ನೀರ್‌ದೋಸೆ ಚಿತ್ರದ ಹಾಡುಗಳ ಜೊತೆಗೆ ಟ್ರೇಲರ್ ಕೂಡಾ ಬಿಡುಗಡೆಯಾಗಿದೆ. ಹಾಡುಗಳಿಗಿಂತ ಹೆಚ್ಚಾಗಿ ಟ್ರೇಲರ್ ಸೌಂಡ್ ಮಾಡುತ್ತಿದೆ. ಅದಕ್ಕೆ ಕಾರಣ ಟ್ರೇಲರ್‌ನಲ್ಲಿರುವ ಕೆಲವು ಅಂಶಗಳು. ಸಿಕ್ಕಾಪಟ್ಟೆ ಡಬಲ್ ಮೀನಿಂಗ್‌ಗಳಿಂದ ಕೂಡಿರುವ ಟ್ರೇಲರ್ ಒಂದು ಕಡೆಯಾದರೆ ಅದರಲ್ಲಿ ಹೇಳಿರುವ ಒಂದು ಡೈಲಾಗ್ ಕೂಡಾ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಆ ಡೈಲಾಗ್ ಅನ್ನು ನಟಿ ರಮ್ಯಾ ಅವರಿಗೆ ಹೇಳಲಾಗಿದೆ ಎಂದು ಟ್ರೇಲರ್ ನೋಡಿದವರು ಮಾತನಾಡಿಕೊಳ್ಳುತ್ತಿದ್ದಾರೆ.
ಅಷ್ಟಕ್ಕೂ ಆ ಡೈಲಾಗ್ ಏನೂ ಅಂತೀರಾ. ಚಿತ್ರದ ಟ್ರೇಲರ್‌ನಲ್ಲಿ ದತ್ತಣ್ಣ ಹಾಗೂ ಜಗ್ಗೇಶ್ ನಡುವೆ ನಡೆಯುವ ಆ ಸಂಭಾಷಣೆ ಹೀಗಿದೆ:
ದತ್ತಣ್ಣ: ಲೋ ಜಗ್ಗು, ಮಸಾಲೆ ದೋಸೆ ಚಿತ್ರದಿಂದ ಹೊರಹೋಗಿದ್ದಾಳಲ್ಲಾ, ಆ ಚಿತ್ರ ನಟಿ ಸೌಮ್ಯ ಆಯಮ್ಮಾ ಹೆಂಗೋ?
ಜಗ್ಗೇಶ್: ಅವರು ಒಂಥರಾ ಅವರೆಕಾಯಿ ಇದ್ದಂಗೆ. ಹುಳ ಇದ್ದರೂ ಸೊಗಡು ಜಾಸ್ತಿ …’. ಈ ರೀತಿಯ ಸಂಭಾಷಣೆ ಇದ್ದು, ಇದು ನಟಿ ರಮ್ಯಾಗೆ ಕೊಟ್ಟ ಟಾಂಗ್ ಎನ್ನಲಾಗಿದೆ.
“ನೀರ್ ದೋಸೆ’ ತಂಡ ರಮ್ಯಾಗೆ ಯಾಕೆ ಟಾಂಗ್ ಕೊಡಬೇಕು ಎಂದು ನೀವು ಕೇಳಬಹುದು. ಆರಂಭದಲ್ಲಿ
ಈ ಚಿತ್ರದಲ್ಲಿ ನಾಯಕಿಯಾಗಿ ಇದ್ದವರು ರಮ್ಯಾ. ಕೆಲ ದಿನಗಳ ಕಾಲ ಚಿತ್ರೀಕರಣದಲ್ಲೂ ಭಾಗವಹಿಸಿದ್ದರು. ಕೊನೆಗೆ ಕಾರಣಾಂತರಗಳಿಂದ ಚಿತ್ರದಿಂದ ರಮ್ಯಾ ಹೊರಬಂದಿದ್ದು ನಿಮಗೆ ಗೊತ್ತೇ ಇದೆ. ಈ ಕುರಿತಾಗಿ ಸಾಕಷ್ಟು ವಿವಾದಗಳು ಹುಟ್ಟಿಕೊಂಡಿದ್ದವು. ಜೊತೆಗೆ ಟ್ವೀಟ್‌ವಾರ್ ಕೂಡಾ ನಡೆಯುತ್ತಲೇ ಇತ್ತು. ಅಂತಿಮವಾಗಿ ರಮ್ಯಾ ಜಾಗಕ್ಕೆ ಬಂದವರು ಹರಿಪ್ರಿಯಾ. ಅವರಿಲ್ಲಿ ಕಾಲ್‌ಗರ್ಲ್ ಪಾತ್ರದಲ್ಲಿ ನಟಿಸಿದ್ದು, ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈಗ ಟ್ರೇಲರ್ ನಾನಾ ಕಾರಣಗಳಿಗಾಗಿ ಸದ್ದು ಮಾಡುತ್ತಿದೆ. ಅದರಲ್ಲಿನ ಈ ಸಂಭಾಷಣೆ ಕೂಡಾ ಒಂದು.
ಸದ್ಯ ಜಗ್ಗೇಶ್ “ನೀರ್‌ದೋಸೆ’ ಚಿತ್ರದ ಮೇಲೆ ತುಂಬಾ ನಿರೀಕ್ಷೆ ಇಟ್ಟಿದ್ದಾರೆ. ಅದೇ ಕಾರಣಕ್ಕೆ ಏನೇ ಆದರೂ ಈ ಸಿನಿಮಾ ಪೂರ್ಣವಾಗಬೇಕೆಂದು ಆಸೆ ಪಟ್ಟಿದ್ದರಂತೆ. ಪ್ರತಿ ಹತ್ತು ವರ್ಷಗಳಿಗೊಮ್ಮೆ ಜಗ್ಗೇಶ್‌ಗೆ ಒಂದು ಒಳ್ಳೆಯ ಸಿನಿಮಾ ಸಿಗುತ್ತದೆಯಂತೆ. ಈ ಬಾರಿ ಅಂತಹ ಒಳ್ಳೆಯ ಸಿನಿಮಾ “ನೀರ್‌ದೋಸೆ’ಯಾಗಲಿದೆ ಎಂಬುದು ಜಗ್ಗೇಶ್ ವಿಶ್ವಾಸ. ಚಿತ್ರದಲ್ಲಿ ತುಂಬಾ ಬೋಲ್ಡ್ ಆಗಿ ನಟಿಸಿದ ಹರಿಪ್ರಿಯಾ ಬಗ್ಗೆಯೂ ಜಗ್ಗೇಶ್‌ಗೆ ಮೆಚ್ಚುಗೆ ಇದೆ. “ಇಂತಹ ಪಾತ್ರ ಎಲ್ಲರಿಗೂ ಸಿಗೋದಿಲ್ಲ.
ಅದೃಷ್ಟವಿದ್ದವರಿಗೆ ಮಾತ್ರ ಸಿಗುತ್ತದೆ. ಆ ಮಟ್ಟಿಗೆ ಹರಿಪ್ರಿಯಾ ತುಂಬಾ ಅದೃಷ್ಟವಂತೆ. ತುಂಬಾ ಚೆನ್ನಾಗಿ ನಟಿಸಿದ್ದಾರೆ’ ಎನ್ನುವುದು ಜಗ್ಗೇಶ್ ಮಾತು. ವಿಜಯಪ್ರಸಾದ್ ಈ ಚಿತ್ರದ ನಿರ್ದೇಶಕರು.
-ಉದಯವಾಣಿ
Comments are closed.