಾ ಸರನ್ ಪರಿಚಯವಿದೆ. ತೆಲುಗು ಸಿನಿಮಾಗಳಲ್ಲೇ ಹೆಚ್ಚು ಬಿಜಿಯಾಗಿದ್ದ ಅವರು ಆಗೊಮ್ಮೆ ಈಗೊಮ್ಮೆ ಮಲಯಾಳಂ ಮತ್ತು ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡರು. ಇತ್ತೀಚೆಗೆ ತಮಿಳು ಚಿತ್ರಗಳಲ್ಲಿ ಮುಖ್ಯ ಪಾತ್ರಕ್ಕಿಂತಲೂ ಅತಿಥಿ ಪಾತ್ರಗಳಲ್ಲೇ ಹೆಚ್ಚಾಗಿ ನಟಿಸಿದ್ದರಿಂದ ಅವರನ್ನು ಕಾಲಿವುಡ್ ಪ್ರೇಕ್ಷಕರು ಮಿಸ್ ಮಾಡಿಕೊಳ್ಳುತ್ತಿದ್ದರು. ಇದೀಗ ಹೊಸದೊಂದು ತಮಿಳು ಚಿತ್ರಕ್ಕೆ ಶ್ರಿಯಾ ನಾಯಕಿಯಾಗುವ ಸಾಧ್ಯತೆಗಳಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದ್ದಾರೆ.

ಮಲಯಾಳಂನ ಹಿಟ್ ಚಿತ್ರ ‘100 ಡಿಗ್ರಿ ಸೆಲ್ಸಿಯಸ್’ ತಮಿಳಿಗೆ ರಿಮೇಕ್ ಆಗುತ್ತಿದೆ. ಅದಕ್ಕೆ ಮಿತ್ರನ್ ಜವಾಹರ್ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಈ ಮಹಿಳಾಪ್ರಧಾನ ಚಿತ್ರದಲ್ಲಿ ಐವರು ನಾಯಕಿಯರು ಇರುವುದು ವಿಶೇಷ. ಮೂಲಚಿತ್ರದಲ್ಲಿ ಶ್ವೇತಾ ಮೆನನ್, ಭಾಮಾ, ಮೇಘನಾ ರಾಜ್, ಅನನ್ಯಾ ಮತ್ತು ಹಾರಿತಾ ನಟಿಸಿದ್ದರು. ಅದರ ತಮಿಳು ಅವತರಣಿಕೆಯಲ್ಲಿ ಯಾರೆಲ್ಲ ಅಭಿನಯಿಸಲಿದ್ದಾರೆ ಎಂಬುದು ಸದ್ಯದ ಕುತೂಹಲ. ಈ ಐದರಲ್ಲಿ ಮುಖ್ಯ ಪಾತ್ರವೊಂದಕ್ಕಾಗಿ ಶ್ರಿಯಾ ಅವರನ್ನು ಸಂರ್ಪಸಿದ್ದಾರಂತೆ ನಿರ್ದೇಶಕರು. ಆದರೆ ಶ್ರಿಯಾ ಕಡೆಯಿಂದ ಇನ್ನೂ ಪ್ರತಿಕ್ರಿಯೆ ಬಂದಿಲ್ಲ. ಕಥೆ ಮತ್ತು ಪಾತ್ರ ಅವರಿಗೆ ತುಂಬ ಇಷ್ಟವಾಗಿದ್ದು, ಖಂಡಿತ ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆಯಲ್ಲಿದ್ದಾರೆ ಮಿತ್ರನ್. ಬೇರೆ ಎರಡು ಪಾತ್ರಗಳಲ್ಲಿ ನಿಕೇಶಾ ಪಟೇಲ್ ಮತ್ತು ಲಕ್ಷ್ಮೀ ರೈ ನಟಿಸಲಿದ್ದಾರಂತೆ. ಆದರೆ ಯಾರಿಗೆ ಯಾವ ಪಾತ್ರ ಎಂಬುವುದು ಇನ್ನೂ ಅಂತಿಮವಾಗಿಲ್ಲ. ಮೂಲಗಳ ಪ್ರಕಾರ, ಟಿವಿ ವರದಿಗಾರ್ತಿಯ ಪಾತ್ರದಲ್ಲಿ ಶ್ರಿಯಾ ನಟಿಸಲಿದ್ದಾರಂತೆ. ನೈಜಘಟನೆ ಆಧಾರಿತ ಈ ಚಿತ್ರದಲ್ಲಿ ಐವರು ಮಹಿಳೆಯರ ಬದುಕಿನ ಚಿತ್ರಣ ಇರಲಿದೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದಿದ್ದರೆ ಈಗಾಗಲೇ ಈ ಚಿತ್ರಕ್ಕೆ ಶೂಟಿಂಗ್ ಶುರುವಾಗಿರಬೇಕಿತ್ತು. ಆದರೆ ಕಾರಣಾಂತರಗಳಿಂದ ತಡವಾಗಿದೆ. ಜನವರಿ ವೇಳೆಗೆ ಐವರು ನಾಯಕಿಯರ ಹೆಸರನ್ನು ಅಂತಿಮಗೊಳಿಸಿ ಮುಹೂರ್ತ ನೆರವೇರಿಸಲಿದೆ ಚಿತ್ರತಂಡ. ಇದೇ ಸಮಯಕ್ಕೆ ಸರಿಯಾಗಿ, ಅಂದರೆ ಹೊಸವರ್ಷದ ವೇಳೆಗೆ ಶ್ರಿಯಾ ನಟನೆಯ ಮತ್ತೊಂದು ಬಹುನಿರೀಕ್ಷಿತ ತೆಲುಗು ಚಿತ್ರ ಕೂಡ ಬಿಡುಗಡೆ ಆಗಲಿದೆ. ನಂದಮೂರಿ ಬಾಲಕೃಷ್ಣ ನಾಯಕತ್ವದ ‘ಗೌತಮಿಪುತ್ರ ಶಾತಕರ್ಣಿ’ ಚಿತ್ರದಲ್ಲಿ ಅವರು ಮುಖ್ಯಭೂಮಿಕೆ ನಿಭಾಯಿಸಿದ್ದು, ಜ. 12ರಂದು ರಿಲೀಸ್ ಆಗುವ ಸಾಧ್ಯತೆ ಇದೆ.

Comments are closed.