ಮನೋರಂಜನೆ

ಬಹುಜನ ಪ್ರಿಯೆ…

Pinterest LinkedIn Tumblr

hariನಟಿ ಹರಿಪ್ರಿಯಾ ಅವರ ಮಹತ್ವಾಕಾಂಕ್ಷೆಯ ಪಾತ್ರ ‘ರಿಕ್ಕಿ’ ಚಿತ್ರದ್ದು. ಈ ಚಿತ್ರದಲ್ಲಿ ಅವರ ನಟನೆಗೆ ರಾಜ್ಯಪ್ರಶಸ್ತಿ ದೊರೆಯುವ ನಿರೀಕ್ಷೆ ಚಿತ್ರತಂಡದ್ದು.

‘ಈ ಚಿತ್ರದ ನಟನೆಗಾಗಿ ಹರಿಪ್ರಿಯಾ ಅವರಿಗೆ ರಾಜ್ಯ ಪ್ರಶಸ್ತಿ ಖಂಡಿತಾ ಸಿಗುತ್ತದೆ. ಸಿಗಲಿಲ್ಲ ಅಂದ್ರೆ ನಾನೇ ಮೊದಲು ಧರಣಿ ಮಾಡುತ್ತೇನೆ’ – ಹೀಗೆ ಸಹ ನಟ ಪ್ರಮೋದ್ ಹೇಳುವಾಗ ಹರಿಪ್ರಿಯಾ ತುಟಿಯಂಚಿನಲ್ಲಿ ನಗು ತುಳುಕಿಸಿದರು. ನಾಯಕ ನಟ ರಕ್ಷಿತ್ ಶೆಟ್ಟಿ ಕೂಡ ‘ಹರಿಪ್ರಿಯಾಗೆ ಖಂಡಿತ ಪ್ರಶಸ್ತಿ ಸಿಕ್ಕುತ್ತದೆ’ ಎಂದರು. ನಿರ್ಮಾಪಕ ಎಸ್‌.ವಿ.ಬಾಬು, ಮಂಜುನಾಥ ಗೌಡ, ಮತ್ತಿತರರು ಕೂಡ ಹರಿಪ್ರಿಯಾ ಅವರ ನಟನೆಗೆ ಪೂರ್ಣ ಅಂಕ ನೀಡಿದರು. ಅಲ್ಲಿಗೆ, ‘ರಿಕ್ಕಿ’ ಚಿತ್ರದ ವಿಶೇಷಗಳಲ್ಲಿ ಹರಿಪ್ರಿಯಾ ಅವರ ನಟನೆಯೂ ಒಂದು ಎನ್ನುವಂತಾಯಿತು.

ಅದು ರಿಷಭ್ ಶೆಟ್ಟಿ ನಿರ್ದೇಶನದ ‘ರಿಕ್ಕಿ’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ. ‘ಈ ಚಿತ್ರದಲ್ಲಿ ತಾಂತ್ರಿಕವಾಗಿ ಉತ್ತಮ ದೃಶ್ಯಗಳಿವೆ’ ಎಂದರು ಟ್ರೇಲರ್ ಬಿಡುಗಡೆ ಮಾಡಿದ ಪುನೀತ್ ರಾಜ್‌ಕುಮಾರ್. ಈ ಹಿಂದೆ ರಕ್ಷಿತ್‌ ಶೆಟ್ಟಿ ಅಭಿನಯದ ‘ಉಳಿದವರು ಕಂಡಂತೆ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು ಕೂಡ ಪುನೀತ್‌ ಅವರೇ. ಕನ್ನಡದಲ್ಲಿ ಹೊಸ ಪ್ರಯೋಗದ ಚಿತ್ರಗಳಿಗೆ ಹಾಗೂ ಯುವ ಮನಸ್ಸುಗಳ ಆಸಕ್ತಿಗೆ ಬೆಂಬಲ ಸೂಚಿಸುವುದಾಗಿ ಅವರು ಹೇಳಿದರು.

ಚಿತ್ರದಲ್ಲಿ ಹರಿಪ್ರಿಯಾ ಎರಡು ಆಯಾಮಗಳ ಪಾತ್ರಗಳಲ್ಲಿ ನಟಿಸಿದ್ದಾರೆ. ಒಂದು ರಾಧಾ, ಮತ್ತೊಂದು ಸೀತಾ. ಹಳ್ಳಿಯ ಹುಡುಗಿಯಾಗಿ ರಕ್ಷಿತ್ ಮನದನ್ನೆಯ ಪಾತ್ರ ಒಂದಾದರೆ, ಮತ್ತೊಂದು ‘ಲಾಲ್ ಸಲಾಂ’ ಘೋಷಣೆ ಕೂಗುತ್ತ  ಬಂದೂಕಿನ ನಳಿಕೆಯಿಂದ ಪಟಪಟನೆ ಗುಂಡು ಸಿಡಿಸುವ ನಕ್ಸಲ್‌ ಮಹಿಳೆಯ ಪಾತ್ರ. ಇದಿಷ್ಟು ಟ್ರೇಲರ್‌ನಲ್ಲಿ ಕಂಡಿದ್ದು.

‘ಇದು ತಮ್ಮ ಬದುಕಿನ ಅತ್ಯಮೂಲ್ಯ ಪಾತ್ರ’ ಎಂದು ಹರಿಪ್ರಿಯಾ ಹೇಳಿದರು. ‘ನಾನು ಬೇರೆ ಬೇರೆ ಭಾಷೆಗಳ ಚಿತ್ರ ನೋಡಿದ್ದೆ. ಅಲ್ಲಿನ ಕೆಲವು ನಾಯಕಿಯರ ಸತ್ವಯುತ ಪಾತ್ರಗಳನ್ನು ನಾನೂ ಮಾಡಬೇಕು ಎಂದುಕೊಂಡಿದ್ದೆ. ಆ ಆಸೆ ರಿಕ್ಕಿಯಲ್ಲಿ ಪೂರ್ಣಗೊಂಡಿತು’ ಎಂದು ತಮ್ಮ ಪಾತ್ರದ ಗಟ್ಟಿತನವನ್ನು ಅವರು ವಿಶ್ಲೇಷಿಸಿದರು.

ನಿರ್ದೇಶಕ ರಿಷಭ್ ಶೆಟ್ಟಿ 2009ರಲ್ಲಿ ‘ರಿಕ್ಕಿ’ಯ ಕಥೆ ಬರೆದಿದ್ದು, ಅದನ್ನು 16 ಆಯಾಮಗಳಲ್ಲಿ ಚಿತ್ರಕಥೆಯ ರೂಪಕ್ಕಿಳಿಸಿದ್ದರಂತೆ. ‘ಗಿಮಿಕ್ ಇಲ್ಲದೆ ನೀಟಾದ ನಿರೂಪಣೆಯ ಚಿತ್ರ’ ಎಂದು ತಮ್ಮ ಪ್ರಯತ್ನವನ್ನು ಬಣ್ಣಿಸುವ ಅವರು, ತಮ್ಮ ಮೊದಲ ಪ್ರಯತ್ನಕ್ಕೆ ಬಂಡವಾಳ ಹೂಡಿದ ನಿರ್ಮಾಪಕ ಎಸ್‌.ವಿ. ಬಾಬು ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಸಹ ನಟನರಾದ ಪ್ರಮೋದ್, ಮಂಜುನಾಥ ಗೌಡ ಅವರು, ಕಾರ್ಕಳದ ಕಾಡಿನಲ್ಲಿನ ಚಿತ್ರೀಕರಣದ ಅನುಭವಗಳನ್ನು ಚುಟುಕಾಗಿ ಹೇಳಿದರು. ‘ರಿಕ್ಕಿ’ ನವೆಂಬರ್‌ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆಯಂತೆ. ಕಾರ್ಯಕ್ರಮದಲ್ಲಿ ನಟಿ ವೀಣಾ ಸುಂದರ್, ನಿರ್ಮಾಪಕ ಎಸ್‌.ವಿ. ಬಾಬು, ಕಾರ್ಯಕಾರಿ ನಿರ್ಮಾಪಕ ಗಣೇಶ್, ಪತ್ರಕರ್ತೆ ಕೆ.ಎಚ್. ಸಾವಿತ್ರಿ ಹಾಗೂ ಸಂಭಾಷಣೆಕಾರ ಅನಿರುದ್ಧ್ ಮಾತನಾಡಿದರು.

Write A Comment