ಚಿಕ್ಕನೆಟಕುಂಟೆ ಜಿ. ರಮೇಶ್
೨ಜಿ, ೩ಜಿ ಹಳೆಯ ಸಂಗತಿ. ಈಗೇನಿದ್ದರೂ ೪ಜಿಯ ಜಮಾನ. ದೂರಸಂಪರ್ಕ ಕ್ಷೇತ್ರದಲ್ಲಿ ‘ಜಿ’ಗಳ ಜಮಾನ ಮುಂದುವರಿದಿರುವಾಗಲೇ ಕನ್ನಡ ಚಿತ್ರರಂಗದಲ್ಲಿ ಸದ್ದುಗದ್ದವಿಲ್ಲದೆ ೫ಜಿಯ ಜಮಾನ ಆರಂಭವಾಗಿದೆ.
ಗುರುವೇಂದ್ರ ಶೆಟ್ಟಿ ಹೊಸ ಆಲೋಚನೆ ಮತ್ತು ಹೊಸ ಕನಸಿನೊಂದಿಗೆ ‘೫ಣh ಜನರೇಷನ್ ಶೀರ್ಷಿಕೆಯನ್ನು ೫ಜಿ ಹೆಸರಲ್ಲಿ ಚಿತ್ರೀಕರಣ ಪೂರ್ಣಗೊಳಿಸಿದ್ದು, ಮುಂದಿನ ತಿಂಗಳು ಬಿಡುಗಡೆ ಮಾಡುವ ಸಿದ್ಧತೆಯಲ್ಲಿದ್ದಾರೆ.ಗುರುವೇಂದ್ರ ಶೆಟ್ಟಿಗೆ ಬೆನ್ನೆಲುಬಾಗಿ ಜಗದೀಶ್, ದೀಪು ಹಾಗೂ ಗಿರೀಶ್ ಕುಮಾರ್ ನಿಂತಿದ್ದು, ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.
ಕಳೆದ ವಾರ ಚಿತ್ರದ ಧ್ವನಿಸುರುಳಿ ಬಿಡುಗಡೆ ಇತ್ತು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು, ಗೋಕುಲಂ ಸಂಸ್ಥೆಯ ಮುಖ್ಯಸ್ಥರು, ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಗಣ್ಯಾತಿ ಗಣ್ಯರು ಆಗಮಿಸಿ ೫ಜಿ ತಂಡಕ್ಕೆ ಶುಭ ಹಾರೈಸಿದರು.
ಈ ವೇಳೆ ಮಾತಿಗಿಳಿದ ನಿರ್ದೇಶಕ ಗುರುವೇಂದ್ರ ಶೆಟ್ಟಿ, ನಾಲ್ಕು ವರ್ಷದ ಹಿಂದೆ ಸ್ನೇಹಿತ ವೆಂಕಟೇಶ್ ಕಿರು ಚಿತ್ರ ಮಾಡಲು ಕಥೆ ಸಿದ್ದ ಪಡಿಸಿಕೊಂಡಿದ್ದರು.ಅದು ಕಾರಣಾಂತರದಿಂದ ಸಾಧ್ಯವಾಗಿರಲಿಲ್ಲ. ಆ ಕಥೆಯನ್ನು ಕಮರ್ಷಿಯಲ್ ಚಿತ್ರ ಮಾಡುತ್ತೇನೆ ಎಂದಾಗ ಆತ ಖುಷಿಯಿಂದಲೇ ನೀಡಿದರು. ಕಥೆ ಪಡೆದ ನಂತರ ಸಾಕಷ್ಟು ಬದಲಾವಣೆ ಮಾಡಿಕೊಳ್ಳಲಾಯಿತು.
ಬಳಿಕ ೬-೭ ತಿಂಗಳಿಂದ ಒಂದೇ ಹಂತದಲ್ಲಿ ಬೆಂಗಳೂರು ಸುತ್ತಮುತ್ತ ಹಾಗೂ ಕನಕಪುರದಲ್ಲಿ ೩೨ ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ವಿಭಿನ್ನವಾದ ಚಿತ್ರಕಥೆ ಹೊಂದಿದ್ದು, ಇದುವರೆಗೂ ಈ ರೀತಿಯ ಚಿತ್ರಕತೆ ಯಾವ ಚಿತ್ರದಲ್ಲೂ ಬಂದಿಲ್ಲ. ಚಿತ್ರದಲ್ಲಿ ಸುಮಾರು ೬೦ ಪಾತ್ರಗಳಿದ್ದು, ಒಂದು ದೃಶ್ಯದಲ್ಲಿ ಬಂದ ಕಲಾವಿದರು ಮತ್ತೊಂದು ದೃಶ್ಯದಲ್ಲಿ ಬರುವುದಿಲ್ಲ ಇಡೀ ಚಿತ್ರದಲ್ಲಿ ಇರುವುದು ೫೦೦ ರೂ. ನೋಟು ಮಾತ್ರ. ಅದರ ಸುತ್ತಲೇ ಚಿತ್ರವನ್ನು ಮಾಡಲಾಗಿದೆ.
ಚಿತ್ರದಲ್ಲಿ ೫೦೦ ರೂ. ನೋಟು ನಾಯಕ. ಉಳಿದಂತೆ ಚಿತ್ರಕ್ಕೆ ನಾಯಕರಾಗಿ ಪ್ರವೀಣ್ ಕಾಣಿಸಿಕೊಂಡಿದ್ದಾರೆ. ನಿಧಿ ಸುಬ್ಬಯ್ಯ ಪತ್ರಕರ್ತೆಯ ಪಾತ್ರ ಮಾಡಿದ್ದಾರೆ.
ಲವಲವಿಕೆಯ ಹುಡುಗ- ಹುಡುಗಿ ಬೇಕಾಗಿತ್ತು. ಆದ್ದರಿಂದ ಈ ಇಬ್ಬರನ್ನು ಆಯ್ಕೆ ಮಾಡಲಾಗಿತ್ತು. ಇನ್ನುಳಿದಂತೆ ಅವಿನಾಶ್, ಎಡಕಲುಗುಡ್ಡದ ಚಂದ್ರಶೇಖರ್ ಸೇರಿದಂತೆ ಹಲವು ಕಲಾವಿದರಿದ್ದಾರೆ.
ಧ್ವನಿಸುರುಳಿಯಲ್ಲಿ ಮೂರು ಹಾಡುಗಳಿದ್ದು, ಚಿತ್ರದಲ್ಲಿ ೨ ಹಾಡುಗಳಷ್ಟೇ ಇರಲಿವೆ. ಚಿತ್ರ ಉತ್ತಮವಾಗಿ ಮೂಡಿಬಂದಿದ್ದು, ಮುಂದಿನ ತಿಂಗಳು ಬಿಡುಗಡೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು. ನಿರ್ಮಾಪಕರಲ್ಲಿ ಒಬ್ಬರಾದ ಗಿರೀಶ್ ಕುಮಾರ್, ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವ ಕಾರಣಕ್ಕಾಗಿ ಚಿತ್ರವನ್ನು ಕೈಗೆತ್ತಿಕೊಂಡಿದ್ದೇವೆ. ಚಿತ್ರದಲ್ಲಿ ಸಂದೇಶದ ಜತೆಗೆ ಮನರಂಜನೆಯೂ ಇದೆ. ಒಳ್ಳೆಯ ಚಿತ್ರ ನೀಡುವುದು ನಮ್ಮ ಉದ್ದೇಶ ಎಂದರೆ, ಮತ್ತೊಬ್ಬ ನಿರ್ಮಾಪಕಿ ದೀಪು.
ಸಿನಿಮಾ ಮೂಲಕ ಸಂದೇಶವನ್ನು ಜನರಿಗೆ ಬೇಗ ತಲುಪಿಸಬಹುದು. ಹಾಗಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದೇವೆ. ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ನಾಯಕ ಪ್ರವೀಣ್, ಚಿತ್ರದಲ್ಲಿ ಕಥೆಯೇ ನಾಯಕ. ಲವಲವಿಕೆಯಿಂದ ಕೂಡಿಗುವ ಸುಳ್ಳು ಹೇಳಿ ಜನರನ್ನು ಕೂಡಿಸುವಂತಹ ಪಾತ್ರ. ನೋಟಿನೊಳಗಿರುವ ಗಾಂಧಿಯನ್ನು ಹುಡುಕುವ ಕಥೆ ಕುತೂಹಲ ಬರಿತವಾಗಿದೆ. ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ಭರವಸೆ ವ್ಯಕ್ತಪಡಿಸಿದರು.
ನಟಿ ನಿಧಿ ಸುಬ್ಬಯ್ಯ, ಕಾರ್ಯಕ್ರಮ ಆರಂಭವಾದ ೧
ಗಂಟೆ ಬಳಿಕ ಆಗಮಿಸಿ ಮುಂಬೈನಿಂದ ಬಂದೆ ತಡವಾಯಿತು ಎನ್ನುತ್ತಲೇ ಚಿತ್ರದಲ್ಲಿ ನನ್ನದು ಪತ್ರಕರ್ತೆಯ ಪಾತ್ರ ಎಂದು ಒಂದೇ ವಾಕ್ಯದಲ್ಲಿ ಮಾತು ಮುಗಿಸಿದರು. ನಿಧಿ ಸುಬ್ಬಯ್ಯ ಚುಟುಕಾಗಿ ಮಾತು ಮುಗಿಸುತ್ತಿದ್ದಂತೆ ಇಷ್ಟು ಮಾತನಾಡಲು ಮುಂಬೈನಿಂದ ಅದು ತಡವಾಗಿ ಬರಬೇಕಾಗಿತ್ತಾ ಎನ್ನುವ ಮಾತುಗಳು ಬಹುಶಃ ಆಕೆಯ ಕಿವಿಗೆ ಬಿದ್ದಂತೆ ಕಾಣಲಿಲ್ಲ. ಅಂದಹಾಗೆ ಹೊಸ ವರ್ಷದ ಆರಂಭಕ್ಕೆ ೫ಜಿ ತೆರಗೆ ತರಲು ಎಲ್ಲಾ ಸಿದ್ದತೆಗಳನ್ನೂ ಮಾಡಿಕೊಳ್ಳಲಾಗುತ್ತಿದೆ.