ಮನೋರಂಜನೆ

‘ಮುಂಗಾರಿನ ಸಂಜೆ’ಯಲಿ ಲವ್‌ಸ್ಟೋರಿ!

Pinterest LinkedIn Tumblr

crec28MUNGARINA_0ಮುಂಗಾರು ಹೆಸರನ್ನು ಅಂಟಿಸಿಕೊಂಡ ಮತ್ತೊಂದು ಸಿನಿಮಾ ಗಾಂಧಿನಗರದಲ್ಲಿ ಸುದ್ದಿಯಲ್ಲಿದೆ. ‘ಮುಂಗಾರಿನ ಸಂಜೆ’ ಶೀರ್ಷಿಕೆಯ ಈ ಚಿತ್ರದ ನಿರ್ದೇಶಕ ವೆಸ್ಲಿ ಬ್ರೌನ್. ‘ಮೊದಲ ಮಿಂಚು’ ಚಿತ್ರದಲ್ಲಿ ನಿರ್ದೇಶನವೂ ಸೇರಿದಂತೆ ಹನ್ನೆರಡು ವಿಭಾಗಗಳನ್ನು ನಿರ್ವಹಿಸಿದ್ದ ಖ್ಯಾತಿಯ ವೆಸ್ಲಿ ಈಗ ಮುಂಗಾರಿನ ಜಪದಲ್ಲಿದ್ದಾರೆ.

ಈ ಚಿತ್ರ ಸೆಪ್ಟೆಂಬರ್‌ನಿಂದ ಚಿತ್ರೀಕರಣ ಆರಂಭಿಸಲಿದೆ. ಚಿತ್ರೀಕರಣದಲ್ಲಿರುವ ಅವರದ್ದೇ ಚಿತ್ರ ‘ಮತ್ತೆ ಶ್’ಗೆ ಬಂಡವಾಳ ಹೂಡಿರುವ ಚಿಕ್ಕೋಡಿಯ ದಯಾನಂದ್ ಮಠಪತಿ ಅವರೇ ‘ಮುಂಗಾರಿನ ಸಂಜೆ’ಗೂ ಹಣ ಹೊಂದಿಸುತ್ತಿದ್ದಾರೆ.

‘ಶೇ 95ರಷ್ಟು ಚಿತ್ರೀಕರಣವನ್ನು ಮಳೆ ಮತ್ತು ಸಂಜೆಯ ಹಿನ್ನೆಲೆಯಲ್ಲಿ ಮಾಡಬೇಕು ಎಂದುಕೊಂಡಿದ್ದೇನೆ. ಇದಕ್ಕಾಗಿ ವಿಶೇಷ ಕ್ಯಾಮೆರಾ ಬಳಸಿಕೊಳ್ಳಲಾಗುವುದು. ಈ ಚಿತ್ರಕ್ಕಾಗಿ ಮೂರ್ನಾಲ್ಕು ನಟರನ್ನು ಭೇಟಿಯಾದೆ. ಅವರೆಲ್ಲ ಕಥೆ ಕೇಳುವುದಕ್ಕಿಂತ ಮೊದಲು ಎಷ್ಟು ಸಂಭಾವನೆ ಕೊಡುತ್ತೀಯಾ ಎಂದರು.

ಕೆಲವರು ಕಥೆಯನ್ನೇ ಕೇಳಲಿಲ್ಲ. ‘ಮುಂಗಾರಿನ ಸಂಜೆ’ಯ ನಾಯಕ ರಘು ಮುಖರ್ಜಿ ಹಣಕ್ಕಿಂತ ಮೊದಲು ಕಥೆ ಹೇಳಿ, ಇಷ್ಟವಾದರೆ ಒಪ್ಪಿಕೊಳ್ಳುವೆ ಎಂದರು’– ಹೀಗೆ ತಮ್ಮ ಚಿತ್ರದ ನಾಯಕ ಶೋಧದ ವಿಷಯವನ್ನು ವೆಸ್ಲಿ ಬಣ್ಣಿಸಿದರು. ಸೆಪ್ಟೆಂಬರ್‌ನಲ್ಲಿ ಚಿತ್ರೀಕರಣ ಆರಂಭಿಸಿ ಡಿಸೆಂಬರ್‌ನಲ್ಲಿ ಚಿತ್ರವನ್ನು ತೆರೆಗೆ ತರುವ ಯೋಚನೆ ವೆಸ್ಲಿ ಅವರದು. ನೇಪಾಳ, ಗುಜರಾತ್, ಮಂಗಳೂರು, ಮಾಲ್ಡಿವ್ಸ್ ಮತ್ತಿತರ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆಯಂತೆ.

ನಾಯಕ ರಘು ಮುಖರ್ಜಿ ಇಲ್ಲಿ ರಫ್ ಅಂಡ್ ಟಫ್ ಪಾತ್ರದಲ್ಲಿ ನಟಿಸುವರಂತೆ. ‘ಮನಸ್ಸಿನಲ್ಲಿದ್ದದ್ದನ್ನು ನೇರವಾಗಿ ಹೇಳುವ ಪಾತ್ರ ನನ್ನದು. ಇದು ಲವ್ ಸ್ಟೋರಿ ಎನ್ನುವುದನ್ನು ಶೀರ್ಷಿಕೆಯೇ ಹೇಳುತ್ತದೆ. ಪಾತ್ರದ ಬಗ್ಗೆ ಆಸಕ್ತವಾಗಿಯೇ ಈ ಕಥೆ ಒಪ್ಪಿದೆ’ ಎಂದವರು ರಘು. ರಘು ಅವರಿಗೆ ನಾಯಕಿಯಾಗಿ ಪೃಥ್ವಿ ನಕ್ಷತ್ರಾ ಅಭಿನಯಿಸುತ್ತಿದ್ದಾರೆ. ಮೂಲತಃ ಮಂಗಳೂರಿನ ಈ ಹುಡುಗಿಯ ಮೊದಲ ಚಿತ್ರ ಇದು.

‘ಮತ್ತೆ ಶ್’ನಿಂದ ನಿರ್ಮಾಪಕರಾಗಿರುವ ದಯಾನಂದ್ ಮಠಪತಿ, ನಿರ್ದೇಶಕರ ಮೇಲಿನ ವಿಶ್ವಾಸವೇ ಅವರ ಜತೆ ಎರಡನೆ ಚಿತ್ರ ಮಾಡಲು ಕಾರಣ ಎಂದರು. ಅಭಿಷೇಕ್ ಮತ್ತು ಜುಯೋಲ್ ಸಂಗೀತ, ವಿನಾಯಕರಾಮ್ ಕಲಗಾರು ಸಂಭಾಷಣೆ, ಸುರೇಶ್ ಅರಸ್ ಸಂಕಲನ ಚಿತ್ರಕ್ಕಿದೆ.

Write A Comment