ಮನೋರಂಜನೆ

ಜಾನ್ ಜಾನಿ ಜನಾರ್ಧನ್ ಸಿನೆಮಾ ವಿಮರ್ಶೆ

Pinterest LinkedIn Tumblr

john-jani-janardhanಮೂವರು ನಾಯಕನಟರು. ಮಲಯಾಳಂ ಸಿನೆಮಾವೊಂದರ ರಿಮೇಕ್. ಹಿರಿಯ ನಟಿ ಮಾಲಾಶ್ರೀ, ಉದಯೋನ್ಮುಖ ನಟ ಗುರುನಂದನ್, ಮತ್ತು ನಟಿ ಐಂದ್ರಿತಾ ರೇ ಅತಿಥಿ ಪಾತ್ರಗಳಲ್ಲಿ ನಟನೆ ಎಂಬಿತ್ಯಾದಿ ವಿಷಯಗಳು ಇಂದು ಬಿಡುಗಡೆಯಾದ ಗುರು ದೇಶಪಾಂಡೆ ನಿರ್ದೇಶನದ ಜಾನ್ ಜಾನಿ ಜನಾರ್ಧನ್ ಕನ್ನಡ ಚಿತ್ರರಸಿಕರನ್ನು ಸೆಳೆದಿರಬಹುದು. ಆದರೆ ಈ ಸೆಳೆತವನ್ನು ಸಮರ್ಥಿಸಿಕೊಂಡಿದೆಯೇ ಈ ಚಿತ್ರ?
ಬ್ಯಾಂಗ್ಕಾಕ್ ನ ಪಟ್ಟಾಯ ಬೀಚಿನಲ್ಲಿ ಮೋಜು ಮಸ್ತಿ ಮಾಡುವ ಕನಸಿನೊಂದಿಗೆ ಮೂವರು ಮಧ್ಯಮವರ್ಗದ ಗೆಳೆಯರು, ಜಾನ್ (ಮದರಂಗಿ ಕೃಷ್ಣ), ಜಾನಿ (ಯೋಗೇಶ್) ಮತ್ತು ಜನಾರ್ಧನ್ (ಅಜಯ್ ಕೃಷ್ಣ ರಾವ್) ಹಣ ಕೂಡಿಡುತ್ತಿರುತ್ತಾರೆ. ಅದಕ್ಕಾಗಿ ಹತ್ತು ಹಲವು ಕೆಲಸಗಳನ್ನು ಮಾಡುತ್ತಿರುತ್ತಾರೆ. ಆದರೆ ಇದು ಅಷ್ಟು ಸುಲಭವಾಗಿ ಕೂಡಿಬರುವಿದಿಲ್ಲ. ಈ ಸಂದರ್ಭದಲ್ಲೇ ತಾವು ವಾಸಿಸುತ್ತಿರುವ ಪ್ರದೇಶದ ಪುಟ್ಟ ಬಾಲಕಿಯರು ಕಾಣೆಯಾಗುತ್ತಿರುತ್ತಾರೆ. ಮುಂದೇನಾಗುತ್ತದೆ?
ಮೂವರು ಯುವಕರ ಪುಂಡಾಟಿಕೆ, ಅವರು ಮದ್ಯಪಾನ ಮಾಡಿ, ಮಹಿಳೆಯರು/ಯುವತಿಯರ ವಿರುದ್ಧ ಕೊಳಕು ಭಾಷೆಯಲ್ಲಿ ಮಾತನಾಡಿ ನಡೆಸುವ ಜೀವನ, ಇವಿಷ್ಟೇ ಹೆಚ್ಚಿರುವ ಒಂದಷ್ಟು ಘಟನೆಗಳನ್ನು ಯಾವುದೇ ಕ್ರಮವಿಲ್ಲದೆ ಪೋಣಿಸಿ, ಜೊತೆಗೆ ಮತ್ತೊಂದು ಟ್ರ್ಯಾಕ್ ನಲ್ಲಿ ಮಕ್ಕಳ ಕಳವು ಮತ್ತು ಅವರ ಮೇಲೆ ಅತ್ಯಾಚಾರದ ಒಂದು ಸಣ್ಣ ಎಳೆಯನ್ನು ತಂದು, ಅಂತ್ಯಕ್ಕೆ ಅಸಂಬದ್ಧವಾಗಿ ಎರಡನ್ನು ಜೋಡಿಸಿ, ಹಳಸಿದ ಕ್ಲೈಮ್ಯಾಕ್ಸ್ ಇರುವ ಚಿತ್ರಕಥೆ ಬರೆದು ಸಿನೆಮಾ ನಿರೂಪಿಸಿರುವ ಈ ಅಸಡ್ಡಾಳತನದ ಶಿಖರಪ್ರಾಯ ಚಿತ್ರ ಪ್ರೇಕ್ಷಕನಿಗೆ ಇನ್ನಿಲ್ಲದಂತೆ ಕಿರಿಕಿರಿಯನ್ನುಂಟುಮಾಡಿ, ಪಿತ್ತನೆತ್ತಿಗೇರಿಸಬಹುದು. ಕಾಲು ಮುರಿದುಕೊಂಡು ಆಸ್ಪತ್ರೆಯಲ್ಲಿ ಬಿದ್ದಿರುವ ವ್ಯಕ್ತಿಯೊಬ್ಬ (ಗುರುನಂದನ್), ಕಥೆ ಹೇಳುತ್ತಾ ಬಹಳ ನೀರಸವಾಗಿ ಪಾತ್ರಗಳನ್ನು ಪರಿಚಯ ಮಾಡಿಕೊಡುವಾಗಲೇ ಬೇಸರ ದಟ್ಟವಾಗಿ ಆವರಿಸಿಬಿಡುತ್ತದೆ. ಹುಡುಗಿಯರ ಹಿಂದೆ ಸುತ್ತುವ, ಮದ್ಯ ಸೇವಿಸಿ ಕೂತು ತಲೆಹರಟೆ ಮಾತನಾಡುವ, ಸಂತ್ರಸ್ತರ ಭಾವನೆಯಲ್ಲಿ ತಮ್ಮ ಪ್ರೀತಿ ವೈಫಲ್ಯವನ್ನು ಹೇಳಿಕೊಳ್ಳುವ, ಎಲ್ಲ ಆರೋಪವನ್ನು ಮಹಿಳೆಯರ ಮೇಲೆ ಹೊರಿಸಿ ಪುರುಷ ಅಹಂಕಾರವನ್ನು ಮೆರೆಯುವ ಈ ಪಡ್ಡೆ ಹುಡುಗರ ಇಂತವೆ ಘಟನೆಗಳು, ಪುನರಾವರ್ತಿತವಾಗಿ ಪರಚಿಕೊಳ್ಳುವಂತೆ ಮಾಡುತ್ತವೆ. ಮಕ್ಕಳನ್ನು ಹೊತ್ತೊಯ್ದು ಅತ್ಯಾಚಾರವೆಸಗುವ ಎಳೆ ಅಲ್ಲಲ್ಲಿ ಕಂಡು ಮಾಯವಾಗಿ, ಅಂತ್ಯದಲ್ಲಿ ಖಾಜಿ ನ್ಯಾಯದ ರೀತಿಯಲ್ಲಿ ಅದನ್ನು ನಿರ್ವಹಿಸಿರುವುದು ಕೂಡ ಬಹಳ ಕೆಟ್ಟ ರೀತಿಯಲ್ಲಿ ಚಿತ್ರಣಗೊಂಡಿದೆ. ಮೂರು ಧರ್ಮಗಳಿಗೆ ಸೇರಿದ ಗೆಳೆಯರು ಒಟ್ಟಿಗೆ ಸಹಬಾಳ್ವೆ ನಡೆಸಿ ಆತ್ಮೀಯರಾಗಿರುತ್ತಾರೆ ಹಾಗು ಹಿಂದೂ ಧರ್ಮಿಯ ಕುಟುಂಬವೊಂದರ ಮನೆಯಲ್ಲಿ ಅನಾಥ ಮುಸ್ಲಿಂ ಯುವತಿಯನ್ನು ಪೋಷಿಸಿ ಬೆಳೆಸಿರುತ್ತಾರೆ ಎಂಬ ಸಾಮಾಜಿಕ ಸೌಹಾರ್ದದ ಒಂದೆರಡು ಅಂಶಗಳನ್ನು ಮೇಲು ಸ್ಥರದಲ್ಲಿ ಕಟ್ಟಿಕೊಟ್ಟಿರುವುದನ್ನು ಹೊರತುಪಡಿಸಿದರೆ ಸಿನೆಮಾದಲ್ಲಿ ಕುತೂಹಲಕಾರಿ ಕತೆಯಾಗಲಿ, ಇನ್ಯಾವ ಗಮನಾರ್ಹ ಘಟನೆಗಳಾಗಲಿ, ನೆನಪಿನಲ್ಲುಳಿಯುವ ಪಾತ್ರಗಳಾಗಲಿ ಇಲ್ಲ.
ಪಾತ್ರಗಳ ಕಲ್ಪನೆಯಲ್ಲಿ ಅಷ್ಟು ಸೋಮಾರಿತನ ಎದ್ದು ಕಾಣುವುದರ ಜೊತೆಗೆ ಯಾರ ನಟನೆಯೂ ಪರಿಪಕ್ವವಾಗಿಲ್ಲ. ಅಜಯ್ ರಾವ್, ಮದರಂಗಿ ಕೃಷ್ಣ ಮತ್ತು ಯೋಗಿ ಬಹಳ ಸಾಧಾರಣ ನಟನೆ ನೀಡಿದ್ದಾರೆ. ನಾಯಕನಟಿ ಕಾಮ್ನ ರಣಾವತ್ ಅವರ ಪಾತ್ರ ಏಕಿದೆ ಎಂದು ದೇವನೇ ಬಲ್ಲ. ಉಳಿದ ಪೋಷಕ ವರ್ಗದ ನಟನೆಯೂ ಅಷ್ಟಕ್ಕಷ್ಟೇ. ಹಿನ್ನಲೆ ಸಂಗೀತ ಮತ್ತು ಅರ್ಜುನ್ ಜನ್ಯ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಇನ್ನಷ್ಟು ತ್ರಾಸ ನೀಡುತ್ತವೆ. ಒಂದು ಘಟನೆಯಿಂದ ಮತ್ತೊಂದು ಘಟನೆಗೆ ಜಿಗಿಯುವುದಕ್ಕೆ ಒಂದು ಕಾರಣವೂ ಇಲ್ಲ, ಸರಾಗವಾಗಿಯೂ ನಡೆಯುವುದಿಲ್ಲ. ಸಿನೆಮಾದ ಸಂಕಲನ ಚಿತ್ರದ ಸಂಕಷ್ಟಕ್ಕೆ ಇನ್ನಷ್ಟು ಕೊಡುಗೆ ನೀಡಿದೆ.
ಇಂತಹ ಕಳಪೆ ಗುಣಮಟ್ಟದ ಸಿನೆಮಾವನ್ನು ರಿಮೇಕ್ ಮಾಡುವ ಚಿಂತನೆ ಕನ್ನಡ ನಿರ್ದೇಶಕರಿಗೆ ಏಕೆ ಬರುತ್ತದೋ ಎಂಬುದು ಬಹಳ ನಿಗೂಢವಾದ ಪ್ರಶ್ನೆ. ಇಂಥ ನಿರ್ಣಯವನ್ನು ತೆಗೆದುಕೊಂಡು, ವಿಪರೀತ ಅನಗತ್ಯ ಸಂಭಾಷಣೆಯಿಂದ ಕೂಡಿದ, ಓತಪ್ರೇತದ ನಿರೂಪಣೆಯಿಂದ ಕನ್ನಡ ಸಿನಿರಸಿಕರಿಗೆ, ನೋಡಿ ತಾಳಿಕೊಳ್ಳಿ ಎಂಬ ಸವಾಲೆಸೆದಿದ್ದಾರೆ ನಿರ್ದೇಶಕ ಗುರು ದೇಶಪಾಂಡೆ.

Comments are closed.