ಮನೋರಂಜನೆ

ಬರ್ಮುಡಾದಲ್ಲಿ ಕ್ರಿಕೆಟಿಗರ ಕಿತ್ತಾಟ; ಓರ್ವನಿಗೆ ಆಜೀವ ನಿಷೇಧ

Pinterest LinkedIn Tumblr

333bermuda-cricket-brawlಬರ್ಮುಡಾ, ಸೆ.22: ಕ್ರಿಕೆಟ್ ಮೈದಾನದಲ್ಲಿ ಆಟಗಾರರ ನಡುವೆ ವಾಗ್ವಾದ ಹಾಗೂ ಪರಸ್ಪರರನ್ನು ಕೆರಳಿಸುವ ಘಟನೆ ನಡೆಯುವುದು ಸರ್ವೇಸಾಮಾನ್ಯ. ಆಟಗಾರರು ಹಲವಾರು ಬಾರಿ ಪಂದ್ಯದ ನಿಯಮವನ್ನು ಮೀರಿ ಕೆಟ್ಟದಾಗಿ ವರ್ತಿಸಿದ್ದೂ ಇದೆ. ಆದರೆ, ಉಭಯ ತಂಡಗಳ ಆಟಗಾರರಿಬ್ಬರ ನಡುವೆ ಆರಂಭವಾದ ಮಾತಿನ ಚಕಮಕಿ ಹೊಡೆದಾಟದ ಹಂತಕ್ಕೆ ತಲುಪಿದ ಅಪರೂಪದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. 10 ದಿನಗಳ ಹಿಂದೆ ಸಣ್ಣ ದ್ವೀಪರಾಷ್ಟ್ರ ಬರ್ಮುಡಾದ ದೇಶೀಯ ಕ್ರಿಕೆಟ್ ಪಂದ್ಯವೊಂದರ ಮೈದಾನ ಕುಸ್ತಿಕಣವಾಗಿ ಮಾರ್ಪಟ್ಟ ಘಟನೆ ನಡೆದಿದೆ. ಮೈದಾನದೊಳಗೆ ಉಭಯ ತಂಡಗಳ ಆಟಗಾರರ ನಡುವೆ ನಡೆದ ಕಿತ್ತಾಟವನ್ನು ಬಿಡಿಸಲು ಬರ್ಮುಡಾ ಪೊಲೀಸರ ದಂಡೇ ಮೈದಾನದೊಳಗೆ ಬರಬೇಕಾಯಿತು. ಅಶಿಸ್ತಿನಿಂದ ವರ್ತಿಸಿರುವ ಓರ್ವ ಆಟಗಾರನಿಗೆ ಕ್ರಿಕೆಟ್‌ನಿಂದ ಆಜೀವ ನಿಷೇಧ ಹೇರಲಾಗಿದೆ. ಕ್ಲೇವ್‌ಲ್ಯಾಂಡ್ ಕ್ರಿಕೆಟ್ ಕ್ಲಬ್ ಹಾಗೂ ವಿಲ್ಲೊ ಕಟ್ಸ್ ಕ್ರಿಕೆಟ್ ಕ್ಲಬ್‌ನ ನಡುವೆ ಪಂದ್ಯ ನಡೆಯುತ್ತಿದ್ದಾಗ ಬರ್ಮುಡದ ಅಂತಾರಾಷ್ಟ್ರೀಯ ಆಟಗಾರ ಹಾಗೂ ವಿಕೆಟ್‌ಕೀಪರ್ ಜಾಸನ್ ಆ್ಯಂಡರ್ಸನ್ ಎದುರಾಳಿ ತಂಡದ ದಾಂಡಿಗ ಜಾರ್ಜ್ ಒ’ಬ್ರಿಯಾನ್‌ರೊಂದಿಗೆ ವಾಗ್ವಾದ ನಡೆಸಿದರು.

ಇವರಿಬ್ಬರ ನಡುವಿನ ವಾಕ್ಸಮರ ಕೈ-ಕೈ ಮಿಲಾಯಿಸುವ ಮಟ್ಟಕ್ಕೆ ಹೋಯಿತು. ಜಾರ್ಜ್ ಮೊದಲಿಗೆ ಆ್ಯಂಡರ್ಸನ್‌ರತ್ತ ಬ್ಯಾಟ್‌ನಿಂದ ಬೀಸಿದರು. ಇದರಿಂದ ಕೆರಳಿದ ಆ್ಯಂಡರ್ಸನ್ ಅವರು ಜಾರ್ಜ್ ರನ್ನು ನೆಲಕ್ಕೆ ಕೆಡವಿ ಕಾಲಿನಿಂದ ತಲೆಗೆ ಬಲವಾಗಿ ತುಳಿದರು. ತಕ್ಷಣವೇ ಮೈದಾನಕ್ಕೆ ಧಾವಿಸಿದ ಆಟಗಾರರು, ಅಧಿಕಾರಿಗಳು ಹಾಗೂ ಬರ್ಮುಡಾ ಪೊಲೀಸ್ ಅಧಿಕಾರಿಗಳು ಇಬ್ಬರೂ ಆಟಗಾರರನ್ನು ಸಮಾಧಾನ ಪಡಿಸಿದರು. ಕ್ಲೇವ್‌ಲ್ಯಾಂಡ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಕಾರ್ಲ್ಟ್‌ನ್ ಸ್ಮಿತ್ ಅವರು ವಿಕೆಟ್‌ಕೀಪರ್ ಆ್ಯಂಡರ್ಸನ್‌ಗೆ ಮೈದಾನದಿಂದ ಹೊರ ನಡೆಯುವಂತೆ ಸೂಚಿಸಿದರು. ನಂತರ ಪಂದ್ಯವನ್ನು ಮುಂದುವರಿಸಲಾಗಿದ್ದು, ಕ್ಲೇವ್‌ಲ್ಯಾಂಡ್ ಕ್ಲಬ್ ಪಂದ್ಯವನ್ನು 72 ರನ್‌ಗಳಿಂದ ಗೆದ್ದುಕೊಂಡಿತು.
ವೀಡಿಯೊ ತುಣಕನ್ನು ವೀಕ್ಷಿಸಿದ ಬರ್ಮುಡಾ ಕ್ರಿಕೆಟ್ ಮಂಡಳಿ ಹಾಗೂ ಕ್ಲೇವ್‌ಲ್ಯಾಂಡ್ ಕೌಂಟಿ ಕ್ಲಬ್ ಆ್ಯಂಡರ್ಸನ್ ನೀತಿ ಸಂಹಿತೆಯ ಲೆವಲ್4ನ್ನು ಉಲ್ಲಂಘಿಸಿದ್ದನ್ನು ಪರಿಗಣಿಸಿ ಬರ್ಮುಡಾ ತಂಡದಲ್ಲಿ ಕ್ರಿಕೆಟ್ ಆಡದಂತೆ ಆಜೀವ ನಿಷೇಧ ವಿಧಿಸಿತು. ನೀತಿ ಸಂಹಿತೆ ಲೆವಲ್-3ನ್ನು ಉಲ್ಲಂಘಿಸಿದ್ದ ಒ’ಬ್ರಿಯಾನ್‌ಗೆ ಎಲ್ಲ ಕ್ರಿಕೆಟ್‌ನಿಂದ ಆರು ತಿಂಗಳ ಕಾಲ ನಿಷೇಧ ಹೇರಲಾಗಿದೆ.

‘‘ಜಾಸನ್ ಕ್ಯಾಚ್ ಕೈಚೆಲ್ಲಿ ಸ್ಟಂಪಿಂಗ್ ನಡೆಸುವ ಅವಕಾಶ ಕೈತಪ್ಪಿದ್ದಕ್ಕೆ ನಿರಾಸೆಗೊಂಡಿದ್ದರು. ಒ’ಬ್ರಿಯಾನ್ ಹಾಗೂ ಜಾಸನ್ ನಡುವಿನ ಜಗಳಕ್ಕೆ ಕಾರಣವೇನೆಂದು ನನಗೆ ಗೊತ್ತಾಗಲಿಲ್ಲ. ನಾನು ಮತ್ತೊಂದು ತುದಿಯಲ್ಲಿ ಬೌಲಿಂಗ್ ಮಾಡುತ್ತಿದ್ದೆ’’ ಎಂದು ಕ್ಲೇವ್‌ಲ್ಯಾಂಡ್ ಕೌಂಟಿ ತಂಡದ ನಾಯಕ ಅಲನ್ ಡೌಗ್ಲಾಸ್ ಹೇಳಿದ್ದಾರೆ.

Write A Comment