ಮುಂಬೈ: ಸೂಪರ್ ಸ್ಟಾರ್ ರಜನೀಕಾಂತ್, ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟನೆಯ ರೋಬೊಟ್ 2.0 ಚಿತ್ರ ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸಿದೆ.
ಭಾನುವಾರ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ 2.0 ಚಿತ್ರದ ಫಸ್ಟ್ ಲೂಕ್ ಬಿಡುಗಡೆ ಮಾಡಿದ್ದು. ಚಿತ್ರವನ್ನು ಎಸ್. ಶಂಕರ್ ನಿರ್ದೇಶನ ಮಾಡುತ್ತಿದ್ದಾರೆ.
‘ಎಂದಿರನ್’ ಸಿನಿಮಾದ ಮುಂದುವರಿದ ಅವತರಣಿಕೆಯಾಗಿರುವ 2.0, ಅತ್ಯಾಧುನಿಕ ತಂತ್ರಜ್ಞಾನ ಮತ್ತು ವೈಜ್ಞಾನಿಕ ಅಂಶಗಳನ್ನು ಚಿತ್ರಕಥೆಯಲ್ಲಿ ಅಳವಡಿಸಿಕೊಂಡಿದೆ.
‘ಎಂದಿರನ್’ ಸಿನಿಮಾದ ಮುಂದುವರಿದ ಭಾಗವಾಗಿ 3.0, 4.0, 5.0 ಹೀಗೆ ಹಲವು ಅವತರಣಿಕೆಗಳ ಚಿತ್ರ ನಿರ್ಮಾಣ ಕಾರ್ಯವನ್ನು ಮುಂದುವರಿಸುವುದಾಗಿ ನಿರ್ದೇಶಕ ಎಸ್. ಶಂಕರ್ ತಿಳಿಸಿದ್ದಾರೆ. 2.0 ಚಿತ್ರದ ನಿರ್ಮಾಣ ಕಾರ್ಯ ಹೆಚ್ಚು ಜವಾಬ್ದಾರಿಯುತವಾದದ್ದು ಎಂದರು.
ವಿಶ್ಯುವಲ್ ಎಫೆಕ್ಟ್ ವಿನ್ಯಾಸಕ ವಿ. ಶ್ರೀನಿವಾಸ ಮೋಹನ್ ಮಾತನಾಡಿ ಈ ಹಿಂದೆ ತೆರೆ ಕಂಡಿದ್ದ ರೋಬೊಟ್, ಬಾಹುಬಲಿ ಸಿನಿಮಾಗಳಿಗಿಂತ 2.0 ಭಿನ್ನವಾಗಿರಲಿದೆ ಎಂದರು.
ಈ ಹಿಂದಿನ ಎಂದಿರನ್ (ತಮಿಳು), ರೋಬೊ(ತೆಲುಗು), ರೋಬೊಟ್(ಹಿಂದಿ) ಚಿತ್ರಗಳಲ್ಲಿ ಐಶ್ವರ್ಯಾ ರೈ ಬಚ್ಚನ್ ನಾಯಕಿಯಾಗಿದ್ದರು.
2.0 ಚಿತ್ರ ಮುಂದಿನ ವರ್ಷದ ದೀಪಾವಳಿ ಹಬ್ಬದ ವೇಳೆಗೆ ಬಿಡುಗಡೆಯಾಗಲಿದ್ದು, ಎ.ಆರ್ ರೆಹಮಾನ್ ಖಾನ್ ಚಿತ್ರದ ಸಂಗೀತ ನಿರ್ದೇಶಕರಾಗಿದ್ದಾರೆ. ಚಿತ್ರದ ಫಸ್ಟ್ ಲುಕ್ ಹೆಚ್ಚು ಆಕರ್ಷಣೀಯವಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲವನ್ನು ಹೆಚ್ಚಿಸಿದೆ.