ಹೊಸದಿಲ್ಲಿ, ಸೆ.22: ಹಿರಿಯ ಕ್ರೀಡಾ ಆಡಳಿತಗಾರ ಜಗಮೋಹನ್ ದಾಲ್ಮಿಯಾರ ಹಠಾತ್ ನಿಧನದಿಂದ ಬಿಸಿಸಿಐ ಒಡೆದ ಮನೆಯಾಗಿದ್ದು, ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಉತ್ತರ ವಲಯ ನಿರ್ಧರಿಸಿದೆ. ಪೂರ್ವ ವಲಯ ಘಟಕದ ಜೊತೆ ಕಾರ್ಯದರ್ಶಿ ಜಾರ್ಖಂಡ್ನ ಅಮಿತಾಭ್ ಚೌಧರಿಯನ್ನು ಬಿಸಿಸಿಐ ಅಧ್ಯಕ್ಷ ಹುದ್ದೆಗೆ ಅಭ್ಯರ್ಥಿಯನ್ನಾಗಿಸುವ ಸಾಧ್ಯತೆಯಿದೆ.
ಶರದ್ ಪವಾರ್ ಹಾಗೂ ರಾಜೀವ್ ಶುಕ್ಲಾರ ಹೆಸರೂ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಕೇಳಿಬರುತ್ತಿದೆ. ಆದರೆ, ಈ ಇಬ್ಬರೂ ವೃತ್ತಿಯಲ್ಲಿ ರಾಜಕಾರಣಿಗಳಾಗಿದ್ದು, ಇಬ್ಬರಿಗೂ ಈ ಹುದ್ದೆಯನ್ನು ನಿಭಾಯಿಸುವುದು ಕಷ್ಟವಾಗಬಹುದು.
ಪೂರ್ವ ವಲಯವು ಬಂಗಾಳ, ಅಸ್ಸಾಂ, ಜಾರ್ಖಂಡ್, ಒಡಿಶಾ, ತ್ರಿಪುರಾ ಹಾಗೂ ನ್ಯಾಶನಲ್ ಕ್ರಿಕೆಟ್ ಕ್ಲಬ್(ಎನ್ಸಿಸಿ) ಸಹಿತ ಒಟ್ಟು ಆರು ಮತಗಳನ್ನು ಹೊಂದಿದೆ.
ಒಂದು ವೇಳೆ ಶುಕ್ಲಾ ಇಲ್ಲವೇ ಪವಾರ್ ಸ್ಪರ್ಧೆಗೆ ಧುಮುಕಿದರೆ ಬಿಸಿಸಿಐ ಅಧ್ಯಕ್ಷರು ಅವಿರೋಧ ಆಯ್ಕೆಯ ಬದಲಿಗೆ ಚುನಾವಣೆ ನಡೆಯುವ ಸಾಧ್ಯತೆಯೇ ಅಧಿಕವಿದೆ.
ಐಸಿಸಿ ಹಾಗೂ ಬಿಸಿಸಿಐನ ಮಾಜಿ ಅಧ್ಯಕ್ಷ ಪವಾರ್ಗೆ ಕನಿಷ್ಠ 16 ಮತಗಳು ಲಭಿಸುವುದು ಖಾತ್ರಿಯಾದರೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಬಹುದು. ಚಾಣಾಕ್ಷ ರಾಜಕಾರಣಿಯಾಗಿರುವ ಪವಾರ್ ದಿಟ್ಟ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆಯಿದೆ.
ಬಿಸಿಸಿಐ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಒಟ್ಟು 30 ಮತಗಳ ಪೈಕಿ 10 ಮತಗಳ ಮೇಲೆ ಹಿಡಿತ ಹೊಂದಿದ್ದು ಬಿಸಿಸಿಐ ಅಧ್ಯಕ್ಷರ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚೌಧರಿ ಶ್ರೀನಿವಾಸನ್ರ ಆಪ್ತರಾಗಿದ್ದು, ಪೂರ್ವ ವಲಯದಲ್ಲಿ ಶ್ರೀನಿಗೆ ಅಸ್ಸಾಂ, ಬಂಗಾಳ, ಒಡಿಶಾ ಹಾಗೂ ಜಾರ್ಖಂಡ್ನ ಬೆಂಬಲವಿದೆ. ನೂತನ ಅಧ್ಯಕ್ಷರ ಆಯ್ಕೆಗೆ ಬಿಸಿಸಿಐ 15 ದಿನಗಳಲ್ಲಿ ವಿಶೇಷ ಸಭೆ ಕರೆಯಲು ನಿರ್ಧರಿಸಿದೆ. ಸಭೆಯಲ್ಲಿ ಶ್ರೀನಿವಾಸನ್ ಭಾಗವಹಿಸುವ ವಿಚಾರ ದೃಢಪಟ್ಟಿಲ್ಲ. ‘‘ಪೂರ್ವ ವಲಯ ರಾಜ್ಯಗಳು ತಮ್ಮ ವಲಯದವರೇ ಬಿಸಿಸಿಐ ಅಧ್ಯಕ್ಷರಾಗಲು ಬಯಸಿವೆ. ಅಮಿತಾಭ್ ಚೌಧರಿ ಈ ಹುದ್ದೆಗೆ ಸೂಕ್ತ ಅಭ್ಯರ್ಥಿಯಾಗಿದ್ದಾರೆ. ಅವರು ಐಪಿಎಸ್ ಅಧಿಕಾರಿಯಾಗಿದ್ದು, ಉತ್ತರ ವಲಯದ ಕನಿಷ್ಠ 4 ವಲಯಗಳು ಚೌಧರಿಯ ಬೆಂಬಲಕ್ಕೆ ನಿಂತಿವೆ. ನಾವು 2017ರ ತನಕ ಅಧ್ಯಕ್ಷ ಸ್ಥಾನದಲ್ಲಿರಲು ಬಯಸಿದ್ದೇವೆ. ಪವಾರ್, ಸಿಎಬಿ ಹಾಗೂ ಎನ್ಸಿಸಿ(ದಾಲ್ಮಿಯಾ ಕುಟುಂಬದ ಕ್ಲಬ್) ಚುನಾವಣೆಯಲ್ಲಿ ಸ್ಪರ್ಧಿಸಿದರೆ ಅವರಿಗೆ ನಮ್ಮ ಬೆಂಬಲ ಇರುವುದಿಲ್ಲ’’ ಎಂದು ಪೂರ್ವ ವಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.