ಕೋಲ್ಕತಾ, ಸೆ.20: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಬಿಸಿಸಿಐ ಹಾಲಿ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ(75) ರವಿವಾರ ರಾತ್ರಿ ನಿಧನರಾಗಿದ್ದಾರೆ.
ದಾಲ್ಮಿಯಾ ಎದೆ ನೋವು ಹಾಗೂ ಉಸಿರಾಟದ ತೊಂದರೆ ಯಿಂದ ಗುರುವಾರ ರಾತ್ರಿ ಇಲ್ಲಿನ ಬಿ.ಎಂ. ಬಿರ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ನಿಗಾ ಘಟಕದಲ್ಲಿದ್ದ ದಾಲ್ಮಿಯಾ ರವಿವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು. ಐಸಿಯುನಲ್ಲಿದ್ದ ದಾಲ್ಮಿಯಾಗೆ ಶಸ್ತ್ರಚಿಕಿತ್ಸೆ ನಡೆಸುವಂತೆ ವೈದ್ಯರು ಸಲಹೆ ನೀಡಿದ್ದರು.
ಕಳೆದ 36 ವರ್ಷಗಳ ಕಾಲ ಬಿಸಿಸಿಐನಲ್ಲಿ ಹಲವು ಹುದ್ದೆಗಳನ್ನು ನಿಭಾಯಿಸಿದ್ದ ದಾಲ್ಮಿಯಾ ಕಳೆದ ಮಾರ್ಚ್ನಲ್ಲಿ ಎನ್.ಶ್ರೀನಿವಾಸನ್ ಪದಚ್ಯುತಿಯಿಂದ ತೆರವಾಗಿದ್ದ ಸ್ಥಾನಕ್ಕೆ ಬಿಸಿಸಿಐ ಅಧ್ಯಕ್ಷರಾಗಿ 2ನೆ ಬಾರಿ ಆಯ್ಕೆಯಾಗಿದ್ದರು.
ಚಾಣಾಕ್ಷ ಕ್ರೀಡಾಧಿಕಾರಿಯಾಗಿದ್ದ ದಾಲ್ಮಿಯಾ 1983ರಲ್ಲಿ ಬಿಸಿಸಿಐ ಖಜಾಂಚಿಯಾದ ನಂತರ 1987 ಹಾಗೂ 1996ರಲ್ಲಿ ಭಾರತದಲ್ಲಿ ಐಸಿಸಿ ವಿಶ್ವಕಪ್ ಆಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. 1997ರಲ್ಲಿ ಐಸಿಸಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಭಾರತದ ಮಾಜಿ ನಾಯಕ ಸೌರವ್ ಗಂಗುಲಿಯ ಕಟ್ಟಾ ಬೆಂಬಲಿಗರಾಗಿದ್ದ ದಾಲ್ಮಿಯಾ ಭಾರತದ ಕ್ರಿಕೆಟ್ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವಹಿಸಿದ್ದರು.