ಮನೋರಂಜನೆ

ಪ್ರೇಮ್‌ ಕಹಾನಿಯಲ್ಲಿ ಕೊಡಗಿನ ಬೆಡಗಿ

Pinterest LinkedIn Tumblr

3ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ ಅಂಗಳಕ್ಕೆ ಜಿಗಿದಿದ್ದ ಕನ್ನಡತಿ ನಿಧಿ ಸುಬ್ಬಯ್ಯ, ಅದಾಗಲೇ ಯೂ ಟರ್ನ್ ತೆಗೆದುಕೊಂಡಿದ್ದಾರೆ. ಬರೋಬ್ಬರಿ ಮೂರ್‍ನಾಲ್ಕು ವರ್ಷ ಬಾಲಿವುಡ್‌ನ‌ಲ್ಲೇ ಇದ್ದ ನಿಧಿ, ಈಗ ಗಾಂಧಿನಗರಕ್ಕೆ ಕಾಲಿಟ್ಟಿದ್ದಾರೆ. ಇದು ಹೊಸ ಸುದ್ದಿಯೇನಲ್ಲ. ಈಗಾಗಲೇ ಅವರು ಬಾಲಿವುಡ್‌ನಿಂದ ಬಂದು ಕನ್ನಡ ಚಿತ್ರವೊಂದರಲ್ಲಿ ನಟಿಸಿದ್ದೂ ಆಗಿದೆ. ಅವರು ಪುನಃ ಇಲ್ಲಿಗೆ ಬಂದದ್ದು “ನನ್ನ ನಿನ್ನ ಪ್ರೇಮ್‌ ಕಹಾನಿ’ ಚಿತ್ರಕ್ಕಾಗಿ. ನಿಧಿ ಈ ಚಿತ್ರದ ನಾಯಕಿ. ಇವರಿಗೆ ವಿಜಯ್‌ ರಾಘವೇಂದ್ರ ಹೀರೋ. ಇಂತಿಪ್ಪ, ಬಾಲಿವುಡ್‌ನ‌ ಗಲ್ಲಿಗಲ್ಲಿಯಲ್ಲಿ ಓಡಾಡಿಕೊಂಡಿದ್ದ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ, ಮತ್ತೆ ಕನ್ನಡಕ್ಕೆ ಮುಖ ಮಾಡಿರುವುದು ಹೊಸ ಬೆಳವಣಿಗೆಯಂತೂ ಹೌದು. ಅದರಲ್ಲೂ ಅವರು, ಪಕ್ಕಾ ಮ್ಯೂಸಿಕಲ್‌ ಲವ್‌ ಸ್ಟೋರಿ ಇರುವ ಚಿತ್ರದ ಮೂಲಕವೇ ಹಿಂದಿರುಗಿದ್ದಾರೆ ಎಂಬುದು ಮತ್ತೂಂದು ವಿಶೇಷ.

ಗಾಂಧಿನಗರದ ಅದೆಷ್ಟೋ ಮಂದಿ, ಇನ್ನೇನು ನಿಧಿ ಸುಬ್ಬಯ್ಯ ಅವರು ಸ್ಯಾಂಡಲ್‌ವುಡ್‌ ಮರೆತೇಬಿಟ್ಟರು ಅಂದುಕೊಂಡಿದ್ದರು. ಕಾರಣ, ನಿಧಿ ಕೂಡ ಬಾಲಿವುಡ್‌ ಅಂಗಳದಲ್ಲಿ ಒಂದಷ್ಟು ಬ್ಯಾಟು ಬೀಸಿದ್ದರು. ಆದರೆ, ಅವರ ಹೊಡೆತಕ್ಕೆ ಬಾಲು ಬೌಂಡರಿಯನ್ನೂ ಮುಟ್ಟಲಿಲ್ಲ. ಬೆರಳೆಣಿಕೆ ಚಿತ್ರದಲ್ಲಿ ನಟಿಸಿದರಾದರೂ, ಅಲ್ಲಿ ಹೇಳಿಕೊಳ್ಳುವಂತಹ ನೆಲೆ ಸಿಗಲಿಲ್ಲ. ಅಲ್ಲೀಗ ಕೈಯಲ್ಲಿದ್ದ ಒಂದೆರೆಡು ಪ್ರಾಜೆಕ್ಟ್ ಮುಗಿಸಿದ್ದಾರೆ. ಮತ್ತೂಂದು ಇನ್ನಿಂಗ್ಸ್‌ ಎಂಬಂತೆ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅವರ ಇನ್ನೊಂದು ಇನ್ನಿಂಗ್ಸ್‌ ನಲ್ಲಿ “ನನ್ನ ನಿನ್ನ ಪ್ರೇಮ್‌ ಕಹಾನಿ’ ಚಿತ್ರದ ಮೂಲಕ ಖಾತೆ ತೆರೆದಿದ್ದಾರೆ ಎಂಬುದು ನೆನಪಿರಲಿ. ಈ ಚಿತ್ರದ ಮೂಲಕವಾದರೂ ನಿಧಿಸುಬ್ಬಯ್ಯ ಇಲ್ಲಿ ಗಟ್ಟಿಯಾಗಿ ನೆಲೆಯೂರುತ್ತಾರಾ ಕಾದು ನೋಡಬೇಕು.

ಅಂದಹಾಗೆ, ವಿಜಯ್‌ ರಾಘವೇಂದ್ರ ಹಾಗೂ ನಿಧಿ ಸುಬ್ಬಯ್ಯ ಕಾಂಬಿನೇಷನ್‌ನ “ನನ್ನ ನಿನ್ನ ಪ್ರೇಮ್‌ ಕಹಾನಿ’ ಚಿತ್ರವನ್ನು ಶಿವು
ಜಮಖಂಡಿ ನಿರ್ದೇಶಿಸುತ್ತಿದ್ದಾರೆ. ಇದುವರೆಗೆ ಗೀತೆಗಳನ್ನು ರಚಿಸುತ್ತಿದ್ದ ಶಿವುಗೆ ಇದು ಚೊಚ್ಚಲ ಚಿತ್ರ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಹಾಗೂ ಸಂಗೀತದ ಜವಾಬ್ದಾರಿ ಕೂಡ ಶಿವು ಅವರದೇ.

ಈಗಾಗಲೇ ಈ ಚಿತ್ರದ ಚಿತ್ರೀಕರಣಮುಗಿದಿದ್ದು ಡಬ್ಬಿಂಗ್ ನಡೆಯುತ್ತಿದೆ. ಬಹುತೇಕ ಉತ್ತರ ಕರ್ನಾಟಕ ಭಾಗದಲ್ಲಿ ಚಿತ್ರೀಕರಣ ನಡೆದಿದೆ. ಇದೊಂದು ಮ್ಯೂಸಿಕಲ್‌ ಲವ್‌ ಸ್ಟೋರಿಯಾಗಿದ್ದು, ಇಲ್ಲಿ ಏಳು ಹಾಡುಗಳಿವೆ. ಆ ಹಾಡುಗಳ ಪೈಕಿ ನಿಧಿ ಸುಬ್ಬಯ್ಯ ಕೂಡ ಒಂದು ಹಾಡನ್ನು ಹಾಡಿದ್ದಾರೆ. ಸದ್ಯಕ್ಕೆ ಆಡಿಯೋ ರಿಲೀಸ್‌ ಪ್ಲಾನಿಂಗ್‌ ನಲ್ಲಿ ಚಿತ್ರತಂಡ ಬಿಜಿಯಾಗಿದೆ.

ಚಿತ್ರದಲ್ಲಿ ತಿಲಕ್‌ ಅವರಿಗೂ ಒಂದು ವಿಶೇಷ ಪಾತ್ರವಿದೆಯಂತೆ. ಅವರಿಲ್ಲಿ ನಿಧಿ ಸುಬ್ಬಯ್ಯ ಅವರ ಅಣ್ಣನಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿಕ್ಕಣ್ಣ, ಗುರುರಾಜ ಹೊಸಕೋಟೆ, ಸಂಗೀತಾ, ಸುಧಾ ಬೆಳವಾಡಿ ಇತರರು ನಟಿಸಿದ್ದಾರೆ.
-ಉದಯವಾಣಿ

Write A Comment