ಹಾಸ್ಯ ನಟ ಚಿಕ್ಕಣ್ಣ ಈಗ ಬಿಲ್ ಗೇಟ್ಸ್! ಅರೇ, ಹೀಗೆಂದಾಕ್ಷಣ ಅಚ್ಚರಿ ಆಗೋದು ಸಹಜ. ಯಾಕೆಂದರೆ ಇದು ಸಿನಿಮಾ ವಿಷಯ. ಚಿಕ್ಕಣ್ಣ “ಬಿಲ್ ಗೇಟ್ಸ್’ ಎಂಬ ಚಿತ್ರಕ್ಕೆ ಹೀರೋ! ಇವರೊಬ್ಬರೇ ಅಲ್ಲ, ಇವರೊಂದಿಗೆ ಕಿರುತೆರೆಯಲ್ಲಿ ಮೂಡಿಬರುತ್ತಿರುವ “ಕುಲವಧು’ ಧಾರಾವಾಹಿಯ ನಟ ಶಿಶಿರ ಕೂಡ ನಟಿಸುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಕೇಳಿದರೆ, ಚಿಕ್ಕಣ್ಣ ಹೀರೋ ಆಗಿದ್ದಾರೆ ಅಂದಮೇಲೆ ಇದೊಂದು ಕಾಮಿಡಿ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ ಬಿಡಿ.
ಆಂತೂ ಮೆಲ್ಲ ಮೆಲ್ಲನೆ ಚಿಕ್ಕಣ್ಣ ಕೂಡ ಹೀರೋ ಲೆವೆಲ್‌ಗೆ ಬಂದಂಗಾಯ್ತು. ಕೋಮಲ್ ಹಾಸ್ಯನಟರಾಗಿ ಹೀರೋ ಆದ್ರು, ಮತ್ತೆ ಹಿಂದಿರುಗಲಿಲ್ಲ. ಶರಣ್ ಕೂಡ ಅದೇ ಹಾದಿಯಲ್ಲಿದ್ದಾರೆ. ಈಗ ಚಿಕ್ಕಣ್ಣನ ಸರದಿ. ಹಾಸ್ಯ ನಟರಾಗಿಯೇ ಬಿಜಿಯಾಗಿರೋದು ಎಲ್ಲರಿಗೂ ಗೊತ್ತಿದೆ. ಈಗ “ಬಿಲ್ ಗೇಟ್ಸ್’ ಮೂಲಕ ಹೀರೋ ಆಗಿ ಮತ್ತೆಷ್ಟು ಬಿಜಿಯಾಗುತ್ತಾರೋ ಕಾದು ನೋಡಬೇಕು.
ಇನ್ನು, ಈ ಚಿತ್ರದ ಮೂಲಕ ಶ್ರೀನಿವಾಸ್ ನಿರ್ದೇಶಕರಾಗುತ್ತಿದ್ದಾರೆ. ಈ ಹಿಂದೆ “ವಿಕ್ಟರಿ’, “ಕ್ವಾಟ್ಲೆ ಸತೀಶ್’, “ಸಂಜೀವ’ ಚಿತ್ರಗಳಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡಿದ ಅನುಭವ ಇದೆ. ಕಥೆ, ಚಿತ್ರಕಥೆ ಜತೆಗೆ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ ಶ್ರೀನಿವಾಸ್. ಪಾಂಚಜನ್ಯ ಸಿನಿ ಕ್ರಿಯೇಷನ್ಸ್ ಮೂಲಕ ಗೆಳೆಯರು ಸೇರಿ ಈ ಚಿತ್ರಕ್ಕೆ ಹಣ ಹಾಕಿ ನಿರ್ಮಾಣ ಮಾಡುತ್ತಿದ್ದಾರಂತೆ.
ಇದೊಂದು ಔಟ್ ಅಂಡ್ ಔಟ್ ಕಾಮಿಡಿ ಚಿತ್ರವಾಗಿದ್ದು, ಒಂದೊಳ್ಳೆಯ ಮನರಂಜನೆ ಕೊಡುವ ಉದ್ದೇಶದಿಂದ ಕಥೆಯ ಎಳೆ ಕೂಡ ಅಂಥದ್ದೇ ಇಟ್ಟುಕೊಂಡು ಸಿನಿಮಾ ಮಾಡುತ್ತಿರುವುದಾಗಿ ಹೇಳುತ್ತಾರೆ ಶ್ರೀನಿವಾಸ್. ಚಿಕ್ಕಣ್ಣ ಮತ್ತು ಶಿಶಿರ ಇಲ್ಲಿ ನಾಯಕರಾದರೆ, ಅವರಿಗೆ ಇಬ್ಬರು ನಾಯಕಿರೂ ಇದ್ದಾರೆ. ಸದ್ಯಕ್ಕೆ ಪೂಜಾ ಎನ್ನುವ ನಾಯಕಿ ಫೈನಲ್ ಆಗಿದ್ದು, ಇನ್ನೊಬ್ಬ ನಾಯಕಿಗೆ ಹುಡುಕಾಟ ನಡೆಸಲಾಗಿದೆ. ಇನ್ನು, ಚಿತ್ರಕ್ಕೆ ನೊಬಿನ್ ಪಾಲ್ ಸಂಗೀತ ನೀಡಿದರೆ, ರಾಕೇಶ್ ಪಿ.ತಿಲಕ್ ಕ್ಯಾಮೆರಾ ಹಿಡಿಯುತ್ತಿದ್ದಾರೆ. ದಯಾ ಮಲ್ಲಿಕಾರ್ಜುನ ಸಂಭಾಷಣೆ ಬರೆಯುತ್ತಿದ್ದಾರೆ.
ಚಿಕ್ಕಣ್ಣ ಮತ್ತು ಶಿಶಿರ ಜತೆಯಲ್ಲಿ ಕುರಿ ಪ್ರತಾಪ್, ಗಿರಿ ಇತರರು ನಟಿಸುತ್ತಿದ್ದಾರೆ. ಮೈಸೂರು, ಶ್ರೀರಂಗಪಟ್ಟಣ, ಮಂಡ್ಯ ಸುತ್ತಮುತ್ತ ಸುಮಾರು 25 ದಿನಗಳ ಕಾಲ ಚಿತ್ರೀಕರಣ ನಡೆಸುವ ಯೋಚನೆ ಚಿತ್ರತಂಡಕ್ಕಿದೆ. ಸದ್ಯಕ್ಕೆ ಟೀಸರ್ ಬಿಡುವ ತಯಾರಿಯಲ್ಲಿರುವ ಚಿತ್ರತಂಡ, ಪಬ್ಲಿಕ್ ಜತೆ ಒಂದು ಸುತ್ತು ಸಂದರ್ಶನ ನಡೆಸಿ, “ಜಸ್ಟ್ ವೇಟ್ ಅಂಡ್ ಸೀ..’ ಹೆಸರಿನ ಟೀಸರ್ ಬಿಡುಗಡೆ ಮಾಡಲಿದ್ದಾರಂತೆ. ಆಗಸ್ಟ್ 12 ಕ್ಕೆ ಮುಹೂರ್ತ ನಡೆಯಲಿದ್ದು, ಆಗಸ್ಟ್ 18 ರಿಂದ ಚಿತ್ರೀಕರಣಕ್ಕೆ ಚಾಲನೆ ಕೊಡಲಿದೆ “ಬಿಲ್ ಗೇಟ್ಸ್’ ತಂಡ.
-ಉದಯವಾಣಿ
Comments are closed.