ಬೆಂಗಳೂರು, ಸೆ.21: ಮುಂದಿನ ತಿಂಗಳು ದಕ್ಷಿಣ ಆಫ್ರಿಕ ವಿರುದ್ಧ ಆರಂಭ ವಾಗಲಿರುವ ಟ್ವೆಂಟಿ-20 ಸರಣಿಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವುದಕ್ಕೆ ಕರ್ನಾಟಕದ ವೇಗದ ಬೌಲರ್ ಶ್ರೀನಾಥ್ ಅರವಿಂದ್ ಸಂತೋಷ ವ್ಯಕ್ತ ಪಡಿಸಿದ್ದಾರೆ.
‘‘ನಾನು ರವಿವಾರ ಬಾಂಗ್ಲಾದೇಶ ‘ಎ’ತಂಡದ ವಿರುದ್ಧ ಬೌಲಿಂಗ್ ಮಾಡಿ ಮರಳಿದಾಗ ಸಹ ಆಟಗಾರರೆಲ್ಲರೂ ನನಗೆ ಅಭಿನಂದನೆ ಸಲ್ಲಿಸಿದರು. ನನ್ನ ಬೌಲಿಂಗ್ ಬಗ್ಗೆ ಖುಷಿಯಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಭಾವಿಸಿದ್ದೆ. ನಂತರ ನನಗೆ ಕಾರಣವೇನೆಂದು ತಿಳಿಯಿತು’’ ಎಂದು ಅರವಿಂದ್ ಹೇಳಿದ್ದಾರೆ.
31ರ ಹರೆಯದ ಎಡಗೈ ವೇಗಿ ಅರವಿಂದ್ ಎರಡನೆ ಬಾರಿ ಟೀಮ್ ಇಂಡಿಯಾಕ್ಕೆ ಪ್ರವೇಶ ಪಡೆದಿದ್ದಾರೆ. 2011ರಲ್ಲಿ ಇಂಗ್ಲೆಂಡ್ ವಿರುದ್ಧದ ಸ್ವದೇಶಿ ಟೆಸ್ಟ್ ಸರಣಿಯಲ್ಲಿ ತಂಡ್ಕೆ ಆಯ್ಕೆಯಾಗಿರುವ ಅರವಿಂದ್ ಆಡುವ ಅಂತಿಮ 11ರ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದರು. ಆದರೆ, ಈ ಬಾರಿ ಅರವಿಂದ್ ತಂಡದಲ್ಲಿ ಆಡುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
‘‘ಒಂದು ವೇಳೆ ನನಗೆ ಈ ಬಾರಿ ಆಡಲು ಅವಕಾಶ ಲಭಿಸಿದರೆ ನಿಜವಾಗಿಯೂ ರೋಮಾಂಚನವಾಗಲಿದೆ’’ ಎಂದು ಅರವಿಂದ್ ನುಡಿದರು.