ಮನೋರಂಜನೆ

ರಿಯೊ ಒಲಿಂಪಿಕ್ಸ್‌ಗೆ ಬಾಕ್ಸರ್ ಶಿವಥಾಪಾ ಅರ್ಹತೆ: ಸ್ಟಾರ್ ಬಾಕ್ಸರ್ ಮೇರಿ ಕೋಮ್‌ಗೆ ಹಿನ್ನಡೆ

Pinterest LinkedIn Tumblr

Shiv-Thapaಕಿಯಾನಾನ್‌, ಚೀನಾ (ಪಿಟಿಐ): ಭಾರತದ ಬಾಕ್ಸರ್‌ ಶಿವಥಾಪಾ ಅವರು ಮುಂಬರುವ ರಿಯೊ ಒಲಿಂಪಿಕ್ಸ್‌ಗೆ ಗುರುವಾರ ಅರ್ಹತೆ ಪಡೆದಿದ್ದಾರೆ. ಆದರೆ, ಸ್ಟಾರ್‌ ಬಾಕ್ಸರ್ ಮೇರಿ ಕೋಮ್‌ ಅವರು ನಿರಾಸೆ ಅನುಭವಿಸಿದ್ದಾರೆ.
ಇಲ್ಲಿ ನಡೆಯುತ್ತಿರುವ ಏಷ್ಯನ್ ಅರ್ಹತಾ ಟೂರ್ನಿಯ 56 ಕೆ.ಜಿ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದರು. ಈ ಮೂಲಕ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಏಕೈಕ ಬಾಕ್ಸರ್‌ ಎನಿಸಿದರು.
ವಿಶ್ವಚಾಂಪಿಯನ್‌ಷಿಪ್‌ ಕಂಚಿನ ಪದಕ ವಿಜೇತ ಶಿವಥಾಪಾ ಸೆಮಿಫೈನಲ್‌ ಸುತ್ತಿನಲ್ಲಿ ಕಜಕಸ್ತಾನದ ಕೈರತ್ ಯೆರಾಲಿಯೇವ್ ಅವರನ್ನು ಪರಾಭವಗೊಳಿಸಿದರು.
22 ವರ್ಷದ ಶಿವಥಾಪಾ ಅವರಿಗೆ ಇದು ಎರಡನೇ ಒಲಿಂಪಿಕ್ಸ್‌. ನಾಲ್ಕು ವರ್ಷಗಳ ಹಿಂದಿನ ಲಂಡನ್ ಒಲಿಂಪಿಕ್ಸ್‌ನಲ್ಲಿ ಅವರು ಮೊದಲ ಬಾರಿಗೆ ಸ್ಪರ್ಧಿಸಿದ್ದರು. ಆಗ ಅವರು ಅತಿ ಕಿರಿಯ ವಯಸ್ಸಿನ ಬಾಕ್ಸರ್ ಎನಿಸಿದ್ದರು.
‘ಈ ಸಾಧನೆ ಮಾಡಲು ಸಾಧ್ಯವಾಗಿದ್ದಕ್ಕೆ ದೇವರಿಗೆ ಧನ್ಯವಾದ ಹೇಳುವೆ. ಈ ಹೋರಾಟಕ್ಕೆ ಸಾಕಷ್ಟು ಶ್ರಮಿಸಿದ್ದೆ. ಈ ಹಣಾಹಣಿ ನನಗೆ ಪ್ರಮುಖವಾಗಿತ್ತು’ ಎಂದು ಅವರು ಸ್ಪರ್ಧೆಯ ಬಳಿಕ ಪ್ರತಿಕ್ರಿಯಿಸಿದ್ದಾರೆ.
ಕೋಮ್‌ಗೆ ಹಿನ್ನಡೆ: ಆದರೆ, ಭಾರತದ ಸ್ಟಾರ್ ಮಹಿಳಾ ಸ್ಪರ್ಧಿ ಮೇರಿ ಕೋಮ್ ಅವರು ಈ ಟೂರ್ನಿಯಲ್ಲಿ‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಅವಕಾಶ ಕೈಚೆಲ್ಲಿದ್ದಾರೆ.
ಮಹಿಳಾ 51ಕೆ.ಜಿ ವಿಭಾಗದ ಸೆಮಿಫೈನಲ್‌ ಸುತ್ತಿನಲ್ಲಿ ಕೋಮ್‌ ಅವರು, ಚೀನಾದ ರೆನ್‌ ಕ್ಯಾನ್ಕ್ಯಾನ್‌ ವಿರುದ್ಧ ಸೋಲುಂಡರು.
ಈ ಸೋಲಿನಿಂದ ಕೋಮ್ ಅವರಿಗೆ ಈ ಟೂರ್ನಿಯಲ್ಲಿ ಕಂಚು ದೊರೆಯಲಿದೆ. ಆದರೆ, ಒಲಿಂಪಿಕ್ಸ್‌ಗೆ ಅವಕಾಶ ಸಿಗುವುದಿಲ್ಲ. ಏಕೆಂದರೆ, ಈ ಟೂರ್ನಿಯಲ್ಲಿ ಚಿನ್ನ ಹಾಗೂ ಬೆಳ್ಳಿ ಗೆಲ್ಲುವ ಸ್ಪರ್ಧಿಗಳು ಮಾತ್ರ ಒಲಿಂಪಿಕ್ಸ್‌ಗೆ ಅರ್ಹತೆ ‍ಪಡೆಯುತ್ತಾರೆ.
ಕೊನೆಯ ಅವಕಾಶ ಇದೆ: ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಮೇರಿ ಕೋಮ್‌ ಅವರಿಗೆ ಇನ್ನೂ ಒಂದು ಅವಕಾಶ ಇದೆ.
ಮುಂಬರುವ ಮೇ ತಿಂಗಳಲ್ಲಿ ನಡೆಯುವ ವಿಶ್ವಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಅಥವಾ ಬೆಳ್ಳಿ ಗೆದ್ದರೆ ಒಲಿಂಪಿಕ್ಸ್‌ಗೆ ಅರ್ಹತೆ ದೊರೆಯಲಿದೆ.
ಕೋಮ್ ಅವರು ಐದು ಬಾರಿ ವಿಶ್ವಚಾಂಪಿಯನ್‌ ಎನಿಸಿಕೊಂಡಿದ್ದರಿಂದ ಇನ್ನೂ ಭರವಸೆ ಉಳಿದಿದೆ.

Write A Comment