ಮನೋರಂಜನೆ

ಕನ್ನಡದಲ್ಲಿ ರಮೇಶ್‌ ಸೆಂಚುರಿ

Pinterest LinkedIn Tumblr

111ರಮೇಶ್‌ ಅರವಿಂದ್‌ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ, ಅವರ ಮಗಳಾಗಿ ರಚಿತಾ ರಾಮ್‌ ಅಭಿನಯಿಸುತ್ತಿದ್ದಾರೆ, ಅತಿಥಿ ಪಾತ್ರವೊಂದರಲ್ಲಿ ನಟಿಸುವುದಕ್ಕೆ ಜೂಹಿ ಚಾವ್ಲಾ ಬರುತ್ತಿದ್ದಾರೆ … ಮುಂತಾದ ಹಲವು ವಿಷಯಗಳು “ಪುಷ್ಪಕ ವಿಮಾನ’ ಈಗಾಗಲೇ ಹೊರಬಿದ್ದಿವೆ. ಗೊತ್ತಿಲ್ಲದಿರುವ ಇನ್ನೊಂದು ವಿಷಯವಿದೆ. ಅದೇನೆಂದರೆ, “ಪುಷ್ಪಕ ವಿಮಾನ’ ಚಿತ್ರವು ರಮೇಶ್‌ ಅವರ ನೂರನೆಯ ಚಿತ್ರವಾಗಿರುವುದು. ಕಳೆದ 30 ವರ್ಷಗಳಿಂದ ಚಿತ್ರರಂಗದಲ್ಲಿರುವ ರಮೇಶ್‌ ಅರವಿಂದ್‌, ಇನ್ನೂ ನೂರು ಚಿತ್ರಗಳನ್ನು ಪೂರೈಸಿಲ್ಲವಾ ಎಂದು ಸಂಶಯ ಪಡದಿರಿ.

ರಮೇಶ್‌ ನೂರ ಚಿತ್ರಗಳನ್ನು ಪೂರೈಸಿ ಯಾವುದೋ ಕಾಲವಾಗಿದೆ. ಐದು ಭಾಷೆಗಳಲ್ಲಿ ಅವರು ಅಭಿನಯಿಸಿರುವ ಚಿತ್ರಗಳ ಸಂಖ್ಯೆ 140 ದಾಟಿದೆ. ಆದರೆ, ಕನ್ನಡವೊಂದೇ ತೆಗೆದುಕೊಂಡರೆ “ಪುಷ್ಪಕ ವಿಮಾನ’ ಅವರ ನೂರನೆಯ ಚಿತ್ರವಾಗಲಿದೆ. “ನನಗೇ ಈ ವಿಷಯ ಬಹಳಸರ್‌ಪ್ರೈಸ್‌ ಎನಿಸಿತು. ಇತ್ತೀಚೆಗೆ ಯಾವುದೋ ಸಂದರ್ಶನದಲ್ಲಿ ಇದು ನನ್ನ 100ನೇ ಚಿತ್ರ ಎಂದು ಗೊತ್ತಾಯಿತು. ಎಲ್ಲಾ ಭಾಷೆಗಳು ಸೇರಿಸಿದರೆ 140 ಚಿತ್ರಗಳಾಗಬಹುದು. ಬರೀ ಕನ್ನಡವಾದರೆ ನೂರು ಚಿತ್ರಗಳಾಗುತ್ತವೆ. ನೂರನೆಯ ಚಿತ್ರದಲ್ಲಿ ಒಂದು ಅದ್ಭುತವಾದ ಪಾತ್ರ ಸಿಕ್ಕಿದೆ, ಹೊಸಬರ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ’ ಎನ್ನುತ್ತಾರೆ ರಮೇಶ್‌ ಅರವಿಂದ್‌.

ಇದು ಅತ್ಯಂತ ಸಂತೃಪ್ತಿಯ ಕಾಲ ಎನ್ನುತ್ತಾರೆ ರಮೇಶ್‌. “ನಿನ್ನೆಯಷ್ಟೇ ನನ್ನ ನಿರ್ದೇಶನದ ಹೊಸ ಚಿತ್ರ “ಗಂಡು ಎಂದರೆ ಗಂಡು’ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿಯಿತು. ನಾನು ಚಿತ್ರರಂಗಕ್ಕೆ ಬಂದ ಹೊಸತರಲ್ಲಿ ಇದ್ದ ಉತ್ಸಾಹ, ಸಂತೋಷ ಈಗಲೂ ಇದೆ. ಅದೇ ಸಿನಿಮಾ ಮಹಿಮೆ. ಬರೀ ನಿರ್ದೇಶಕನಾಗಿಯಷ್ಟೇ ಅಲ್ಲ, ನಟನಾಗಿ ಹೊಸ ಹೊಸ ಥ್ರಿಲ್‌ಗ‌ಳು ಸಿಗುತ್ತಿವೆ. ಹೀಗೆ ಕೆಲಸದಲ್ಲಿ ತೃಪ್ತಿಯಿದ್ದಾಗ ನಿಜಕ್ಕೂ ಸಂತೋಷವಾಗುತ್ತದೆ. ನನ್ನ ಇಷ್ಟು ವರ್ಷದ ಕೆರಿಯರ್‌ನಲ್ಲಿ ಅನೇಕ ಒಳ್ಳೆಯ ಚಿತ್ರಗಳು ಸಿಕ್ಕಿವೆ.

ಸಖತ್‌ ಕ್ರಿಯೇಟಿವ್‌ ಆದ ಜನ ಸಿಕ್ಕಿದ್ದಾರೆ. ನಮ್ಮೆಲ್ಲಾ ಐಡಿಯಾಗಳಿಗೆ ಮನ್ನಣೆ ಸಿಗುವ ಜಾಗ ಎಂದರೆ ಸಿನಿಮಾದಲ್ಲೇ’ ಎನ್ನುತ್ತಾರೆ ರಮೇಶ್‌ ಅರವಿಂದ್‌.ಇಷ್ಟು ಚಿತ್ರಗಳಾದ ಮೇಲೆ, ಚಿತ್ರರಂಗದಲ್ಲಿ ಇಷ್ಟು ವರ್ಷಗಳಾದ ನಂತರ, ಹಲವು ವಿಷಯಗಳು ರಮೇಶ್‌ಗೆ ಅರ್ಥವಾಗುತ್ತಿದೆಯಂತೆ. “ಒಂದು ಅವಕಾಶದ ಮಹತ್ವ ಏನು ಎಂದು ಚೆನ್ನಾಗಿ ಅರ್ಥವಾಗಿದೆ. ಅದು ಎಷ್ಟು ಮುಖ್ಯ ಎಂದು ಗೊತ್ತಾಗಿದೆ.

ಹಾಗೆಯೇ ಜನರ ಪ್ರೀತಿ ಅಮೂಲ್ಯ ಎಂಬುದು ಸಹ ಸ್ಪಷವಾಗಿದೆ. ಆಗೆಲ್ಲಾ ಅಷ್ಟು ಅರ್ಥವಾಗುತ್ತಿರಲಿಲ್ಲ. ಒಂದರಹಿಂದೊಂದು ಚಿತ್ರಗಳಿದ್ದವು, ಸತತವಾಗಿ ಕೆಲಸವಿದ್ದೇ ಇತ್ತು. ಈಗ ಒಮ್ಮೆ ಹಿಂದಿರುಗಿ ನೋಡಿದಾಗ, ಈ ಅವಕಾಶ, ಪ್ರೀತಿ ಎಲ್ಲಾ ಎಷ್ಟು ಅಮೂಲ್ಯ ಅನಿಸ್ತಿದೆ. ಈ ನಿಧಿಯನ್ನು ಕಾಪಾಡಿಕೊಂಡು ಹೋಗಬೇಕು ಅಂತಲೂ ನನಗೆಅರ್ಥವಾಯಿತು’ ಎನ್ನುತ್ತಾರೆ ರಮೇಶ್‌.
-ಉದಯವಾಣಿ

Write A Comment