ಮನೋರಂಜನೆ

50 ದಿನ ಪೂರೈಸಿದ ಶಿವಯೋಗಿ ಪುಟ್ಟಯ್ಯಜ್ಜ

Pinterest LinkedIn Tumblr

shivaಕನ್ನಡದ ಅನೇಕ ಕಮರ್ಷಿಯಲ್‌ ಚಿತ್ರಗಳು 50 ದಿನ ಪೂರೈಸುವುದೇ ಹರಸಾಹಸವಾಗಿರುವ ಈ ದಿನಗಳಲ್ಲಿ, ಹೀಗೊಂದು ಕಲಾತ್ಮಕ ಚಿತ್ರ ಯಶಸ್ವಿ 50 ದಿನಗಳನ್ನು ಪೂರೈಸಿದೆ. ಹಂಸವಿಜೇತ ಅವರ ನಿರ್ದೇಶನದ “ಶಿವಯೋಗಿ ಪುಟ್ಟಯ್ಯಜ್ಜ’ ಈಗ ಉತ್ತರ ಕರ್ನಾಟಕ ಭಾಗದಲ್ಲಿ ಯಶಸ್ವಿ 50 ದಿನಗಳನ್ನು ಪೂರೈಸಿ ಮುನ್ನಡೆಯುತ್ತಿದೆ. ಇದು ಸಂಗೀತ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದ ಸಂಗೀತ ಗಾರುಡಿಗ, ಗಾನಯೋಗಿ ಪಂಚಾಕ್ಷರ ಗವಾಯಿಗಳ ಶಿಷ್ಯ, ಕವಿ ಪುಟ್ಟರಾಜ ಗವಾಯಿಗಳ ಜೀವನ ಚರಿತ್ರೆ ಆಧರಿಸಿ ನಿರ್ಮಾಣಗೊಂಡ ಚಿತ್ರ. ಸದ್ಯಕ್ಕೆ ಉತ್ತರ ಕರ್ನಾಟಕದಲ್ಲೀಗ “ಶಿವಯೋಗಿ ಪುಟ್ಟಯ್ಯಜ್ಜ’ ಚಿತ್ರಕ್ಕೆ ಸಾಕಷ್ಟು ಒಳ್ಳೆಯ ಪ್ರತಿಕ್ರಿಯೆಗಳು ಬಂದಿವೆ.

ಈ ಚಿತ್ರದಲ್ಲಿ ಪಂಚಾಕ್ಷರ ಗವಾಯಿಗಳ ನಂತರ ಅವರ ಆದರ್ಶಗಳನ್ನು ಅನುಸರಿಸಿಕೊಂಡು ಬಂದ ಪುಟ್ಟರಾಜ ಕವಿಗಳ ಜೀವನ, ಸಾಧನೆ ಕುರಿತು ಹೇಳಲಾಗಿದೆ. ಇನ್ನು, ಈ ಚಿತ್ರವನ್ನು ಶ್ಯಾಮ್‌ ಮುಕುಂದ್‌ ನವುಲೆ ಅವರು ನಿರ್ಮಾಣ ಮಾಡಿದ್ದಾರೆ.

ಹಿರಿಯ ಕಲಾವಿದ ಉದಯ್‌ಕುಮಾರ್‌ ಅವರ ಮೊಮ್ಮಗಳು ಹಂಸವಿಜೇತ ಅವರು ನಿರ್ದೇಶನದ ಜವಾಬ್ದಾರಿ ಹೊತ್ತು, ಚಿತ್ರವನ್ನು ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ.

ನೇತ್ರದಾನ
ಗದಗದ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಈ ಚಿತ್ರದ 50ನೇ ದಿನದ ಸಂಭ್ರಮಾಚರಣೆ ನಡೆಯಿತು. ಆ ಸಂದರ್ಭದಲ್ಲಿ ನಿರ್ದೇಶಕಿ ಹಂಸ ವಿಜೇತ ಸೇರಿದಂತೆ ಸುಮಾರು 50 ಜನ ಭಕ್ತರು ನೇತ್ರದಾನ ಮಾಡಿದರು.

ಗದಗದಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಚಿತ್ರದ ನಾಯಕ ವಿಜಯ್‌ ರಾಘವೇಂದ್ರ ಅವರನ್ನು ಮೆರವಣಿಗೆ ಮೂಲಕ ಗದಗಿನ ಕೃಷ್ಣಾ ಚಿತ್ರಮಂದಿರದವರೆಗೆ ಕರೆತರುವ ಮೂಲಕ ಅಭಿಮಾನಿಗಳು ಸಂಭ್ರಮಿಸಿದರು. ಪುಟ್ಟಯ್ಯಜ್ಜ ಅವರಲ್ಲಿದ್ದ ಅಗಾಧ ಸಂಗೀತ ಪ್ರತಿಭೆ ಇಡೀ ಜಗತ್ತಿಗೇ ಬೆಳಕು ನೀಡಿತ್ತು. ಅಂತಹ ಮಹಾನ್‌ ಶಿವಯೋಗಿಯವರ ಪಾತ್ರದಲ್ಲಿ ನಟ ವಿಜಯ್‌ ರಾಘವೇಂದ್ರ ಅವರು ಅದ್ಭುತವಾಗಿ ಅಭಿನಯಿಸಿದ್ದಾರೆ ಎಂಬ ಮೆಚ್ಚುಗೆ ಎಲ್ಲರಿಂದ ವ್ಯಕ್ತವಾಯಿತು.
-ಉದಯವಾಣಿ

Write A Comment