ಪ್ಲಾಸ್ಟಿಕ್ ಬಳಕೆ ಅಪಾಯ, ಮಣ್ಣಿನ ಸಂರಕ್ಷಣೆ, ಪರಿಸರ ಕಾಳಜಿಯಂಥ ವಿಷಯಗಳ ಜತೆಗೆ ತ್ರಿಕೋನ ಪ್ರೇಮಕಥೆಯನ್ನು ಬೆರೆಸಿದ ಚಿತ್ರ ‘ಪ್ರಕೃತಿಯ ಮಡಿಲು ಬನವಾಸಿ’.
‘ಪ್ರಧಾನವಾಗಿ ಇದೊಂದು ಪ್ರಕೃತಿ ಕಾಳಜಿ ಕುರಿತಾದ ಚಿತ್ರ’ ಎನ್ನುತ್ತಾರೆ ನಿರ್ದೇಶಕ ಧೀರಜ್ ಸೂರ್ಯ. ಜಗತ್ತನ್ನು ಕಾಡುತ್ತಿರುವ ಹವಾಮಾನ ಬದಲಾವಣೆಯು ವಿಕೋಪಕ್ಕೆ ತಿರುಗಿದಾಗ ಏನೆಲ್ಲ ದುಷ್ಪರಿಣಾಮ ಆಗುತ್ತದೆ ಎಂಬುದನ್ನು ಪಾತ್ರಗಳ ಮೂಲಕ ಅವರು ವಿವರಿಸಿದ್ದಾರೆ. ಪ್ಲಾಸ್ಟಿಕ್ ಬಳಕೆ ಆರೋಗ್ಯಕ್ಕೆ ಹಾನಿಕರ, ಆರ್ಯುವೇದದಿಂದ ಆರೋಗ್ಯ ಸಂರಕ್ಷಣೆ, ಮಣ್ಣಿನ ಸಂರಕ್ಷಣೆಯಿಂದ ಆಗುವ ಪ್ರಯೋಜನದ ಸಂದೇಶಗಳೂ ಇದರಲ್ಲಿವೆಯಂತೆ. ‘ಹಾಗೆಂದು ಇಲ್ಲಿ ಮನರಂಜನೆಗೆ ಕೊರತೆಯೇನೂ ಇಲ್ಲ. ಬನವಾಸಿಯನ್ನು ಸಾಂಕೇತಿಕವಾಗಿ ಇಟ್ಟುಕೊಂಡು ಬುಡಕಟ್ಟು ಸಮುದಾಯದ ಬಾಂಧವ್ಯ, ದ್ವೇಷ ಮತ್ತು ತ್ರಿಕೋನ ಪ್ರೇಮ ಕತೆಯನ್ನು ಅಳವಡಿಸಿದ್ದೇವೆ’ ಎಂದು ಧೀರಜ್ ವಿವರಿಸುತ್ತಾರೆ.
ಲೋಕೇಶ್ ಬರ್ಗಾ ನಾಯಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ‘ಸಿನಿಮಾದಲ್ಲಿ ಕಥೆಗೆ ಪೂರಕವಾಗಿ ಮೂರು ಫೈಟ್‌ಗಳು ಇವೆ. ಸೋಲಿಗ ಸಮುದಾಯದ ರೀತಿರಿವಾಜು ತೋರಿಸಲಾಗಿದೆ. ಧನಶೀಲನ್ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದಾರೆ’ ಎಂದು ಲೋಕೇಶ್ ಮಾಹಿತಿ ನೀಡಿದರು. ಇವರಿಗೆ ಜತೆಯಾಗಿ ನಾಯಕಿಯಾಗಿ ಸನಾತನಿ ಇದ್ದಾರೆ. ಹಿರಿಯ ಕಲಾವಿದ ರಮೇಶ ಭಟ್ ಅವರು ಬುಡಕಟ್ಟು ಸಮುದಾಯದ ಮುಖಂಡ ಮಾದಜ್ಜನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಳ್ಳಿ ಮುಖ್ಯಸ್ಥನಾಗಿ ಡಿಂಗ್ರಿ ನಾಗರಾಜ್ ಇದ್ದಾರೆ. ಹೊನ್ನವಳ್ಳಿ ಕೃಷ್ಣ, ಸಿದ್ಧರಾಜ ಕಲ್ಯಾಣಕರ್ ಅವರಿಗೂ ಪ್ರಮುಖ ಪಾತ್ರವಿದೆ.
ನಿವೃತ್ತ ಮುಖ್ಯಶಿಕ್ಷಕ ರಾಮಪ್ಪ ಅವರು ಮಗ ಲೋಕೇಶ್ ನಾಯಕನಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿ ಎಂಬ ಆಸೆಯಿಂದ ಸಿನಿಮಾಕ್ಕೆ ಹಣ ಹಾಕಿದ್ದಾರೆ. ಬೆಂಗಳೂರು, ಶಿರಸಿ, ಶಿವಪುರ, ಧರ್ಮಸ್ಥಳ ಸಮೀಪದ ದೇವರಮನೆಯಲ್ಲಿ 35 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಸಿನಿಮಾಕ್ಕೆ ಸೆನ್ಸಾರ್ ಮಂಡಳಿಯು ‘ಯು’ ಪ್ರಮಾಣ ಪತ್ರ ನೀಡಿದೆ. ಎಲ್ಲವೂ ಸರಿಯಾಗಿ ಹೊಂದಿಕೆಯಾದರೆ, ಫೆ. 12ರಂದು ‘ಬನವಾಸಿ’ ತೆರೆ ಕಾಣಿಲಿದೆ.