‘ಬಾಹುಬಲಿಗೂ ನಮ್ಮ ಸಿನಿಮಾಕ್ಕೂ ಹೋಲಿಕೆ ಮಾಡಬೇಡಿ ಪ್ಲೀಸ್…’ ಎಂದು ಕೈಮುಗಿದು ಕೇಳಿಕೊಂಡರು, ನಾಯಕ ನಟ ಧನಂಜಯ್. ಅವರ ಈ ಮನವಿಗೆ ಕಾರಣವೂ ಇತ್ತು. ‘ವಿಜಯಾದಿತ್ಯ’ದಲ್ಲಿ ಬರುವ ಯುದ್ಧದ ಸನ್ನಿವೇಶಗಳನ್ನು ‘ಬಾಹುಬಲಿ’ಯಂತೆ ಚಿತ್ರಿಸಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದ ಹಿನ್ನೆಲೆ ಆ ಮಾತಿನ ಹಿಂದೆ ಇತ್ತು.
ಒಂದು ಹಂತದವರೆಗೆ ಸಿನಿಮಾ ಕೆಲಸ ಮುಗಿದ ಮೇಲೆಯೇ ಸುದ್ದಿಗಾರರ ಮುಂದೆ ಬರುವ ಉದ್ದೇಶ ನಿರ್ದೇಶಕ ನಿರ್ಭಯ್ ಚಕ್ರವರ್ತಿ ಅವರದು. ಹೀಗಾಗಿ, ಚಿತ್ರದ ಕೆಲಸ ಒಂದು ಹಂತಕ್ಕೆ ಬಂದ ಮೇಲೆಯೇ ಪತ್ರಕರ್ತರಿಗೆ ಮುಖಾಮುಖಿಯಾಗಿದ್ದರು. ಇದೇ ನೆಪದಲ್ಲಿ, ಅದ್ದೂರಿಯಾಗಿ ಟ್ರೈಲರ್ ಕೂಡ ಬಿಡುಗಡೆ ಮಾಡಲಾಯಿತು. ಸಮಕಾಲೀನ ಹಾಗೂ ಐತಿಹಾಸಿಕ ಅಂಶಗಳನ್ನು ಬೆರೆಸಿ ರಚಿಸಿದ ಚಿತ್ರಕಥೆ ಇದು ಎಂದು ನಿರ್ಭಯ್ ಹೇಳಿಕೊಂಡರು.
ಮೂರು ವರ್ಷಗಳಷ್ಟು ಹಿಂದಿನಿಂದಲೇ ಸಿನಿಮಾದ ಕೆಲಸ ಆರಂಭವಾಗಿದೆ. ಈಗಾಗಲೇ ಚಿತ್ರದುರ್ಗ, ಐಹೊಳೆ, ಪಟ್ಟದಕಲ್ಲು ಮುಂತಾದ ಕಡೆಗಳಲ್ಲಿ ಶೂಟಿಂಗ್ ನಡೆಸಲಾಗಿದೆ. ‘ಒಟ್ಟು 41 ದಿನಗಳ ಕಾಲ ನಡೆದ ಚಿತ್ರೀಕರಣದಲ್ಲಿ ಯುದ್ಧದ ಸನ್ನಿವೇಶಗಳನ್ನೂ ಸೆರೆಹಿಡಿಯಲಾಗಿದೆ. ಅದಕ್ಕೀಗ ಗ್ರಾಫಿಕ್ ಸ್ಪರ್ಶ ಕೊಡಲಾಗುತ್ತಿದೆ’ ಎಂಬ ಮಾಹಿತಿ ಅವರಿಂದ ಸಿಕ್ಕಿತು.
ಸಮರದ ದೃಶ್ಯಗಳೇ ಸಿನಿಮಾದ ಹೈಲೈಟ್ ಅಂತೆ. ನಾನ್ನೂರು ಜನರನ್ನು ಯದ್ಧದಲ್ಲಿ ಪಾತ್ರಧಾರಿಗಳಾಗಿ ಬಳಸಿಕೊಂಡಿದ್ದಾರೆ. ಅದನ್ನು ಹತ್ತಾರು ಪಟ್ಟು ಮಾಡುವ ಕೆಲಸ ಗ್ರಾಫಿಕ್ಸ್ ತಂಡದ್ದು. ಮುಂಬೈ– ಹೈದರಾಬಾದಿನ ತಂತ್ರಜ್ಞರಿಗೆ ಈ ಹೊಣೆ ವಹಿಸಲಾಗಿದೆ. ಒಟ್ಟು ನೂರು ಜನರು ಆರು ತಿಂಗಳಿನಿಂದ ಸತತವಾಗಿ ಕೆಲಸ ಮಾಡುತ್ತಿದ್ದಾರೆ.
‘ಎರಡು ವರ್ಷದ ಹಿಂದೆ ನಿರ್ಭಯ್ ನನಗೆ ಚಿತ್ರಕಥೆ ಹೇಳಿದ್ದರು. ನಾನು ಓಕೆ ಅಂದಿದ್ದೆ. ಆದರೆ ಸಿನಿಮಾ ತಯಾರಿಗೇ ಇಷ್ಟೊಂದು ಸಮಯ ಬೇಕಾಯಿತು’ ಎಂದು ಧನಂಜಯ್ ಹೇಳಿದರು. ಪಾತ್ರಕ್ಕೆ ಬೇಕಾಗುವಂತೆ ಕತ್ತಿ ವರಸೆ, ದೊಣ್ಣೆ ವರಸೆ ಹಾಗೂ ಕುದುರೆ ಸವಾರಿಯನ್ನು ಅವರು ಕಲಿತಿದ್ದಾರಂತೆ. ಇದಕ್ಕಾಗಿ ಆರು ತಿಂಗಳು ತೆಗೆದುಕೊಂಡಿದ್ದನ್ನೂ, ಕುದುರೆಯಿಂದ ಬಿದ್ದು ವಿಶ್ರಾಂತಿ ಪಡೆದಿದ್ದನ್ನೂ ಅವರು ಹೇಳಿಕೊಂಡರು. ಸೂಪರ್ ಮಾಡೆಲ್ ಆಗಿ ಪಾರುಲ್ ಯಾದವ್ ಕಾಣಿಸಿ ಕೊಳ್ಳುತ್ತಿದ್ದಾರೆ. ಗ್ಲಾಮರ್ ಹುಡುಗಿಯಾಗಿ ಕಾವ್ಯಾ ಶೆಟ್ಟಿ ಅಭಿನಯಿಸುತ್ತಿದ್ದಾರೆ.
ಮೂರು ಹಾಡುಗಳಿಗೆ ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ವಸ್ತ್ರವಿನ್ಯಾಸಕ್ಕೆಂದು ದೆಹಲಿಯ ಫ್ಯಾಷನ್ ಡಿಸೈನರ್ ಪ್ರೀತಿ ಕಪೂರ್ ಅವರನ್ನು ಕರೆಸಲಾಗಿದೆ. ಚಕ್ರವರ್ತಿ ಚಂದ್ರಚೂಡ ಸಂಭಾಷಣೆ ಬರೆದಿದ್ದಾರೆ. ಐಟಿ ಉದ್ಯಮದಿಂದ ಬಂದಿರುವ ಪ್ರಕಾಶ್ ಹಾಗೂ ಇಂದೂಧರ ಚಿತ್ರಕ್ಕೆ ಹತ್ತು ಕೋಟಿ ರೂಪಾಯಿ ಬಂಡವಾಳ ಹಾಕಿದ್ದಾರೆ.