ಮನೋರಂಜನೆ

ಬಿಸಿಸಿಐ ನಾಯಕತ್ವ ಬಿಕ್ಕಟ್ಟುಜೇಟ್ಲಿ ಭೇಟಿಯಾದ ಠಾಕೂರ್, ಮನೋಹರ್

Pinterest LinkedIn Tumblr

2manoharಹೊಸದಿಲ್ಲಿ, ಸೆ.26: ಜಗಮೋಹನ್ ದಾಲ್ಮಿಯಾರ ನಿಧನದಿಂದ ತೆರವಾಗಿರುವ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡುವುದಕ್ಕೆ ಸಂಬಂಧಿಸಿ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಹಾಗೂ ಶರದ್ ಪವಾರ್ ಬಣದ ಉನ್ನತ ಅಧಿಕಾರಿಗಳು ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರನ್ನು ಶನಿವಾರ ಭೇಟಿ ಮಾಡಿದ್ದಾರೆ.
ಬಿಸಿಸಿಐ ನಾಯಕತ್ವಕ್ಕೆ ಸಂಬಂಧಿಸಿ ಉದ್ಭವಿಸಿರುವ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲು ಮಹತ್ವದ ಬೆಳವಣಿಗೆಯೊಂದರಲ್ಲಿ ಠಾಕೂರ್, ಬಿಸಿಸಿಐ ಮಾಜಿ ಅಧ್ಯಕ್ಷ ಶಶಾಂಕ್ ಮನೋಹರ್ ಹಾಗೂ ಮಾಜಿ ಖಜಾಂಚಿ ಅಜಯ್ ಶಿರ್ಕೆ ಗುರುವಾರ ರಾತ್ರಿ ಜೇಟ್ಲಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾದರು. ಬಿಸಿಸಿಐ ನಾಯಕತ್ವದ ಬಿಕ್ಕಟ್ಟಿಗೆ ಅಂತ್ಯ ಹಾಡುವ ಕುರಿತು ದೀರ್ಘ ಚರ್ಚೆ ನಡೆಸಿದರು.
ಬಿಸಿಸಿಐ ಮಾಜಿ ಅಧ್ಯಕ್ಷರುಗಳಾದ ಶರದ್ ಪವಾರ್ ಹಾಗೂ ಎನ್. ಶ್ರೀನಿವಾಸನ್ ನಡುವೆ ಮೈತ್ರಿ ಏರ್ಪಡಲಿದೆ ಎಂಬ ಸುದ್ದಿ ಹೊರಬೀಳುತ್ತಲೇ ಮೈಕೊಡವಿಕೊಂಡಿರುವ ಅನುರಾಗ್ ಠಾಕೂರ್ ಬಣ, ಪವಾರ್ ಬಣದ ಮುಖ್ಯ ಸದಸ್ಯರೊಂದಿಗೆ ಮಾತುಕತೆಗೆ ಮುಂದಾಗಿದ್ದಾರೆ.
ಎನ್. ಶ್ರೀನಿವಾಸನ್ ಬಣದ ವಿರೋಧಿಗಳಾಗಿರುವ ಮನೋಹರ್ ಹಾಗೂ ಶಿರ್ಕೆ ಗುರುವಾರ ಸಂಜೆ ಹೊಸದಿಲ್ಲಿಗೆ ತೆರಳಿ ಜೇಟ್ಲ್ಲಿಯವರನ್ನು ಭೇಟಿಯಾಗಿದ್ದಲ್ಲದೆ ಇತರ ಪ್ರಮುಖ ಬಿಸಿಸಿಐ ಅಧಿಕಾರಿಗಳೊಂದಿಗೂ ಚರ್ಚಿಸಿದ್ದಾರೆ.
‘‘ಹೌದು, ಜೇಟ್ಲ್ಲಿಯ ನಿವಾಸದಲ್ಲಿ ಸಭೆ ನಡೆದಿದೆ. ಮನೋಹರ್ ಹಾಗೂ ಶಿರ್ಕೆ ಬಿಸಿಸಿಐ ಪರಿಸ್ಥಿತಿಯ ಕುರಿತು ಜೇಟ್ಲಿ ಅವರಲ್ಲಿ ಚರ್ಚಿಸಿದ್ದಾರೆ. ಈ ವೇಳೆ ಠಾಕೂರ್ ಉಪಸ್ಥಿತರಿದ್ದರು’’ ಎಂದು ಬಿಸಿಸಿಐ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

ಪವಾರ್ ಅವರು ಶ್ರೀನಿವಾಸನ್ ಬಣದಿಂದ ದೂರ ಸರಿಯುವಂತೆ, ಅವರ ಮನವೊಲಿಸುವಂತೆ ಜೈಟ್ಲಿ ಹಾಗೂ ಠಾಕೂರ್ ಅವರು ಮನೋಹರ್ ಹಾಗೂ ಶಿರ್ಕೆಯವರನ್ನು ವಿನಂತಿಸಿದ್ದರು ಎಂದು ತಿಳಿದುಬಂದಿದೆ. ಕೇವಲ 6 ತಿಂಗಳ ಹಿಂದೆ ಶ್ರೀನಿ ಅವರನ್ನು ಬಿಸಿಸಿಐಯಿಂದ ಹೊರಗಿಡಲು ನಾವೆಲ್ಲರೂ ಹೋರಾಡಿದ್ದೇವೆ. ಇದೀಗ ಶ್ರೀನಿವಾಸನ್ ಬೆಂಬಲದೊಂದಿಗೆ ಪವಾರ್ ಬಿಸಿಸಿಐ ಅಧ್ಯಕ್ಷರಾಗುವುದು ಸರಿಯಲ್ಲ ಎಂದು ಮನೋಹರ್ ಹಾಗೂ ಶಿರ್ಕೆಗೆ ಮನವರಿಕೆ ಮಾಡಲಾಗಿದೆ ಎನ್ನಲಾಗಿದೆ. ಒಂದು ವೇಳೆ ಮನೋಹರ್ ಕೂಡ ಪವಾರ್ ಅವರಂತೆಯೇ ಬಿಸಿಸಿಐ ಅಧ್ಯಕ್ಷರಾಗಲು ನಿರಾಕರಿಸಿದರೆ ರಾಜೀವ್ ಶುಕ್ಲಾ ಅವಿರೋಧವಾಗಿ ಆಯ್ಕೆಯಾಗದೇ ಇದ್ದ ಸಂದರ್ಭದಲ್ಲಿ ಶಿರ್ಕೆಯವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಕುರಿತು ಚರ್ಚೆ ನಡೆದಿದೆ.
ಶಿರ್ಕೆ ಬಿಸಿಸಿಐನ ಓರ್ವ ಶ್ರೇಷ್ಠ ಖಜಾಂಚಿಯಾಗಿದ್ದರು. ಅವರು ಶುದ್ಧ ಹಸ್ತದ ಕ್ರೀಡಾಧಿಕಾರಿ. ಐಪಿಎಲ್ 2013ರ ಸ್ಪಾಟ್‌ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದಲ್ಲಿ ಶ್ರೀನಿವಾಸನ್ ಅಳಿಯ ಗುರುನಾಥ್ ಮೇಯಪ್ಪನ್ ಆರೋಪಿಯಾಗಿದ್ದರೂ ಶ್ರೀನಿ ರಾಜೀನಾಮೆ ನೀಡದ್ದನ್ನು ಪ್ರತಿಭಟಿಸಿ ಶಿರ್ಕೆ ತನ್ನ ಹುದ್ದೆಯನ್ನು ತ್ಯಜಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಮನೋಹರ್ ಬಿಸಿಸಿಐ ಅಧ್ಯಕ್ಷ?
ನಾಗ್ಪುರದ ವಕೀಲರಾದ ಶಶಾಂಕ್ ಮನೋಹರ್ ಎರಡನೆ ಬಾರಿ ಬಿಸಿಸಿಐ ಅಧ್ಯಕ್ಷರಾಗಲಿದ್ದಾರೆ ಎನ್ನಲಾಗಿದೆ. ಅನುರಾಗ್ ಠಾಕೂರ್ ಬಿಸಿಸಿಐ ಮಾಜಿ ಅಧ್ಯಕ್ಷ ಮನೋಹರ್ ಹಾಗೂ ಮಾಜಿ ಖಜಾಂಚಿ ಅಜಯ್ ಶಿರ್ಕೆ ಅವರೊಂದಿಗೆ ಗುರುವಾರ ರಾತ್ರಿ ಕೇಂದ್ರ ಸಚಿವ ಅರುಣ್‌ಜೈಟ್ಲಿ ಅವರನ್ನು ಭೇಟಿಯಾಗಿ ಬಿಸಿಸಿಐ ಅಧ್ಯಕ್ಷರ ಆಯ್ಕೆಯ ಕುರಿತು ಚರ್ಚಿಸಿದ್ದಾರೆ. ಈ ವೇಳೆ ಜೈಟ್ಲಿ ಅವರು ಮನೋಹರ್ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಪ್ರಸ್ತಾವಿಸಿದ್ದರು ಎಂದು ಮೂಲಗಳು ತಿಳಿಸಿವೆ. ‘‘ತಾನು ಈಗಾಗಲೇ ಬಿಸಿಸಿಐ ಅಧ್ಯಕ್ಷನಾಗಿ ಒಂದು ಇನಿಂಗ್ಸ್ ಆಡಿದ್ದೇನೆ. ಮತ್ತೊಮ್ಮೆ ಅಧ್ಯಕ್ಷನಾಗಲು ನನಗೆ ಇಷ್ಟವಿಲ್ಲ. ಬಿಸಿಸಿಐಗೆ ಅಗತ್ಯವಿರುವ ಸಲಹೆ ಸೂಚನೆ ನೀಡಲು ಸಿದ್ಧನಿದ್ದೇನೆ. ಪವಾರ್-ಶ್ರೀನಿವಾಸನ್ ಬಣದ ಮೈತ್ರಿಗೆ ತನ್ನ ವಿರೋಧವಿದೆ ಎಂದು ಮನೋಹರ್ ಉತ್ತರಿಸಿದ್ದಾರೆ ಎನ್ನಲಾಗಿದೆ.

Write A Comment