ಮನೋರಂಜನೆ

ಗಾಳಿಪಟದ ನಂತರ ಮತ್ತೆ ಒಂದಾದ ಮುಂಗಾರು ಮಳೆ ಜೋಡಿ

Pinterest LinkedIn Tumblr

yogaಯೋಗರಾಜ್‌ ಭಟ್‌ ಮತ್ತು ಗಣೇಶ್‌ ಒಟ್ಟಿಗೆ ಚಿತ್ರ ಮಾಡುತ್ತಾರೆ ಎಂಬ ಸುದ್ದಿ ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಕಳೆದ ವರ್ಷ ಸಹ ಬಿ. ಸುರೇಶ ನಿರ್ಮಾಣದಲ್ಲಿ, ಗಣೇಶ್‌ ಅಭಿನಯದಲ್ಲಿ ಯೋಗರಾಜ್‌ ಭಟ್‌ ಒಂದು ಚಿತ್ರ ನಿರ್ದೇಶಿಸುತ್ತಾರೆ ಎಂದು ವಿಪರೀತ ಸುದ್ದಿಯಾಗಿತ್ತು. ಚಿತ್ರದ ಪೂಜೆ ನಡೆದಿದ್ದೂ ನೆನಪು. ಆದರೆ, ಚಿತ್ರ ಮಾತ್ರ ಸೆಟ್ಟೇರಿರಲಿಲ್ಲ. ಹಾಗಾಗಿ ಈಗೊಂದೆರೆಡು ದಿನಗಳಿಂದ ಯೋಗರಾಜ್‌ ಭಟ್‌ ಹಾಗೂ ಗಣೇಶ್‌ ಒಟ್ಟಿಗೆ ಚಿತ್ರ ಮಾಡುತ್ತಾರೆ ಎಂಬ ಸುದ್ದಿ ಹಬ್ಬಿದಾಗ, ಇದು ಸುದ್ದಿಯೋ ಅಥವಾ ಗಾಳಿಸುದ್ದಿಯೋ ಎಂಬುದು ಹಲವರಿಗೆ ಅನುಮಾನವಿತ್ತು. ಈ ಬಗ್ಗೆ ಅಪನಂಬಿಕೆಯೇ ಬೇಡ, ಸುದ್ದಿ ನಿಜ ಎಂದು ಖುದ್ದು ಯೋಗರಾಜ್‌ ಭಟ್‌ ಒಪ್ಪಿಕೊಂಡಿದ್ದಾರೆ.

ಈ ಕುರಿತು ಮಾಧ್ಯಮದವರಿಗೆ ಒಂದು ಪತ್ರವನ್ನೂ ಬರೆದಿದ್ದಾರೆ. ಆ ಪತ್ರದಲ್ಲಿ “ಮುಂಗಾರು ಮಳೆ’, “ಗಾಳಿಪಟ’ ಚಿತ್ರಗಳ ನಂತರ ಗಣೇಶ್‌ ಜೊತೆಗೆ ಸಿನಿಮಾ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. ಈ ಹಿಂದೆ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡುವುದಕ್ಕೆ ಉತ್ಸುಕರಾಗಿದ್ದರೂ, ಕಾರಣಾಂತರಗಳಿಂದ ಅದು ಸಾಧ್ಯವಾಗುತ್ತಿರಲಿಲ್ಲವೆಂದೂ, ಈಗ ಅವಕಾಶ ಹಾಗೂ ಸಮಯ ಎರಡೂ ಸಿಕ್ಕಿರುವುದರಿಂದ, ಇಬ್ಬರೂ ಒಟ್ಟಿಗೆ ಚಿತ್ರ ಮಾಡುತ್ತಿರುವುದಾಗಿ ಖಚಿತಪಡಿಸಿದ್ದಾರೆ.

ಅತ್ಯಂತ ಸರಳವೂ, ದಿನನಿತ್ಯದ ಬದುಕಲ್ಲಿ ಗೋಚರಿಸುವ ಹುಡುಗ-ಹುಡುಗಿಯರ ಭಾವನಾ ಪ್ರಪಂಚವೂ ಈ ಕಥಾನಕದಲ್ಲಿರುತ್ತದಂತೆ. ಒಬ್ಬ ಹುಡುಗನ ಜೀವನ, ವೃತ್ತಿ, ಪ್ರೀತಿ, ತಂದೆ-ತಾಯಿ, ಸಮಾಜ ಎಲ್ಲದರ ಹೊಸ ಹೊಳಹು ಈ ಕಥೆಯಲ್ಲಿದೆಯಂತೆ. ಚಿತ್ರದ ಶೀರ್ಷಿಕೆ ಇನ್ನೂ ಫೈನಲ್‌ ಆಗಿಲ್ಲ. ಇನ್ನು ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದಾರೆ. ಯೋಗರಾಜ್‌ ಭಟ್‌ ಮತ್ತು ಜಯಂತ್‌ ಕಾಯ್ಕಿಣಿ ಚಿತ್ರಕ್ಕೆ ಹಾಡುಗಳನ್ನು ಬರೆಯುತ್ತಿದ್ದಾರೆ. ಅಂತರಾಳಕ್ಕೆ ತಾಕುವಂಥ ಹೊಸ ರೀತಿಯ ಹಾಡುಗಳ ರಚನೆ, ಸಂಯೋಜನೆ ಜಾರಿಯಲ್ಲಿದೆ. ಸ್ಕ್ರಿಪ್ಟ್ ಬರವಣಿಗೆ ಭಾಗಶಃ ಮುಗಿದಿದೆಯಂತೆ.

ಈ ಚಿತ್ರವನ್ನು ಯೋಗರಾಜ್‌ ಭಟ್‌ ಹಾಗೂ ಗಣೇಶ್‌ ಇಬ್ಬರೂ ಜೊತೆಗೆ ನಿರ್ಮಿಸುತ್ತಿದ್ದಾರಂತೆ. ಸೆಪ್ಟೆಂಬರ್‌ 25ರ ಆಸುಪಾಸು ಚಿತ ರ ಪ್ರಾರಂಭವಾಗಲಿದ್ದು, ಮೈಸೂರು ಹಾಗೂ ಕರ್ನಾಟಕದ ಇತರೆ ಹಲವಾರು ಜಿಲ್ಲೆಗಳಲ್ಲಿ ನಡೆಯಲಿದೆಯಂತೆ. ನಾಯಕಿ, ಇತರೆ ಕಲಾವಿದರು, ತಂತ್ರಜ್ಞರ ಆಯ್ಕೆ ಇನ್ನಷ್ಟೇ ಆಗಬೇಕಿದೆ.

-ಉದಯವಾಣಿ

Comments are closed.