ಮನೋರಂಜನೆ

ಭಾರತದ ಬ್ಯಾಟಿಂಗ್‌ ಅಂದರೆ ಕೊಹ್ಲಿ ಮಾತ್ರವೇ?

Pinterest LinkedIn Tumblr

1_1ಭಾರತ ಟಿ-20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಸೆಮಿಫೈನಲ್‌ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಎಲ್ಲರನ್ನೂ ಕಾಡುವುದು ಇವೇ ಪ್ರಶ್ನೆಗಳು… ವಿರಾಟ್‌ ಕೊಹ್ಲಿ ಒಬ್ಬರೇ ಬ್ಯಾಟ್‌ ಬೀಸುತ್ತ ಇರಬೇಕೇ, ಭಾರತದ ಬ್ಯಾಟಿಂಗ್‌ ಅಂದರೆ ಕೊಹ್ಲಿ ಮಾತ್ರವೇ, ಉಳಿದವರು ಜವಾಬ್ದಾರಿ ಅರಿತು ರನ್‌ ಪೇರಿಸುವುದು ಯಾವಾಗ?

ಮೊಹಾಲಿ ಗೆಲುವಿನ ಬಳಿಕ ಟೀಮ್‌ ಇಂಡಿಯಾ ನಾಯಕ ಮಹೇಂದ್ರ ಸಿಂಗ್‌ ಧೋನಿ ಇದೇ ಅಭಿಪ್ರಾಯವನ್ನು ಹೊರಗೆಡಹಿದ್ದಾರೆ. “ನಾವು ಪ್ರತಿ ಸಲವೂ ವಿರಾಟ್‌ ಕೊಹ್ಲಿ ಮೇಲೆ ಅಷ್ಟೂ ಬ್ಯಾಟಿಂಗ್‌ ಜವಾಬ್ದಾರಿ ಹೊರಿಸಿ ಕೂರುವುದು ಸರಿಯಲ್ಲ. ಉಳಿದವರೂ ಹೊಣೆಯರಿತು ಬ್ಯಾಟಿಂಗ್‌ ಮಾಡಬೇಕು, ರನ್‌ ಗಳಿಸಬೇಕು. ನಾವೀಗ ನಾಕೌಟ್‌ ಹಂತದಲ್ಲಿದ್ದೇವೆ. ಇಲ್ಲಿಂದಾದರೂ ತಂಡದ ಉಳಿದ ಬ್ಯಾಟ್ಸ್‌ಮನ್‌ಗಳು ಹೆಚ್ಚಿನ ಜವಾಬ್ದಾರಿ ವಹಿಸಿ ಉತ್ತಮ ಮೊತ್ತ ಗಳಿಸಲು ಮುಂದಾಗಬೇಕಿದೆ…’ ಎಂದಿದ್ದಾರೆ ಧೋನಿ.

ಕೊಹ್ಲಿಯಿಂದಲೇ ಸೆಮಿಫೈನಲ್‌…

ಅನುಮಾನವೇ ಇಲ್ಲ, ವಿರಾಟ್‌ ಕೊಹ್ಲಿ ಕ್ರೀಸ್‌ ಕಚ್ಚಿಕೊಂಡು ರನ್‌ ಪೇರಿಸದೆ ಹೋಗಿದ್ದರೆ ಭಾರತ ಸೂಪರ್‌-10 ಹಂತದಲ್ಲೇ ಗಂಟುಮೂಟೆ ಕಟ್ಟಬೇಕಿತ್ತು. ನ್ಯೂಜಿಲ್ಯಾಂಡ್‌ ವಿರುದ್ಧ ಅನುಭವಿಸಿದ ಸೋಲಿನ ಬಳಿಕ ಭಾರತವನ್ನು ಗೆಲುವಿನ ಟ್ರ್ಯಾಕ್‌ ಹತ್ತಿಸಿದ್ದೇ ವಿರಾಟ್‌ ಕೊಹ್ಲಿ.

ಅದು ಕೋಲ್ಕತಾದಲ್ಲಿ ನಡೆದ ಪಾಕಿಸ್ಥಾನ ವಿರುದ್ಧ ನಡೆದ 18 ಓವರ್‌ಗಳ ಪಂದ್ಯ. ಅಫ್ರಿದಿ ಪಡೆಯ 118 ರನ್‌ ಮೊತ್ತವನ್ನು ಹಿಂದಿಕ್ಕುವ ವೇಳೆ ಭಾರತ 23ಕ್ಕೆ 3 ವಿಕೆಟ್‌ ಉದುರಿಸಿಕೊಂಡಿತ್ತು. ಅನಂತರ ಕೊಹ್ಲಿ ಏಕಾಂಗಿಯಾಗಿ ಹೋರಾಡಿ ಭಾರತವನ್ನು ದಡ ಸೇರಿಸಿದ್ದನ್ನು ಮರೆಯುವಂತಿಲ್ಲ. ಕೊಹ್ಲಿ ಕೊಡುಗೆ ಅಜೇಯ 55 ರನ್‌. ಅವರಿಗೆ ಯುವರಾಜ್‌ ಉತ್ತಮ ಬೆಂಬಲವಿತ್ತರು.

ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಗಳಿಸಿದ್ದು 24 ರನ್‌. ಇದು ಭಾರತದ ಸರದಿಯ 2ನೇ ಅತ್ಯಧಿಕ ಗಳಿಕೆ. ಆಸ್ಟ್ರೇಲಿಯ ವಿರುದ್ಧವಂತೂ ಕೊಹ್ಲಿ ಅವರದು ಸಾಟಿಯಿಲ್ಲದ ಸಾಹಸ. ಅಂತಿಮ 6 ಓವರ್‌ಗಳಿಂದ 67 ರನ್‌, 5 ಓವರ್‌ಗಳಿಂದ 59 ರನ್‌, 3 ಓವರ್‌ಗಳಿಂದ 39 ರನ್‌ ತೆಗೆಯಬೇಕಾದ ಒತ್ತಡವನ್ನು ಅತ್ಯಂತ ಸಲೀಸಾಗಿ ನಿಭಾಯಿಸಿದ ಕೊಹ್ಲಿ ಬ್ಯಾಟಿಂಗ್‌ ಪರಾಕ್ರಮಕ್ಕೆ ಕ್ರಿಕೆಟ್‌ ಜಗತ್ತೇ ಸಲಾಂ ಹೇಳಿದೆ; ಹೊಗಳಿಕೆಯ ಸುರಿಮಳೆಗೈದಿದೆ.

ಕೊಹ್ಲಿಯದೇ ಅರ್ಧ ಶತಕ

ಲೀಗ್‌ ಹಂತದಲ್ಲಿ ಭಾರತದ ಕಡೆಯಿಂದ ದಾಖಲಾದದ್ದು ಕೇವಲ 2 ಅರ್ಧ ಶತಕ. ಇವೆರಡೂ ಕೊಹ್ಲಿ ಬ್ಯಾಟಿನಿಂದಲೇ, ಅದೂ ಬಲಿಷ್ಠ ತಂಡಗಳಾದ ಪಾಕಿಸ್ಥಾನ ಹಾಗೂ ಆಸ್ಟ್ರೇಲಿಯ ವಿರುದ್ಧ ಚೇಸಿಂಗ್‌ ವೇಳೆಯೇ ದಾಖಲಾದುದನ್ನು ಮರೆಯುವಂತಿಲ್ಲ.

ಭಾರತದ ಸರದಿಯಲ್ಲಿ ಚೇಸಿಂಗ್‌ ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸಬಲ್ಲ ಅಗಾಧ ಶಕ್ತಿ ಇರುವುದು ಕೊಹ್ಲಿಗೆ ಮಾತ್ರ ಎಂಬುದು ಇದರಿಂದ ಸಾಬೀತಾಗಿದೆ. ಇಲ್ಲಿ ಯುವರಾಜ್‌ ಸಿಂಗ್‌, ಧೋನಿ ಅವರ “ಸಪೋರ್ಟಿಂಗ್‌ ರೋಲ್‌’ ಅನ್ನು ಮರೆಯುವಂತಿಲ್ಲ.

ಈ ಮೂವರಿಗೇನಾಗಿದೆ?

ತವರಿನಲ್ಲೇ ನಡೆಯುತ್ತಿರುವ ಇಂಥದೊಂದು ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಅಗ್ರ ಕ್ರಮಾಂಕದ ಪ್ರಮುಖ ಮೂವರು ಬ್ಯಾಟ್ಸ್‌ಮನ್‌ಗಳಾದ ರೋಹಿತ್‌ ಶರ್ಮ, ಶಿಖರ್‌ ಧವನ್‌ ಮತ್ತು ಸುರೇಶ್‌ ರೈನಾ ತಂಡದ ಭರ್ತಿಗೆಂಬಂತೆ ಇರುವುದು ಭಾರತದ ದುರಂತ. ಈ ಮೂವರಿಂದ ಒಂದೇ ಒಂದು ಅರ್ಧ ಶತಕ ದಾಖಲಾಗುವುದಿರಲಿ, ಈ 4 ಪಂದ್ಯಗಳಲ್ಲಿ ಇವರ ಒಟ್ಟು ಮೊತ್ತ ಕೂಡ ಐವತ್ತಾಗಿಲ್ಲ!

ಹಾಗಾದರೆ ಬ್ಯಾಟಿಂಗ್‌ ಲೈನ್‌ಅಪ್‌ನಲ್ಲಿ ಸ್ವಲ್ಪ ಮಟ್ಟಿಗಾದರೂ ಬದಲಾವಣೆ ಮಾಡಿ, ಯಾವ ಕ್ರಮಾಂಕಕ್ಕೂ ಸಲ್ಲುವ ಅಜಿಂಕ್ಯ ರಹಾನೆಗೆ ಅವಕಾಶ ಕೊಡಬಹುದಲ್ಲ? ಊಹೂಂ… ಧೋನಿ ತಂಡದ ಬದಲಾವಣೆ ಬಗ್ಗೆ ಯೋಚನೆಯನ್ನೇ ಮಾಡುತ್ತಿಲ್ಲ. ಕೇಳಿದರೆ, ಈ ತಂಡವನ್ನು ಕಟ್ಟಿಕೊಂಡು ಭಾರತಕ್ಕೆ ಗೆಲುವು ತಂದುಕೊಡುತ್ತಿಲ್ಲವೇ ಎಂದು ಬಾಯಿ ಮುಚ್ಚಿಸಬಹುದು. ಇದೂ ನಿಜವೇ!

ಆದರೆ ಫಾರ್ಮ್ನಲ್ಲಿಲ್ಲದ ಆಟಗಾರರ ತಂಡವನ್ನೇ ನೆಚ್ಚಿಕೊಂಡು, ಕೊಹ್ಲಿ ಒಬ್ಬರನ್ನೇ ನಂಬಿಕೊಂಡು ಎಷ್ಟು ದಿನ ಇಂಥ ಗ್ಯಾಂಬ್ಲಿಂಗ್‌ ನಡೆಸಬಹುದು ಎಂಬುದೊಂದು ಪ್ರಶ್ನೆ. ಅಕಸ್ಮಾತ್‌ ನಾಕೌಟ್‌ನಲ್ಲಿ ಕೊಹ್ಲಿ ವಿಫ‌ಲರಾರೆ ಆಗ ಭಾರತದ ಅವಸ್ಥೆಯನ್ನೊಮ್ಮೆ ಕಲ್ಪಿಸಿಕೊಳ್ಳಿ!

ಭಾರತ ಇನ್ನೆರಡು ಮೆಟ್ಟಿಲೇರಿದರೆ 2ನೇ ಸಲ ಟಿ-20 ವಿಶ್ವಕಪ್‌ ಗೆದ್ದ ಮೊದಲ ತಂಡ ಎಂದು ಇತಿಹಾಸ ನಿರ್ಮಿಸಬಹುದು. ಆದರೆ ನಾಕೌಟ್‌ ಸವಾಲಿನ ತೀವ್ರತೆಯೇ ಬೇರೆ. ಹೇಳಿ ಕೇಳಿ, ಭಾರತಕ್ಕೆ ಸೆಮಿಯಲ್ಲಿ ಎದುರಾಗಿರುವ ವಾಂಖೇಡೆ ಟ್ರ್ಯಾಕ್‌ ಧಾರಾಳ ರನ್ನಿಗೆ ಹೆಸರುವಾಸಿ. ಇಲ್ಲಿಂದ ಮುಂದುವರಿದರೆ ಎದುರಾಗುವ ಈಡನ್‌ ಅಂಗಳದಲ್ಲೂ ಧಾರಾಳ ರನ್‌ ಹರಿದುಬರಲಿದೆ. ಇಲ್ಲಿಯೂ ಕೊಹ್ಲಿ-ಯುವರಾಜ್‌ ಜೋಡಿಯಿಂದ ಭಾರತದ ಬ್ಯಾಟಿಂಗ್‌ ಹೋರಾಟ ಆರಂಭಗೊಳ್ಳುವಂತಾದರೆ ಆತಿಥೇಯ ತಂಡಕ್ಕದು ಶೋಭೆ ಅಲ್ಲ!

-ಎಚ್‌. ಪ್ರೇಮಾನಂದ ಕಾಮತ್‌
-ಉದಯವಾಣಿ

Write A Comment