ಗಣೇಶ ವೈದ್ಯ
ಆಶಿಕಾ ಹುಟ್ಟಿ ಬೆಳೆದಿದ್ದು ತುಮಕೂರಿನಲ್ಲಿ. ಸದ್ಯ ಬೆಂಗಳೂರಿನಲ್ಲಿ ಬಿ.ಕಾಂ ಎರಡನೇ ವರ್ಷ ಓದುತ್ತಿರುವ ಅವರು ಕುಟುಂಬದೊಂದಿಗೆ ಬೆಂಗಳೂರಿನಲ್ಲಿಯೇ ವಾಸವಾಗಿದ್ದಾರೆ. ಈಗಿನ್ನೂ ಇಪ್ಪತ್ತರ ಹೊಸ್ತಿಲಲ್ಲಿರುವ ಆಶಿಕಾ ‘ಕ್ರೇಜಿ ಬಾಯ್’ ಚಿತ್ರದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ನಿಮ್ಮ ಸಿನಿಮಾ ಪ್ರವೇಶ ಆದದ್ದು ಹೇಗೆ ಎಂದು ಪ್ರಶ್ನಿಸಿದರೆ, ಉತ್ತರ ರೂಪದಲ್ಲಿ ಆಶಿಕಾ ಕಥೆಯೊಂದನ್ನು ಹೇಳುತ್ತಾರೆ: ‘‘ನಾನು ಹತ್ತನೇ ತರಗತಿ ಓದುವ ಸಂದರ್ಭದಲ್ಲಿ ನಿರ್ದೇಶಕ ಮಹೇಶ್ ಬಾಬು ಅವರು ಸಿನಿಮಾದಲ್ಲಿ ನಟಿಸುತ್ತೀಯಾ ಎಂದು ಫೇಸ್‌ಬುಕ್‌ನಲ್ಲಿ ಕೇಳಿದ್ದರು. ಆಗ ಆಸಕ್ತಿ ಇರಲಿಲ್ಲ. ಮುಂದೆ ನಟಿಸಬೇಕು ಅನ್ನಿಸಿದರೆ ನೋಡುತ್ತೇನೆ ಎಂದು ತಪ್ಪಿಸಿಕೊಂಡಿದ್ದೆ.
ಫೇಸ್‌ಬುಕ್‌ನಲ್ಲಿ ಆಕಾಶ ತೋರಿಸುವ ಅವಕಾಶವಾದಿಗಳು ಬೇಕಷ್ಟು ಜನರಿರುತ್ತಾರೆ ಎಂಬ ಉದಾಸೀನವೂ ಇತ್ತು. ಅದು ಬಹುಶಃ ‘ಅಜಿತ್’ ಸಿನಿಮಾಕ್ಕಾಗಿ ಅನ್ನಿಸುತ್ತೆ. ಒಂದೊಮ್ಮೆ ಆ ಸಿನಿಮಾ ಒಪ್ಪಿಕೊಂಡಿದ್ದರೆ ನಾಯಕಿಯಾಗಿ ನಾಲ್ಕು ವರ್ಷಗಳೇ ಕಳೆದಿರುತ್ತಿತ್ತು. ಹಾಗಂತ ಅಂದು ಅವಕಾಶ ತಪ್ಪಿದ್ದಕ್ಕೆ ಈಗಲೂ ಬೇಸರವಿಲ್ಲ. ಇದೀಗ ನನ್ನ ಸಿನಿಮಾ ಪ್ರವೇಶ ಆಗುತ್ತಿರುವುದು ಮಹೇಶ್ ಬಾಬು ನಿರ್ದೇಶನದಲ್ಲಿಯೇ…’’ ಎಂದು ಕಳೆದ ನಾಲ್ಕು ವರ್ಷಗಳ ಸಂಗತಿಗಳನ್ನು ಆಶಿಕಾ ನಾಲ್ಕು ಮಾತುಗಳಲ್ಲಿ ಹೇಳುತ್ತಾರೆ.
‘ಮೊದಲ ಅವಕಾಶ ಬಿಟ್ಟಿದ್ದಾಗಿದೆ. ಎರಡನೇ ಬಾರಿ ಮತ್ತೆ ಅವಕಾಶ ತಪ್ಪಿಸಿಕೊಳ್ಳದಿರು’ ಎಂದು ಹೆತ್ತವರ ಮುದ್ದಿನ ಒತ್ತಾಯವೂ ಆಶಿಕಾ ನಟಿಸಲು ಕಾರಣವಾಗಿದೆ. ಮಹೇಶ್ ಬಾಬು ಒಳ್ಳೆಯ ಸಿನಿಮಾಗಳನ್ನು ನೀಡಿದವರು, ತನಗೂ ಈ ಸಿನಿಮಾದಿಂದ ಒಳ್ಳೆಯದೇ ಆಗುತ್ತದೆ ಎಂಬ ನಿರೀಕ್ಷೆ ಅವರದು.
ಆಶಿಕಾಗೆ ಚಿಕ್ಕಂದಿನಿಂದಲೂ ಡಾನ್ಸ್ ಮೇಲೆ ಪ್ರೀತಿ. ‘ನಾನು ಡಾನ್ಸ್‌ಗೆ ಸೇರಿದ್ದು ಅಕ್ಕನಿಂದಾಗಿ. ನಮ್ಮಿಬ್ಬರಿಗೂ ಮನೆಯಲ್ಲಿ ಸಾಕಷ್ಟು ಪ್ರೋತ್ಸಾಹ ಸಿಗುತ್ತಿತ್ತು’ ಎಂದು ಬಾಲ್ಯದ ದಿನಕ್ಕೆ ಹೊರಳುತ್ತಾರೆ. ಶಾಲೆಯಲ್ಲಿ ಡಾನ್ಸ್ ಷೋ ನೀಡುವಾಗ ಅವರ ಸ್ನೇಹಿತೆಯರೆಲ್ಲ, ಡಾನ್ಸ್ ಮಾಡುವಾಗ ನಿನ್ನ ಮುಖಭಾವ ಚೆನ್ನಾಗಿರುತ್ತದೆ.
ನೀನ್ಯಾಕೆ ಸಿನಿಮಾದಲ್ಲಿ ನಟಿಸಬಾರದು ಎಂದು ಕೇಳುತ್ತಿದ್ದರಂತೆ. ಆಗ ನೃತ್ಯದ ಹುಚ್ಚು ಬಿಟ್ಟರೆ ಬೇರೆ ಕನವರಿಕೆ ಇರಲಿಲ್ಲ. ಆಶಿಕಾ ಅಕ್ಕ ಅನುಷಾ ಕೂಡ ನಟಿ. ‘ಸೋಡಾಬುಡ್ಡಿ’ ಚಿತ್ರದಲ್ಲಿ ಅನುಷಾ ನಾಯಕಿ. ಅಕ್ಕನ ಅನುಭವದಿಂದ ಆಶಿಕಾಗೆ ಅಗತ್ಯ ಸಲಹೆ ಸೂಚನೆಗಳು ಸಿಕ್ಕುತ್ತಿವೆಯಂತೆ.
ಆಶಿಕಾ ದ್ವಿತೀಯ ಪಿಯುಸಿ ಮುಗಿಸುವ ಹೊತ್ತಿಗೆ ಸರಿಯಾಗಿ ಸೌಂದರ್ಯ ಸ್ಪರ್ಧೆಯೊಂದು ಏರ್ಪಾಡಾಗಿತ್ತು. ಅಲ್ಲವರು ಮೊದಲ ರನ್ನರ್ ಅಪ್ ಆಗಿದ್ದರು. ‘ಆಗ ಒಳ್ಳೆಯ ವೃತ್ತಿಪರರು ತೆಗೆದ ಫೋಟೊಗಳನ್ನೇ ನಾನು ಫೇಸ್‌ಬುಕ್, ವಾಟ್ಸ್‌ಆ್ಯಪ್‌ನಲ್ಲಿ ಹಾಕಿದ್ದು. ಅವೇ ನನಗೆ ಸಿನಿಮಾ ಅವಕಾಶ ಕೊಡಿಸಲು ಸಹಾಯವಾಗಿದ್ದು’ ಎನ್ನುತ್ತಾರೆ.
ವಾಲಿಬಾಲ್, ಖೋಖೊ, ಅಥ್ಲೆಟಿಕ್ಸ್‌ಗಳಲ್ಲೂ ದೇಹ ಪಳಗಿಸಿದ್ದ ಆಶಿಕಾಗೆ ಡಾನ್ಸ್ ಸುಲಭವಾಗಿದ್ದರೂ ‘ಕ್ರೇಜಿ ಬಾಯ್’ನಲ್ಲಿ ಅವರ ನೃತ್ಯಕ್ಕೆ ಹೆಚ್ಚು ಅವಕಾಶ ಸಿಕ್ಕಿಲ್ಲ. ಒಂದಷ್ಟು ದಿನ ಸಿನಿಮಾಕ್ಕಾಗಿ ತಾಲೀಮು ಮಾಡಿದ್ದು ಬಿಟ್ಟರೆ ಉಳಿದೆಲ್ಲ ಪಟ್ಟುಗಳನ್ನು ಕಲಿತಿದ್ದು ನೇರ ಕ್ಯಾಮೆರಾದ ಮುಂದೆಯೇ.
ಅವರು ಸದ್ಯ ನಿಜ ಜೀವನದಲ್ಲಿ ಇರುವಂಥದ್ದೇ ಪಾತ್ರಕ್ಕೆ ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ. ಕಾಲೇಜು ಹುಡುಗಿಯ ಆ ಪಾತ್ರಕ್ಕೆ ಗ್ಲಾಮರ್ ಮತ್ತು ಸಾಂಪ್ರದಾಯಿಕ – ಎರಡೂ ಛಾಯೆಗಳಿವೆ. ರವಿಶಂಕರ್ ಎದುರು ಮೊದಲ ದೃಶ್ಯದಲ್ಲಿ ಅಭಿನಯಿಸುವಾಗ ಆಶಿಕಾಗೆ ಮನದಲ್ಲಿ ಭಯ ಆವರಿಸಿತ್ತು. ‘ಆದರೆ ಅವರು ತುಂಬಾನೇ ಪ್ರೋತ್ಸಾಹ ನೀಡಿದರು’ ಎನ್ನುವ ಆಶಿಕಾ, ಬ್ಯಾಂಕಾಕ್‌ನಲ್ಲಿ ಚಿತ್ರೀಕರಣದ ಸಂದರ್ಭದಲ್ಲಿ ಬಿಸಿಲಿಗೆ ಬಳಲಿದ್ದಾರೆ.
ಮುಂದೆ ಉದ್ಯಮಿ ಆಗುವ ಕನಸು ಕಟ್ಟಿರುವ ಅವರಲ್ಲಿ ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸುವ ಯೋಚನೆಯಿಲ್ಲ. ಒಂದು ವೇಳೆ ಬಣ್ಣದ ಬದುಕು ಬೇಗ ಮುಗಿದರೂ ಶಿಕ್ಷಣವೇ ಬೆನ್ನೆಲುಬು ಎಂಬ ಪ್ರಜ್ಞೆಯಿದೆ. ‘ಅವಕಾಶ ಬೇಕೆಂದು ಎಲ್ಲಾ ಪಾತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ. ನನಗೆ ಮೆಚ್ಚುಗೆಯಾಗುವ ಪಾತ್ರಗಳನ್ನು ಮಾತ್ರ ಮಾಡುತ್ತೇನೆ’ ಎನ್ನುತ್ತಾರೆ.
ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿ ಇರುವ ಮಟ್ಟಿಗಿನ ಗ್ಲಾಮರ್ ಪಾತ್ರಗಳಾದರೆ ‘ಓಕೆ’ ಎನ್ನುವ ಅವರು, ಎಲ್ಲೆ ಮೀರುವ ಪಾತ್ರಗಳಿಗೆ ‘ನೋ’ ಎನ್ನುತ್ತಾರೆ. ಪಾತ್ರಕ್ಕೆ ತೀರಾ ಅವಶ್ಯವಿದ್ದರೆ ನೋಡೋಣ ಎಂದು ಬಹುತೇಕ ನಟಿಯರು ಹೇಳುವ ಮಾತನ್ನೂ ಅವರು ಹೇಳುತ್ತಾರೆ. ಮುಂದಿನ ಸಿನಿಮಾ ಒಪ್ಪಿಕೊಳ್ಳುವ ಮುನ್ನ ಕಾಲೇಜಿಗೆ ತೊಂದರೆ ಆಗದಂತೆ ಇದ್ದರೆ ಮಾತ್ರ ಅವರು ಸಹಿ ಹಾಕುವುದಂತೆ.
ಆಶಿಕಾ ಪುನೀತ್ ಅವರ ಅಭಿಮಾನಿ. ಪುನೀತ್, ದರ್ಶನ್ ಜೊತೆ ನಟಿಸುವ ಆಸೆ ಅವರದ್ದು. ನಿರ್ದೇಶಕರ ವಿಚಾರಕ್ಕೆ ಬಂದರೆ ಎಲ್ಲಾ ಒಳ್ಳೆಯ ನಿರ್ದೇಶಕರೊಂದಿಗೆ ಕೆಲಸ ಮಾಡಬೇಕು ಎನ್ನುವ ಅವರು, ಶಶಾಂಕ್, ಸೂರಿ, ಯೋಗರಾಜ್ ಭಟ್ ಹೆಸರನ್ನು ಒತ್ತಿಹೇಳುತ್ತಾರೆ. ಮಹೇಶ್ ಬಾಬು ಅವರೊಂದಿಗೆ ಮುಂದೆ ಎಷ್ಟು ಅವಕಾಶಗಳು ಸಿಕ್ಕರೂ ಕೆಲಸ ಮಾಡುತ್ತೇನೆ ಎನ್ನಲು ಅವರು ಮರೆಯುವುದಿಲ್ಲ.
Comments are closed.