ಮನೋರಂಜನೆ

ಶಾರುಖ್ ಮುಸ್ಲಿಂ ಎಂಬ ಕಾರಣಕ್ಕೆ ಅವನನ್ನು ಟಾರ್ಗೆಟ್ ಮಾಡಬೇಡಿ: ಶಿವಸೇನೆ

Pinterest LinkedIn Tumblr

Shahrukh-Khan_1ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಓರ್ವ ಮುಸ್ಲಿಂ ಎಂಬ ಕಾರಣಕ್ಕೆ ಅವನನ್ನು ಟಾರ್ಗೆಟ್ ಮಾಡಬೇಡಿ ಎಂದು ಹೇಳುವ ಮೂಲಕ ಶಿವಸೇನೆ ಶಾರುಖ್ ಖಾನ್ ಬೆಂಬಲಕ್ಕೆ ನಿಂತಿದೆ.

ಈ ದೇಶದಲ್ಲಿ ಸಹಿಷ್ಣುತೆ ಇದೆ ಮತ್ತು ಮುಸ್ಲಿಮರು ಕೂಡಾ ಸಹಿಷ್ಣುತೆಯಿಂದ ಬಾಳುತ್ತಿದ್ದಾರೆ. ಶಾರುಖ್ ಮುಸ್ಲಿಂ ಎಂಬ ಕಾರಣಕ್ಕೆ ಅವರನ್ನು ಟಾರ್ಗೆಟ್ ಮಾಡಬೇಡಿ ಎಂದು ಶಿವಸೇನಾ ಸಂಸದ ಸಂಜಯ್ ರೌತ್ ಹೇಳಿದ್ದಾರೆ.

ಶಾರುಖ್‌ನರ ಮನಸ್ಸು ಪಾಕಿಸ್ತಾನದಲ್ಲಿದ್ದು, ಅವರ ದೇಹ ಮಾತ್ರ ಭಾರತದಲ್ಲಿದೆ ಎಂದು ಬಿಜೆಪಿ ನಾಯಕ ಕೈಲಾಶ್ ವಿಜಯ್ ವರ್ಗೀಯಾ ಮಂಗಳವಾರ ಟ್ವೀಟ್ ಮಾಡಿದ್ದು ವಿವಾದಕ್ಕೀಡಾಗಿತ್ತು.

ಅದರ ಬೆನ್ನಲ್ಲೇ ಇವತ್ತು  ಬಿಜೆಪಿ ಸಂಸದ ಯೋಗಿ ಆದಿತ್ಯ ನಾಥ್ ಅವರು ಶಾರುಖ್ ಖಾನ್ ರನ್ನು ಪಾಕಿಸ್ತಾನದ ಉಗ್ರ ಹಫೀಜ್ ಸಯೀದ್‌ಗೆ ಹೋಲಿಸಿದ್ದು ವಿವಾದಗಳಿಗೆ ಇನ್ನಷ್ಟು ಕಿಡಿಯಿಟ್ಟಂತಾಗಿತ್ತು.

ಎರಡು ದಿನಗಳ ಹಿಂದೆಯಷ್ಟೇ ತಮ್ಮ 50 ನೇ ಹುಟ್ಟುಹಬ್ಬ ಆಚರಿಸಿಕೊಂಡ ಶಾರುಖ್ ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳಿದ್ದರು. ಈ ಹೇಳಿಕೆಗೆ ಬಿಜೆಪಿ ವಲಯದಿಂದ ಭಾರೀ ಟೀಕೆಗಳು ವ್ಯಕ್ತವಾಗಿದ್ದವು.

ವಿಜಯ್ ವರ್ಗೀಯಾ ಅವರನ್ನು ತರಾಟೆಗೆ ತೆಗೆದುಕೊಂಡ ರೌತ್, ಸಹಿಷ್ಣುತೆಯ ವಿಷಯ ಚರ್ಚಿಸಲ್ಪಡುವಾಗ ಅಲ್ಲಿ ಪಾಕಿಸ್ತಾನವನ್ನು ಎಳೆದು ತರಬೇಡಿ. ಅದೆಲ್ಲವೂ ಭಾರತದ ಆಂತರಿಕ ವಿಷಯಗಳು. ದೇಶದಲ್ಲಿ ಸಹಿಷ್ಣುತೆ ಇರುವ ಕಾರಣವೇ ಶಾರುಖ್ ಸೂಪರ್ ಸ್ಟಾರ್ ಆಗಿದ್ದಾರೆ. ಅವರು ಧರ್ಮದ ಬಗ್ಗೆ ಎಲ್ಲಿಯೂ ಮಾತಾಡಲಿಲ್ಲ ಎಂದು ಶಿವಸೇನೆಯ ನಾಯಕ ಹೇಳಿದ್ದಾರೆ.

Write A Comment