ಬೆಂಗಳೂರು, ಡಿ. ೯- ಚಿತ್ರರಂಗದಲ್ಲಿ ಯಶಸ್ವಿ ಜೋಡಿಯೆಂದೇ ಗುರುತಿಸಿಕೊಂಡಿರುವ ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ನಿಜಜೀವನದಲ್ಲಿ ಸತಿಪತಿಗಳಾಗುವ ಮೂಲಕ ಹೊಸ ಜೀವನಕ್ಕೆ ಕಾಲಿರಿಸಿದರು.
ನಗರದ ತಾರಾ ಹೋಟೆಲ್ನಲ್ಲಿ ಹಸಿರು ತುಂಬಿದ್ದ ಮರಗಿಡಗಳ ಮಧ್ಯೆ ಶಿವಪಾರ್ವತಿಯ ಪ್ರತಿಮೆಯ ಎದುರಿಗೆ 12.35 ಸುಮಾರಿಗೆ ನಟ ಯಶ್ ರಾಧಿಕಾ ಪಂಡಿತ್ ಅವರಿಗೆ ತಾಳಿಕಟ್ಟುವ ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸಿದರು.
ನವಜೋಡಿಗಳಿಗೆ ಶುಭಕೋರಲು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ, ಮಾಜಿ ಸಚಿವರಾದ ವಿ. ಸೋಮಣ್ಣ, ಚೆಲುವರಾಯ ಸ್ವಾಮಿ, ಜಮೀರ್ ಅಹ್ಮದ್ ಖಾನ್, ಚಿತ್ರರಂಗದ ಗಣ್ಯರಾದ ರವಿಚಂದ್ರನ್, ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಸುಧೀಪ್ ಸೇರಿದಂತೆ ಎರಡು ಕುಟುಂಗಳ ಆಪ್ತರು, ಚಿತ್ರರಂಗದ ಗಣ್ಯರು ನೂತನ ವಧು-ವರರನ್ನು ನೂರ್ಕಾಲ ಬಾಳಿ ಆಶೀರ್ವದಿಸಿದರು.
ಶ್ರೀನಾಥ್ ದಂಪತಿ, ದೊಡ್ಡಣ್ಣ, ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ನಿರ್ದೇಶಕರಾದ ಪವನ್ ಒಡೆಯರ್, ಎ.ಪಿ. ಅರ್ಜುನ್, ಮಹೇಶ್ ರಾವ್, ನಿರ್ಮಾಪಕರಾದ ಜಯಣ್ಣ, ಕೆ.ಮಂಜು, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಮುತ್ತಪ್ಪ ರೈ ಸೇರಿದಂತೆ ಆಪ್ತರಷ್ಟೆ ಮದುವೆಯಲ್ಲಿ ಭಾಗವಹಿಸಿದ್ದರು.
ಇದಕ್ಕೂ ಮುನ್ನ ರಾಧಿಕಾ ಪಂಡಿತ್ ಅವರ ತಂದೆ, ಕೃಷ್ಣ ಕುಮಾರ್ ಪಂಡಿತ್ ಅವರು ಯಶ್ ಅವರನ್ನು ಮದುವೆ ಮಂಟಪಕ್ಕೆ ಕೈಹಿಡಿದು ಕರೆತಂದರು.
ಮಂಟಪದ ಬಳಿಯಿದ್ದ ಗಣೇಶಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಆದಿಚುಂಚನಗಿರಿ ಮಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು. ನಂತರ ರಾಧಿಕಾ ಪಂಡಿತ್ ಅವರನ್ನು ಅವರ ತಂದೆ, ತಾಯಿ ಮಂಟಪಕ್ಕೆ ಕರೆತಂದರು. ಈ ವೇಳೆ ರಾಧಿಕಾ ಪಂಡಿತ್ ಹಾಗೂ ಯಶ್ ಪರಸ್ಪರ ಮೊದಲು ಹಾರ ಹಾಕಲು ಪೈಪೋಟಿ ನಡೆಸಿದರು.
ನಟ ಯಶ್ ಮೊದಲು ಹಾರ ಹಾಕುತ್ತಿದ್ದಂತೆ ನೆರೆದಿದ್ದವರು ಚಪ್ಪಾಳೆ, ಕೇಕೆ ಹಾಕಿ ಸಂಭ್ರಮಿಸಿದರು. 12.35ರ ಸುಮಾರಿಗೆ ನಟ ಯಶ್ ರಾಧಿಕಾ ಪಂಡಿತ್ಗೆ ತಾಳಿ ಕಟ್ಟುತ್ತಿದ್ದಂತೆ ಹೊಸ ಜೋಡಿಗಳ ಮುಖದಲ್ಲಿ ಮಂದಹಾಸ ಮನೆ ಮಾಡಿತು. ಆನಂತರ ಗಣ್ಯರು, ಕುಟುಂಬದ ಸದಸ್ಯರು, ಹಿತೈಷಿಗಳು, ಚಿತ್ರರಂಗದ ಆಪ್ತರು, ವಧು-ವರರನ್ನು ಆಶೀರ್ವದಿಸಿದರು.
ತಾರಾ ಹೋಟೆಲ್ನಲ್ಲಿ ಬೆಳಿಗ್ಗೆಯಿಂದಲೇ ಮದುವೆಯ ಸಂಭ್ರಮ ಮನೆ ಮಾಡಿತ್ತು. ಕಲಾ ನಿರ್ದೇಶಕ ಅರುಣ್ ಸಾಗರ್, ಸೋಮೇಶ್ವರ ದೇವಾಲಯದ ಮಾದರಿಯಲ್ಲಿ ಮರ ಗಿಡಗಳ ಮಧ್ಯೆ ಸುಂದರವಾದ ಮಂಟಪವನ್ನು ನಿರ್ಮಿಸಿ ಅಲ್ಲಿ ಶಿವ ಪಾರ್ವತಿಯರ ಪ್ರತಿಮೆಯನ್ನು ಪ್ರತಿಷ್ಠಾಪಿಸಿದರು. ಶಿವ ಪಾರ್ವತಿಯರ ಪ್ರತಿಮೆಯ ಮುಂಭಾಗದಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಹೊಸ ಬಾಳಿಗೆ ಕಾಲಿರಿಸಿದರು.
ಇದಕ್ಕೂ ಮುನ್ನ ಗೌರಿಪೂಜೆ, ಅರಿಶಿನ ಶಾಸ್ತ್ರ, ಪಾದಪೂಜೆ ನಡೆಯಿತು.