ಮನೋರಂಜನೆ

ಬದುಕಿಗೆ ಕೊನೆ ಎಂಬುದಿಲ್ಲ; ಅದಕ್ಕಿರುವುದು ಆರಂಭ ಮಾತ್ರ : ಕೊಹ್ಲಿ

Pinterest LinkedIn Tumblr

Kohli-700ಹೊಸದಿಲ್ಲಿ : ಯಾವತ್ತೂ ಜೀವನದಲ್ಲಿ ಭರವಸೆಯನ್ನು ಕಳೆದುಕೊಳ್ಳಬೇಡಿ; ಬದುಕು ಎಂದೂ ಕೊನೆಗೊಳ್ಳುವುದಿಲ್ಲ; ಅದು ಕಾಣುವುದು ಆರಂಭವನ್ನು ಮಾತ್ರ !

ಇದು ಭಾರತೀಯ ಕ್ರಿಕೆಟ್‌ ಪ್ರೇಮಿಗಳಿಗೆ ಮತ್ತು ತಮ್ಮ ಅಸಂಖ್ಯಾತ ಅಭಿಮಾನಿಗಳಿಗೆ ಅಪ್ರತಿಮ ಶೌರ್ಯದ ಯುವ ಕ್ರಿಕೆಟಿಗ ವಿರಾಟ್‌ ಕೊಹ್ಲಿ ನೀಡಿರುವ ಸಂದೇಶ. ಸೋಲು ಬಂತೆಂದು ಧೃತಿಗೆಡಬೇಡಿ ಎಂಬ ಸಾಂತ್ವನ ಕೊಹ್ಲಿ ಸಂದೇಶದ ಸಾರ.

ನಿನ್ನೆ ಗುರುವಾರ ಪರಾಜಿತ ಭಾರತ ತಂಡದ ಓರ್ವ ಸದಸ್ಯನಾಗಿರುವ ಅರ್ಹತೆ ಇಲ್ಲದಿರುವ ಒಬ್ಬನೇ ಒಬ್ಬ ವ್ಯಕ್ತಿ ಎಂದರೆ ವಿರಾಟ್‌ ಕೊಹ್ಲಿ !

ಪ್ರಾಯಶಃ ವೆಸ್ಟ್‌ ಇಂಡೀಸ್‌ ಎದುರಿನ ಸೋಲಿನಿಂದ ಗರಿಷ್ಠ ನೋವು ಅನುಭವಿಸಿರುವ ವ್ಯಕ್ತಿ ಎಂದರೂ ಅದು ವಿರಾಟ್‌ ಕೊಹ್ಲಿಯೇ !

ವೆಸ್ಟ್‌ ಇಂಡೀಸ್‌ ಎದುರಿನ ನಿನ್ನೆಯ ಎರಡನೇ ಸೆಮಿ ಫೈನಲ್‌ ಪಂದ್ಯದಲ್ಲಿ 47 ಎಸೆತಗಳಲ್ಲಿ 83 ರನ್‌ ಬಾರಿಸಿ ಅಜೇಯರಾಗಿ ಉಳಿದ ಕೊಹ್ಲಿ 11 ಬೌಂಡರಿ ಮತ್ತು ಒಂದು ಸಿಕ್ಸರ್‌ ಬಾರಿಸಿದ್ದರು. ಅವರ ಸ್ಟ್ರೈಕ್‌ ರೇಟ್‌ ಅತ್ಯದ್ಭುತ 189.36 ಆಗಿತ್ತು !

ಗ್ರೂಪ್‌ 2ರ ಪಂದ್ಯಗಳಲ್ಲಿ ಪಾಕಿಸ್ಥಾನ ಮತ್ತು ಆಸ್ಟ್ರೇಲಿಯದ ಎದುರಿನ ಆತಂಕಕಾರಿ ಸನ್ನಿವೇಶದಲ್ಲಿ ಭಾರತಕ್ಕೆ ಜಯ ದೊರಕಿಸಿಕೊಟ್ಟವರೇ ವಿರಾಟ್‌ ಕೊಹ್ಲಿ ಎನ್ನುವುದನ್ನು ಯಾರೂ ಮರೆಯುವಂತಿಲ್ಲ.

ವೆಸ್ಟ್‌ ಇಂಡೀಸ್‌ ಎದುರು ಸೋತ ಭಾರತ ಈ ಬಾರಿಯ ಟಿ-20 ವಿಶ್ವಕಪ್‌ ಕೂಟದಿಂದ, ಭಾರವಾದ ಹೃದಯದಿಂದ, ಹೊರಬಿದ್ದಿದೆ. ಕೊಹ್ಲಿಗೆ ಈ ಸೋಲಿನಿಂದಾಗಿರುವ ನೋವು ಶಬ್ದಗಳಲ್ಲಿ ಹೇಳಲಾರದ್ದು ಆಗಿರಬಹುದು. ಆದರೂ ಕೊಹ್ಲಿ ತಮ್ಮ ಅಭಿಮಾನಿಗಳಿಗೆ, ಬೆಂಬಲಿಗರಿಗೆ ಒಂದು ಅತ್ಯಮೂಲ್ಯವಾದ ಸಂದೇಶವನ್ನು ವಿಡಿಯೋ ಸಹಿತವಾಗಿ ಕೊಟ್ಟಿದ್ದಾರೆ.

ಕೊಹ್ಲಿ ತಮ್ಮ ಸಂದೇಶದಲ್ಲಿ ಹೀಗೆ ಹೇಳುತ್ತಾರೆ : ಯಾವತ್ತೂ ಜೀವನದಲ್ಲಿ ಭರವಸೆಯನ್ನು ಕಳೆದುಕೊಳ್ಳಬೇಡಿ; ಬದುಕು ಎಂದೂ ಕೊನೆಗೊಳ್ಳುವುದಿಲ್ಲ; ಅದು ಕಾಣುವುದು ಆರಂಭವನ್ನು ಮಾತ್ರ !

ಈ ಸಂದೇಶಕ್ಕೆ ಪೂರಕವಾಗಿ ಮತ್ತು ಎಲ್ಲರಲ್ಲೂ ಹೊಸ ಭರವಸೆಯ ಆಶಾ ಕಿರಣವನ್ನು ಮೂಡಿಸುವ ಸಲುವಾಗಿ ಕೊಹ್ಲಿ, ಕಾಶ್ಮೀರದ ಆಮಿರ್‌ ಹುಸೇನ್‌ ಲೋನ್‌ ಎಂಬ, ಎರಡೂ ಕೈಗಳಿಲ್ಲದ, ಅಪ್ರತಿಮ ಕ್ರಿಕೆಟ್‌ ಪ್ರೇಮಿ ಮತ್ತು ಆಟಗಾರನ ವಿಡಿಯೋ ಚಿತ್ರಿಕೆಯನ್ನು ನೀಡಿದ್ದಾರೆ. ನೀವೂ ಇದನ್ನು ನೋಡಿ, ಕೊಹ್ಲಿ ಕೊಟ್ಟಿರುವ ಜೀವನ ಸಂದೇಶವನ್ನು ಅನುಸರಿಸಲು ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿ !
-ಉದಯವಾಣಿ

Write A Comment